Advertisement

ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ

12:33 AM Nov 09, 2024 | Team Udayavani |

ಬೆಂಗಳೂರು: ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಇಲಾಖೆಯು ಕೇರಳದಲ್ಲಿ ತಯಾರಿಸಿ, ಕರ್ನಾಟಕದ ಗಡಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ 90 ಬಗೆಯ ಕುರುಕಲು ತಿಂಡಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 31 ಮಾದರಿಗಳು ಸೇವಿಸಲು ಅಸುರಕ್ಷಿತ ಎನ್ನುವುದು ದೃಢವಾಗಿದೆ.

Advertisement

ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯು 3 ತಿಂಗಳುಗಳಿಂದ ಕೇರಳ ರಾಜ್ಯದಲ್ಲಿ ತಯಾರಿಸಲ್ಪಟ್ಟು ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರ ಮಿಕ್ಸರ್‌, ಚಿಪ್ಸ್‌, ಹಲ್ವಾ, ಮುರುಕು, ಒಣ ಹಣ್ಣು ಸಹಿತ ವಿವಿಧ ಸಿಹಿ ತಿಂಡಿಗಳ ಸುಮಾರು 90 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು.

ಅವುಗಳಲ್ಲಿ ಸುಮಾರು 31 ಮಾದರಿಗಳು ಅಸುರಕ್ಷಿತ ಎನ್ನುವುದು ದೃಢವಾ ಗಿದೆ. ಇದರಲ್ಲಿ ಸನ್‌ಸೆಟ್‌ ಯೆಲ್ಲೋ, ಅಲ್ಲೂರ ರೆಡ್‌, ಅಜೋರುಬಿನ್‌, ಟಾಟ್ರಾìಜಿನ್‌ ಮತ್ತಿತರ ಕೃತಕ ಬಣ್ಣಗಳನ್ನು ಬಳಸಿರುವುದು ದೃಢವಾಗಿದೆ.

ಇತರ ಜಿಲ್ಲೆಗಳಿಗೂ ಸರಬರಾಜು ಶಂಕೆ
ಕೊಡಗು ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ, ಬೆಂಗಳೂರು ಸೇರಿ ಇತರ ಜಿಲ್ಲೆಗಳಿಗೂ ಕೇರಳದ ಈ ಚಿಪ್ಸ್‌ ಹಾಗೂ ಇತರ ಕುರುಕಲು ತಿಂಡಿ ಸರಬರಾಜು ಆಗುತ್ತಿದೆ. ಇವುಗಳ ಪರೀಕ್ಷೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ಅಸುರಕ್ಷಿತ ಮಾದರಿಗಳಲ್ಲಿ ಪತ್ತೆಯಾದ ಅಲ್ಲೂರ ರೆಡ್‌ ರಾಸಾಯನಿಕ ಅಂಶ ಮನುಷ್ಯನ ದೇಹ ಸೇರಿದರೆ ಅಲ್ಸರೇಟಿವ್‌ ಕೊಲೈಟಿಸ್‌ ಮತ್ತು ಕ್ರಾನ್ಸ್‌ ನಂತಹ ಕರುಳಿನ ಉರಿಯೂತ ಕಾಯಿಲೆಗಳಿಗೆ ಕಾರಣವಾಗಲಿದೆ.

ಕಾನೂನು ಕ್ರಮಕ್ಕೆ ಆಗ್ರಹ
ಕೊಡಗು ಜಿಲ್ಲೆಗೆ ಸರಬರಾಜುಗೊಂಡ ಕೇರಳದ ಅಸುರಕ್ಷಿತ ಆಹಾರ ಪದಾರ್ಥಗಳ ಉತ್ಪಾದನೆ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಜರಗಿಸಲು ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಕೇರಳ ಸರಕಾರಕ್ಕೆ ಪತ್ರ ರವಾನೆ ಮಾಡಿದ್ದಾರೆ. ಆಹಾರ ಗುಣಮಟ್ಟ ಹಾಗೂ ಸುರಕ್ಷೆ ಇಲಾಖೆ ದೀಪಾವಳಿ ಸಂದರ್ಭದಲ್ಲಿ ಪರೀಕ್ಷೆಗೆ ಒಳಪಡಿಸಿದ 151 ಸಿಹಿ ತಿಂಡಿಗಳ ಮಾದರಿಗಳಲ್ಲಿ 9 ಮಾದರಿಗಳಲ್ಲಿ ಕೃತಕ ಬಣ್ಣ ಬಳಕೆಯಾಗಿದ್ದು, ಸೇವಿಸಲು ಅಸುರಕ್ಷಿತ ಎನ್ನುವುದು ವರದಿಯಾಗಿದೆ.

Advertisement

ಕೃತಕ ಬೆಳ್ಳುಳ್ಳಿ ಮಾರಾಟವಿಲ್ಲ!
ಚೀದದಿಂದ ಕೃತಕ ಹಾಗೂ ನಿಷೇಧಿತ ಬೆಳ್ಳುಳ್ಳಿ ರಾಜ್ಯಾದ್ಯಂತ ಮಾರಾಟವಾ ಗುತ್ತಿರುವ ಬಗ್ಗೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ 154 ಬೆಳ್ಳುಳ್ಳಿ ಮಾದರಿ ಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 147 ಮಾದರಿಗಳು ಸುರಕ್ಷಿತವಾಗಿವೆ. ಉಳಿದ 7 ಮಾದರಿಗಳಲ್ಲಿ ಶಿಲೀಂಧ್ರ ಬೆಳವಣಿಯಾಗಿದ್ದು, ಕೊಳೆತಿದ್ದ ಹಿನ್ನೆಲೆಯಲ್ಲಿ ಅಸುರಕ್ಷಿತ ಎಂದು ವರದಿಯಾಗಿರುತ್ತದೆ.

ನಿಷೇಧಿತ ರಾಸಾಯನಿಕ ಬಳಕೆ
ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಾರಾಟವಾದ ಕೇರಳದ ಆಹಾರ ಪದಾರ್ಥಗಳ ಮಾದರಿಯನ್ನು ಮಾತ್ರ ವಿಶ್ಲೇಷಣೆ ಮಾಡಲಾಗಿದೆ. ಈ ವೇಳೆ ಕೃತಕ ಬಣ್ಣ ಹಾಗೂ ನಿಷೇಧಿತ ಪದಾರ್ಥಗಳು ಬಳಕೆ ಮಾತ್ರವಲ್ಲದೆ ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಉತ್ಪಾದನೆ ದಿನಾಂಕ, ಉತ್ಪಾದಕರ ವಿವರಗಳು ಲಭ್ಯವಿಲ್ಲ. ಜತೆಗೆ ಉತ್ಪಾದನೆ ದಿನಾಂಕವನ್ನು ಮುಂಚಿತವಾಗಿ ನಮೂದಿಸಿರುವುದು ಎಫ್ಎಸ್‌ಎಸ್‌ಎಐ ನೋಂದಣಿ ಅಥವಾ ಪರವಾನಿಗೆ ಸಂಖ್ಯೆ ಇಲ್ಲದಿರುವುದು ದೃಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next