Advertisement
ಇದು ರಸ್ತೆ ಬದಿಯ ಅತ್ಯಂತ ಪ್ರಮುಖ ಜಾಗವಾಗಿದ್ದು, ಇಲ್ಲಿ ಉದ್ಯಾನವನ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಉದ್ಯಾನ ನಿರ್ಮಾಣಕ್ಕೆ ಕಾರ್ಯಾದೇಶವೂ ಆಗಿದೆ. ಆದರೆ, ಈಗ ಇಲ್ಲಿ ಜಲಾನಯನ ಇಲಾಖೆಯಿಂದ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
Related Articles
ಈ ನಡುವೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಜಾಗವನ್ನು ಪಾರ್ಕ್ ಗೆ ಮೀಸಲಿಟ್ಟಿರುವುದು, ಸ್ಥಳೀಯಾಡಳಿತದಿಂದ ಅನುಮತಿ ಪಡೆಯದೇ ಕಾಮಗಾರಿ ನಡೆಸುತ್ತಿರುವುದು, ಪಟ್ಟಣ ಪಂಚಾಯತ್‌ನ ಗಮನಕ್ಕೆ ತಾರದೆ ಇರುವುದು ಮೊದಲಾದ ವಿಚಾರಗಳನ್ನು ಗಮನಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಪ.ಪಂ.ಮುಖ್ಯಾಧಿಕಾರಿ ಮೌಖೀಕ ಆದೇಶ ನೀಡಿದ್ದಾರೆ.
Advertisement
ಈ ಜಂಕ್ಷನ್ ಮೂಲಕ ಮೂಲ್ಕಿ-ಕಿನ್ನಿಗೋಳಿ-ಪೊಳಲಿ ಮತ್ತು ಮೂಲ್ಕಿ-ಕಿನ್ನಿಗೋಳಿ- ಮೂಡುಬಿದಿರೆ ರಸ್ತೆ ಅಭಿವೃದ್ಧಿಯ ಯೋಜನೆಯೂ ಇದೆ. ಹೀಗಾಗಿ ಜಂಕ್ಷನ್‌ನ ಸ್ವಲ್ಪ ಭಾಗವನ್ನು ಬಿಟ್ಟು ಕೊಡಬೇಕಾಗುತ್ತದೆ. ಈಗ ಟ್ಯಾಂಕ್ ನಿರ್ಮಿಸಿದರೆ ಅದಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ. ಯಾವ ಕೆಲಸವೂ ನೆಟ್ಟಗೆ ನಡೆದಿಲ್ಲ!
ಜಲಾನಯನ ಇಲಾಖೆಯಿಂದ ನಡೆದ ಯಾವ ಕಾಮಗಾರಿಯೂ ಸರಿಯಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ. ಬಹುಗ್ರಾಮ ಯೋಜನೆಯ ಒಂದು ಟ್ಯಾಂಕ್ ಇಲ್ಲೇ ಪಕ್ಕದಲ್ಲೇ ಇದ್ದರೂ ನೀರು ಪೂರೈಕೆ ಪರಿಪೂರ್ಣವಾಗಿಲ್ಲ. ಜಲಜೀವನ್ ಮಿಷನ್‌ನಡಿ ನೇಕಾರರ ಕಾಲನಿಯಲ್ಲಿ ಟ್ಯಾಂಕ್ ನಿರ್ಮಿಸಲಾಗಿದೆಯಾದರೂ ಇದುವರೆಗೂ ಒಂದು ತೊಟ್ಟು ನೀರೂ ಬಂದಿಲ್ಲ. ಬಡ ಮಹಿಳೆಯೊಬ್ಬರ ಮನೆಗೆ ತೊಂದರೆ ಮಾಡಿದ್ದಷ್ಟೇ ಸಾಧನೆ ಎಂಬ ಆರೋಪವಿದೆ. ಇನ್ನು ಜಲ ಜೀವನ್ ಮಿಷನ್ ನಡಿ ಒಳಚರಂಡಿ ಯೋಜನೆಯ ಚರಂಡಿಯಲ್ಲೇ ಪೈಪ್‌ಲೈನ್ ಹಾಕಲಾದ ಬಗ್ಗೆ ದೂರು ಇದೆ. ಜಂಕ್ಷನ್‌ನಲ್ಲಿರುವ 40 ಸೆಂಟ್ಸ್ ಜಾಗ
ಮೂರುಕಾವೇರಿ ನಾಲ್ಕು ರಸ್ತೆಗಳು ಸಂಧಿಸುವ ಪ್ರಮುಖ ಜಂಕ್ಷನ್. ಒಂದು ರಸ್ತೆ ಕಟೀಲು ಕಡೆಗೆ ಹೋದರೆ, ಇನ್ನೊಂದು ಮೂಡುಬಿದಿರೆ, ಇನ್ನೊಂದು ಕಿನ್ನಿಗೋಳಿ ಹಾಗೂ ಮತ್ತೂಂದು ಮುಂಡ್ಕೂರು ಕಡೆಗೆ ಹೊಗುತ್ತದೆ. ಈ ನಾಲ್ಕೂ ರಸ್ತೆಗಳ ನಡುವೆ ಈ 40 ಸೆಂಟ್ಸ್ ಜಾಗವಿದೆ. ಇದೊಂದು ಪ್ರಮುಖ ಜಾಗವಾಗಿರುವುದರಿಂದ ಇಲ್ಲಿ ಸಂತೆ ಮಾರ್ಕೆಟ್ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದರೆ ಊರೂ ಬೆಳೆಯುತ್ತದೆ, ವ್ಯಾಪಾರವೂ ಚೆನ್ನಾಗಿರುತ್ತದೆ ಎಂಬ ಬೇಡಿಕೆ ಇತ್ತು. ಅದಕ್ಕೂ ಪುರಸ್ಕರಿಸಲಿಲ್ಲ. ಹಿಂದೊಮ್ಮೆ ಇಲ್ಲಿ ಅಂಚೆ ಕಚೇರಿ ನಿರ್ಮಾಣಕ್ಕೆ ಅವಕಾಶ ಕೋರಿದಾಗ ಹೆದ್ದಾರಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಇತ್ತೀಚೆಗೆ ಇಲ್ಲಿ ಪಾರ್ಕ್ ನಿರ್ಮಿಸುವ ಪ್ರಸ್ತಾವನೆಗೆ ಅನುಮತಿ ನೀಡಲಾಗಿತ್ತು. ಆದರೆ, ಇದ್ದಕ್ಕಿದ್ದಂತೆಯೇ ಈಗ ಟ್ಯಾಂಕ್ ಕಾಮಗಾರಿ ಆರಂಭಿಸಲಾಗಿದೆ. ಉದಾಸೀನ ಯಾಕೆ?
ರಾಜ್ಯ ಹೆದ್ದಾರಿ ಬದಿಯಲ್ಲಿ ಯಾವುದೇ ಕಾಮಗಾರಿ, ಕಟ್ಟಡ ನಿರ್ಮಾಣ ಮಾಡಬೇಕಾದರೆ ರಸ್ತೆಯಿಂದ ಇಷ್ಟು ಮೀಟರ್ ಬಿಡಬೇಕು ಎಂಬ ಕಾನೂನು ಇದ್ದರೂ ಇಲ್ಲಿ ಎಲ್ಲ ಕಾನೂನು ಗಾಳಿಗೆ ತೋರಿದ್ದಾರೆ. ಒಂದು ರಸ್ತೆ ಅಗೆಯಬೇಕಾದರೂ, ಖಾಸಗಿ ಜಾಗದಲ್ಲಿ ಇದ್ದ ಮರ ಕಡಿಯಬೇಕಾದರೂ ಕಾನೂನು ಹೇಳುವ ಇಲಾಖೆಗಳು ಇಂತಹ ಕಾಮಗಾರಿಯಲ್ಲಿ ಇಂತಹ ಉದಾಸೀನ ಯಾಕೆ? ಒಂದು ಕಾಮಗಾರಿಗೆ ಮಂಜೂರಾತಿ ನೀಡಿ ಮತ್ತೆ ಅದೇ ಜಾಗದಲ್ಲಿ ಇನ್ನೊಂದು ಕಾಮಗಾರಿ ನಡೆಸುವುದು ಎಷ್ಟು ಸರಿ?
-ಸ್ಟೇನಿ ಪಿಂಟೋ ಕಿನ್ನಿಗೋಳಿ, ಸಾಮಾಜಿಕ ಕಾರ್ಯಕರ್ತರು ಯಾವುದಕ್ಕೆ ಈ ಟ್ಯಾಂಕ್ ನಿರ್ಮಾಣ?
ನಿಜವೆಂದರೆ, ಮೂರು ಕಾವೇರಿ ಜಂಕ್ಷನ್‌ನಿಂದ ಸ್ವಲ್ಪ ದೂರದಲ್ಲಿ ಈಗಾಗಲೇ ಒಂದು ಟ್ಯಾಂಕ್ ಇದೆ. ಇದು ಬಹುಗ್ರಾಮ ನೀರು ಯೋಜನೆಗೆ ಸೇರಿದ್ದು. ಜಂಕ್ಷನ್‌ನಲ್ಲಿ ನಿರ್ಮಿಸಲು ಹೊರಟಿರುವುದು ಲಕ್ಷಾಂತರ ಲೀಟರ್ ನೀರು ಸಂಗ್ರಹದ ಬೃಹತ್ ಟ್ಯಾಂಕ್ ನಿರ್ಮಾಣಕ್ಕೆ. ಗುರುಪುರ ಹೊಳೆಯಿಂದ ಬಜಪೆ ಮತ್ತು ಕಿನ್ನಿಗೋಳಿ ಪ.ಪಂ.ಗೆ ಹಾಗೂ ಮೂಲ್ಕಿ ನಗರಸಭೆಗೆ ನೀರು ಸರಬರಾಜು ಮಾಡುವ ಯೋಜನೆಯ ಭಾಗವಾಗಿ ಕಿನ್ನಿಗೋಳಿಗೆ ನೀರು ಸರಬರಾಜು ಮಾಡುವ ಟ್ಯಾಂಕ್ ಇದಾಗಲಿದೆ. ಆದರೆ, ಇದನ್ನು ಹಿಂದಿನ ಟ್ಯಾಂಕ್ ಇರುವ ಆಸುಪಾಸಿನಲ್ಲೇ ನಿರ್ಮಿಸಬಹುದು. ಅದಕ್ಕಾಗಿ ಅತ್ಯಂತ ಪ್ರಮುಖವಾಗಿರುವ ಜಂಕ್ಷನ್ ಜಾಗವನ್ನು ಬಳಸುವುದು ತಪ್ಪು ಎಂದು ಜನರು ಹೇಳುತ್ತಿದ್ದಾರೆ. ಜಂಕ್ಷನ್‌ನಲ್ಲಿ ಟ್ಯಾಂಕ್ ಅಪಾಯಕಾರಿ
ಜಂಕ್ಷನ್‌ನಲ್ಲಿ ಇರುವ ಜಾಗದಲ್ಲಿ ನೀರಿನ ಬೃಹತ್ ಟ್ಯಾಂಕ್ ನಿರ್ಮಾಣ ಮಾಡುವುದು ಅಪಾಯಕಾರಿ. ಏನಾದರೂ ಅನಾಹುತ ಸಂಭವಿಸಿದರೆ ತೊಂದರೆ ಎನ್ನುವುದು ಜನರು ಟ್ಯಾಂಕ್ ನಿರ್ಮಾಣ ವಿರೋಧಿಸುವುದಕ್ಕೆ ಮತ್ತೂಂದು ಕಾರಣ. ಇದು ನೂರಾರು ವಾಹನಗಳು ಓಡಾಡುವ ಜಾಗ. ಸಾವಿರಾರು ಜನರು ಇಲ್ಲಿ ಬಸ್ ಬದಲಾವಣೆಗಾಗಿ ಕಾಯುತ್ತಾರೆ. ಅಂಥ ಜಾಗದಲ್ಲಿ ಟ್ಯಾಂಕ್ ನಿರ್ಮಾಣ ಸರಿಯಲ್ಲ ಎನ್ನುವ ವಾದವೂ ಇದೆ. -ರಘುನಾಥ್ ಕಾಮತ್ ಕೆಂಚನಕೆರೆ