ಪುದುಚೇರಿ: ಮಹತ್ವದ ಬೆಳವಣಿಗೆಯಲ್ಲಿ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರನ್ನು ಏಕಾಏಕಿ ಹುದ್ದೆಯಿಂದ ತೆರವು ಮಾಡಲಾಗಿದೆ. ಈ ಸಂಬಂಧ ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಿಂದ ಪ್ರಕಟಣೆ ಹೊರಬಿದ್ದಿದೆ.
ಈ ಮೂಲಕ ಸಿಎಂ ನಾರಾಯಣ ಸ್ವಾಮಿ ಮತ್ತು ಕಿರಣ್ ಬೇಡಿ ಅವರ ನಡುವಿನ ಜಗಳಕ್ಕೆ ಅಂತ್ಯ ಬಿದ್ದಿದೆ. ತೆಲಂಗಾಣ ರಾಜ್ಯಪಾಲರಿಗೆ ಹೆಚ್ಚುವರಿಯಾಗಿ ಪುದುಚೇರಿಯ ಜವಾಬ್ದಾರಿ ವಹಿಸಲಾಗಿದೆ.
ಈ ಮಧ್ಯೆ, ಪುದುಚೇರಿಯಲ್ಲಿನ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಮಂಗಳವಾರವೂ ಒಬ್ಬ ಶಾಸಕ ರಾಜೀನಾಮೆ ನೀಡಿದ್ದು, ಈ ಮೂಲಕ ಕಾಂಗ್ರೆಸ್ ಬಲ 14ಕ್ಕೆ ಕುಸಿದಿದೆ.
ರಾಹುಲ್ ಗಾಂಧಿ ಭೇಟಿ ನಿಗದಿಯಾಗಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿರುವುದು ಸಿಎಂ ನಾರಾಯಣಸ್ವಾಮಿ ಅವರಿಗೆ ಮುಜುಗರ ತಂದಿದೆ.
ಒಂದು ತಿಂಗಳ ಅವಧಿಯಲ್ಲಿ ನಾಲ್ವರು ರಾಜೀನಾಮೆ ನೀಡಿದ್ದು, ಇಬ್ಬರು ಈಗಾಗಲೇ ಬಿಜೆಪಿ ಸೇರಿದ್ದಾರೆ. ಸೋಮವಾರ ರಾಜೀನಾಮೆ ನೀಡಿರುವ ಮಲ್ಲಾದಿ ಕೃಷ್ಣರಾವ್ ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನ ಹೇಳಿದ್ದಾರೆ.