Advertisement

ಉಡುಪಿ: ಯುವತಿ ಅಪಹರಣ ಶಂಕೆ; ಕಾರು ತೊರೆದು ಆರೋಪಿಗಳು ಪರಾರಿ

06:25 AM Jan 31, 2019 | Team Udayavani |

ಉಡುಪಿ: ಯುವತಿಯೊಬ್ಬಳನ್ನು ಅಪಹರಿಸಲು ಯತ್ನಿಸಿ ಆಕೆಯನ್ನು ಹೊರದಬ್ಬಿ ಕಾರನ್ನು ಬಿಟ್ಟು ಹೋದ ಘಟನೆ ಬುಧವಾರ ಕಿನ್ನಿಮೂಲ್ಕಿ ಬಳಿ ಸಂಭವಿಸಿದೆ.  ಯುವತಿಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ದುಷ್ಕರ್ಮಿಗಳು ಕಾರನ್ನು ಕಿನ್ನಿಮೂಲ್ಕಿ ಸಮೀಪದ ಬಲಾಯಿಪಾದೆಯ ರಾ.ಹೆ. 66ರಲ್ಲಿ ಬಿಟ್ಟು ಪರಾರಿಯಾದರು. 

Advertisement

ಬೂದು ಬಣ್ಣದ ರಿಟ್ಜ್ ಕಾರು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿತ್ತು. ಅದರಲ್ಲಿದ್ದ ಯುವತಿ ಬೊಬ್ಬೆ ಹಾಕುತ್ತಿದ್ದಳು. ಕಿನ್ನಿಮೂಲ್ಕಿ-ಬಲಾಯಿಪಾದೆಯ ರಿಕ್ಷಾ ನಿಲ್ದಾಣದ ಸಮೀಪ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಕಾರಿನ ಬಾಗಿಲು ತೆರೆದು ಹೊರಗೆ ಹಾರಲು ಯತ್ನಿಸುತ್ತಿದ್ದಳು. ತತ್‌ಕ್ಷಣ ಚಾಲಕ ಕಾರನ್ನು ನಿಧಾನ ಮಾಡಿ ಆಕೆಯನ್ನು ಕಾರಿನಿಂದ ಹೊರಹಾಕಿ ಪರಾರಿಯಾದ. ಯುವತಿಯನ್ನು  ಹೊರದಬ್ಬಿದ ಚಾಲಕ ಕಾರನ್ನು ಕಿನ್ನಿಮೂಲ್ಕಿ ಫ್ಲೈಓವರ್‌ ಮೂಲಕ ಉಡುಪಿ ಕಡೆ ಚಲಾಯಿಸಿಕೊಂಡು ಹೋಗಲು ಯತ್ನಿಸಿದ.  ಸರ್ವಿಸ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾದ ಕಾರಣ ಚಾಲಕ  ಸಮೀಪದ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಎದುರು ನಿಲ್ಲಿಸಿ ಬಸ್‌ ಹತ್ತಿಕೊಂಡು ಪರಾರಿಯಾದ ಎಂದು ಕಾರನ್ನು ಹಿಂಬಾಲಿಸಿಕೊಂಡು ಹೋದ ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ. ಏತನ್ಮಧ್ಯೆ ಯುವತಿ ಕಾರಿನಿಂದ ಹೊರಗೆ ಹಾರಲು ಯತ್ನಿಸಿಧ್ದೋ? ಅಥವಾ ಆಕೆಯನ್ನು ಹೊರಗೆ ತಳ್ಳಿದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಘಟನೆ ನಡೆದ ತತ್‌ಕ್ಷಣ ಹಿಂಬದಿಯಿಂದ ಚಾಲಕ ಹಾಗೂ ಓರ್ವ ಮಹಿಳೆ ಇದ್ದ ಪಜೇರೋ ವಾಹನ ಬಂತು. ಕೂಡಲೇ ಆ ಯುವತಿ ಕಾರನ್ನೇರಿದಳು. ಬಳಿಕ ಯೂಟರ್ನ್ ಹೊಡೆದು ಕಾರು ಮಂಗಳೂರಿನತ್ತ ತೆರಳಿತು ಎಂದು ಸ್ಥಳೀಯ ರಿಕ್ಷಾ ಚಾಲಕರು ತಿಳಿಸಿದ್ದಾರೆ.

ಕಾರಿನಲ್ಲಿ ಬ್ಯಾಗ್‌ ಒಂದು ಪತ್ತೆಯಾಗಿದ್ದು ಇದರಲ್ಲಿ ಮೇಕ್‌ ಅಪ್‌ ಸೆಟ್‌, ನಗದು, ಟಿಕೆಟ್‌ ಪತ್ತೆಯಾಗಿದೆ. ಕಾರಿನಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಸಿಗರೇಟ್‌, ಹೆಡ್‌ ಫೋನ್‌, ಪಾದರಕ್ಷೆ ಪತ್ತೆಯಾಗಿದೆ.  ಉಡುಪಿ ನೋಂದಣಿಯ ಕಾರು ಎನ್ನಲಾಗಿದೆ. ಯಾರೂ ದೂರು ಕೊಡದ ಕಾರಣ ಈ ಪ್ರಕರಣದ ಹಿಂದಿನ ಗುಟ್ಟೇನು ಎಂದು ತಿಳಿದುಬಂದಿಲ್ಲ. 

ಪೊಲೀಸರಿಂದ ತನಿಖೆ ; ಘಟನ ಸ್ಥಳಕ್ಕೆ ಡಿವೈಎಸ್‌ಪಿ ಜೈಶಂಕರ್‌, ಮಲ್ಪೆ ಪೊಲೀಸ್‌ ನಿರೀಕ್ಷಕ ಮಧು ಆಗಮಿಸಿ ಪರಿಶೀಲನೆ ನಡೆಸಿದರು. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

 ದೂರುದಾರರೇ ಇಲ್ಲ, ಪ್ರಕರಣ ದಾಖಲಾಗಿಲ್ಲ
ಯಾರೂ ದೂರು ನೀಡದ ಕಾರಣ ಪ್ರಕರಣ ದಾಖಲಾಗಿಲ್ಲ. ಮಲ್ಪೆ ಠಾಣಾ ಪಿಎಸ್‌ಐ ಅವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಲಕ್ಷ್ಮಣ ನಿಂಬರಗಿ ಉಡುಪಿ ಎಸ್‌ ಪಿ 

ಪರಿಶೀಲನೆ ನಡೆಯುತ್ತಿದೆ
ಪ್ರಕರಣ ಇನ್ನೂ ದಾಖಲಾಗಿಲ್ಲ. ಅವಳು ಬಿದ್ದಧ್ದೋ   ಅಥವಾ ದೂಡಿ ಹಾಕಲಾಗಿದೆಯೋ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. 
 ಮಧು, ಮಲ್ಪೆ ಪೊಲೀಸ್‌ ನಿರೀಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next