Advertisement
ಈ ಹಕ್ಕಿಯ ಸ್ವಭಾವ, ಬಣ್ಣ ಆಧರಿಸಿಯೇ ಬಣ್ಣದ ಕಿರುಕೋಳಿ, ಕಾಡು ಕಿರುಕೋಳಿ ಅಂತೆಲ್ಲ ಕರೆಯುವುದು. ಜಗತ್ತಿನಲ್ಲಿ ಇಂಥದೇ ಆಕಾರ, ಬಣ್ಣ , ಮೈಮೇಲಿನ ಚಿತ್ತಾರವನ್ನು ಹೋಲುವ ಸುಮಾರು 42 ಭಿನ್ನ ಹಕ್ಕಿಗಳನ್ನು ಗುರುತಿಸಲಾಗಿದೆ. ಇದು ಉಷ್ಣ ಪ್ರದೇಶದ ಹಕ್ಕಿ ಅಥವಾ ಕೋಳಿ.
ಇಂಗ್ಲಿಷ್‌ನಲ್ಲಿ ಪೇಂಟೆಡ್ ಫ್ರಂಕಲಿನ್ ಅಂತ ಕರೆಯುವ ಈ ಹಕ್ಕಿಯನ್ನು ಕನ್ನಡದಲ್ಲಿ ಗೌಜಿಗನ ಹಕ್ಕಿ, ಚಿಟ್ಟು ಕೋಳಿ, ಬಟೀರ ಎಂದೂ ಕರೆಯುವರು. ಮೋಟು ಬಾಲ, ಚಿಕ್ಕ ಕಾಲು ಇರುವುದರಿಂದ ಕೋಳಿಮರಿಯ ಹೋಲಿಕೆ ಸಿಗುತ್ತದೆ. ಇದರ ರೆಕ್ಕೆಯ ಮೇಲೆ ಬಣ್ಣದ ಚಿತ್ತಾರವನ್ನು ಸ್ಪಷ್ಟವಾಗಿ ಬರೆದಂತೆ ಇರುವುದು. ಈ ಹಕ್ಕಿ ದೊಡ್ಡ ಕಾಡಿನಲ್ಲಿ ವಾಸಿಸುವುದು ಕಡಿಮೆ. ಚಿಕ್ಕ ಕಾಡು ಹೆಚ್ಚು ಪ್ರಿಯ. ಕುರುಚಲು ಕಾಡು, ಬಿದಿರು ಮೆಳೆ, ಇಲ್ಲವೇ ಭತ್ತ, ನವಣೆಯಂಥ ಬೆಳೆ ಬೆಳೆಯುವ ಸುತ್ತಮುತ್ತಲ ಗಿಡ ಗಂಟಿಯ ಮಧ್ಯೆ ಇದನ್ನು ಹೇರಳವಾಗಿ ಕಾಣಬಹುದು. ಊರ ಕೋಳಿಯ ಹೋಲಿಕೆ ಇರುವ ಈ ಹಕ್ಕಿಯನ್ನು ಮಾಂಸಕ್ಕಾಗಿ ಬಳಸುತ್ತಾರೆ. ಗಂಡು ಹಕ್ಕಿಯ ಬಣ್ಣ ಕಡುಗಪ್ಪು. ಹೆಣ್ಣು ಹಕ್ಕಿ ತಿಳಿ ಕಂದು ಮತ್ತು ಅಚ್ಚ ಕಂದು ಬಣ್ಣದ ಚಿತ್ತಾರದಿಂದ ಕೂಡಿರುತ್ತದೆ. ನೆತ್ತಿಯಲ್ಲಿ ಕಪ್ಪು ಕೂದಲಿಂದ ಕೂಡಿರುತ್ತದೆ. ಕಣ್ಣಿನ ಸುತ್ತ ಗರಿಗಳಿಲ್ಲದೇ ಬೋಳಾದ ಚರ್ಮ ಉಬ್ಬಿದಂತೆ ಕಾಣುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಕಣ್ಣಿನ ಸುತ್ತ ಇರುವ ಬಿಳಿ ಛಾಯೆಯ ಕೆನೆಬಣ್ಣದ ಚರ್ಮ ಸ್ಪಷ್ಟವಾಗಿ ಕಾಣುವುದು.
Related Articles
Advertisement
ಜೂನ್‌ನಿಂದ ಸೆಪ್ಟೆಂಬರ್, ಇದು ಮರಿಮಾಡುವ ಸಮಯ. ಇದರ ಗೂಡು ಕಪ್ಪು ಗೌಜಿಗ ಹಕ್ಕಿಯ ಗೂಡು ಮತ್ತು ಕೂಗನ್ನು ತುಂಬಾ ಹೋಲುತ್ತದೆ. ಭತ್ತದ ಗದ್ದೆಯ ಸಮೀಪದ ಪೊದೆ, ಇಲ್ಲವೆ ಹುಲ್ಲು ಹಾಗೂ ಕಲ್ಲು ಸಂಧಿಗಳನ್ನು ಹುಡುಕಿ ಅಲ್ಲೇ ಗೂಡು ಕಟ್ಟುತ್ತದೆ. ರೈತರ ಬೆಳೆಗೆ ಹಾನಿ ಮೂಡುವ ಕೀಟಗಳನ್ನು ತಿನ್ನುವುದರಿಂದ ಬೆಳೆಯ ರೋಗ ಬಾಧೆಯಿಂದ ಮುಕ್ತ ಗೊಳಿಸುವಲ್ಲಿ ಈ ಪಕ್ಷಿಯ ಪಾತ್ರ ಬಹಳ ದೊಡ್ಡದು.
ಹಾವು, ನರಿ, ನಾಯಿ ಇದರ ಮೊಟ್ಟೆಯನ್ನು ಕಬಳಿಸುವುದಿದೆ. ಹಾಗಾಗಿ, ಇಂಥ ಮೊಟ್ಟೆಗಳ ರಕ್ಷಣೆ ಸಹ ಅನಿವಾರ್ಯ. ಈ ದಿಸೆಯಲ್ಲೂ ಅವುಗಳನ್ನು ಉಳಿಸುವ ಕೆಲಸ ಆಗಬೇಕಿದೆ. ಇಲ್ಲವಾ¨ರೆ ಮುಂದಿನ ತಲೆಮಾರಿಗೆ ಈ ಹಕ್ಕಿ ನೋಡುವ ಭಾಗ್ಯ ಸಹ ಇಲ್ಲದೇ ಹೋಗಬಹುದು.
— ಪಿ. ವಿ. ಭಟ್ ಮೂರೂರು