Advertisement
ಜಿಲೇಬಿ (Jalebi)ಬೇಕಾಗುವ ಸಾಮಗ್ರಿಗಳು
ಸಕ್ಕರೆ-2ಕಪ್, ಮೈದಾ ಹಿಟ್ಟು-2ಕಪ್, ಮೊಸರು-ಅರ್ಧ ಕಪ್, ಅಡುಗೆ ಸೋಡಾ-ಸ್ವಲ್ಪ, ಲಿಂಬೆರಸ-1ಚಮಚ,ಏಲಕ್ಕಿ ಪುಡಿ-ಅರ್ಧ ಟೀಸ್ಪೂನ್,ತುಪ್ಪ-2ಚಮಚ, ಕೇಸರಿ ಕಲರ್-ಸ್ವಲ್ಪ, ಕರಿಯಲು ಎಣ್ಣೆ, ಕೇಸರಿ ದಳ-ಸ್ವಲ್ಪ, ಪಿಸ್ತಾ(ಅಲಂಕಾರಕ್ಕೆ).
ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟನ್ನು ಹಾಕಿ,ಅದಕ್ಕೆ ಅರ್ಧಕಪ್‌ನಷ್ಟು ಮೊಸರು,ಕೇಸರಿ ಕಲರ್,ಅಡುಗೆ ಸೋಡಾ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಸ್ವಲ್ಪ-ಸ್ವಲ್ಪ ನೀರನ್ನು ಸೇರಿಸುತ್ತ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿಕೊಳ್ಳಿ.ಸುಮಾರು 7 ರಿಂದ 8 ಗಂಟೆಗಳ ಕಾಲ ಇರಿಸಿ.
ನಂತರ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಸಕ್ಕರೆ ಮತ್ತು ನೀರನ್ನು ಹಾಕಿ ಕುದಿಸಬೇಕು. ಸಕ್ಕರೆಯು ಕರಗಿ ಕುದಿಯುವಾಗ ಲಿಂಬೆರಸ,ಏಲಕ್ಕಿ ಪುಡಿ ಹಾಗೂ ಕೇಸರಿ ದಳವನ್ನು ಹಾಕಿ ಅಂಟಿನ ಹದಕ್ಕೆ ಪಾಕವನ್ನು ಮಾಡಿಕೊಳ್ಳಿ. ತದನಂತರ ಒಲೆಯ ಮೇಲೆ ಅಗಲವಾದ ಬಾಣಲೆಯಿಟ್ಟು ಅದಕ್ಕೆ ಎಣ್ಣೆಯನ್ನು ಹಾಕಿ,ಕಾದಮೇಲೆ ಮಾಡಿಟ್ಟ ಹಿಟ್ಟನ್ನು ಸ್ಟೀಲ್ ತಂಬಿಗೆಗೆ ಹಾಕಿ (ಮಧ್ಯ ಭಾಗದಲ್ಲಿ ಸಣ್ಣ ರಂದ್ರ ಮಾಡಿಟ್ಟ) ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.
ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ಮೊದಲೇ ಮಾಡಿಟ್ಟ ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಅದ್ದಿ ತೆಗೆಯಿರಿ. ಪಿಸ್ತಾದಿಂದ ಜಿಲೇಬಿಯನ್ನು ಅಲಂಕರಿಸಿ ಸವಿಯಿರಿ. -ಶ್ರೀರಾಮ್ ಜಿ . ನಾಯಕ್