ವಾಷಿಂಗ್ಟನ್: ಮನೆಯಿಂದ ತಂದೆ, ತಾಯಿ, ಸಹೋದರ, ಸಹೋದರಿ ಹೀಗೆ ಯಾವುದೋ ಕಾರಣಕ್ಕೆ ಮನೆ ಬಿಟ್ಟು ಹೋಗುವುದು, ಅಪಹರಣಕ್ಕೊಳಗಾಗಿ ಕೆಲವು ವರ್ಷಗಳ ನಂತರ ಮರಳಿ ಬರುವುದು, ಬಾರದೇ ಇರುವ ಘಟನೆಗಳು ನಡೆದಿರುವುದನ್ನು ಕೇಳಿರುತ್ತೀರಿ. ಅದಕ್ಕೊಂದು ಸೇರ್ಪಡೆ ಇದು…ಬರೋಬ್ಬರಿ 70 ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 6 ವರ್ಷದ ಬಾಲಕ ಇದೀಗ ಜೀವಂತವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದಲ್ಲಿ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.
ಅಂದು ನಡೆದ ಘಟನೆ ಹಿನ್ನಲೆ:
ಕ್ಯಾಲಿಫೋರ್ನಿಯಾದ ವೆಸ್ಟ್ ಓಕ್ಲಾಂಡ್ ಪಾರ್ಕ್ ನಲ್ಲಿ 1951ರ ಫೆಬ್ರುವರಿ 21ರಂದು ಲೂಯಿಸ್ ಅರ್ಮಾಂಡೋ ಅಲ್ಬಿನೋ ಎಂಬ 6 ವರ್ಷದ ಬಾಲಕ ತನ್ನ ಸಹೋದರ ರೋಜರ್ (10ವರ್ಷ) ಜೊತೆ ಆಟವಾಡುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ಲೂಯಿಸ್ ಗೆ ಸಿಹಿ ತಿಂಡಿ ತೆಗೆದುಕೊಡುವುದಾಗಿ ಆಮಿಷವೊಡ್ಡಿ ಕರೆದೊಯ್ದಿದ್ದಳು! ಹೀಗೆ ಅಪಹರಣಕ್ಕೊಳಗಾಗಿದ್ದ ಲೂಯಿಸ್ ಹಲವು ದಶಕಗಳು ಕಳೆದರೂ ಸುಳಿವೇ ಸಿಕ್ಕಿರಲಿಲ್ಲವಾಗಿತ್ತು. ಅಂತೂ ಕುಟುಂಬದವರ ನಿರಂತರ ಪ್ರಯತ್ನ, ಡಿಎನ್ ಎ ಪರೀಕ್ಷೆ ಮೂಲಕ ಕೊನೆಗೂ ಲೂಯಿಸ್ ವೃದ್ಧಾಪ್ಯದಲ್ಲಿ ಕುಟುಂಬಸ್ಥರ ಜೊತೆ ಸೇರುವಂತಾಗಿದೆ.
ಚಿಕ್ಕಪ್ಪನ ಶೋಧಕ್ಕೆ ಸೋದರನ ಪುತ್ರಿಯ ಛಲ:
ಲೂಯಿಸ್ ಅಲ್ಬಿನೋ ಸೋದರ ರೋಜರ್ ಪುತ್ರಿ ಅಲಿಡಾ ಅಲೆಕ್ವಿನ್ (64ವರ್ಷ) ತನ್ನ ಚಿಕ್ಕಪ್ಪನ ಪತ್ತೆಗಾಗಿ ಆಕೆ ಪಟ್ಟ ಪ್ರಯತ್ನ ಒಂದೆರಡಲ್ಲ. ಡಿಎನ್ ಎ ಪರೀಕ್ಷೆ, ಪತ್ರಿಕಾ ವರದಿಗಳ ಕ್ಲಿಪ್ಪಿಂಗ್ಸ್, ಓಕ್ಲಾಂಡ್ ಪೊಲೀಸ್ ಇಲಾಖೆ, ಎಫ್ ಬಿಐ ಮತ್ತು ಜಸ್ಟೀಸ್ ಡಿಪಾರ್ಟ್ ಮೆಂಟ್ ನ ನೆರವಿನೊಂದಿಗೆ ಲೂಯಿಸ್ ಪತ್ತೆಗೆ ಮುಂದಾಗಿದ್ದರು. ಕೊನೆಗೂ ತನ್ನ ಚಿಕ್ಕಪ್ಪ ಲೂಯಿಸ್ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಲೂಯಿಸ್ ಅಲ್ಬಿನೋ ಅಗ್ನಿಶಾಮಕ ದಳ ಇಲಾಖೆಯಿಂದ ನಿವೃತ್ತರಾಗಿದ್ದಾರೆ.
ಜೂನ್ ತಿಂಗಳಿನಲ್ಲಿ ಲೂಯಿಸ್ ಅಲ್ಬಿನೋ (79ವರ್ಷ) ತನ್ನ ಹಿರಿಯ ಸಹೋದರ ರೋಜರ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಪುನರ್ ಜತೆಗೂಡಿದ್ದಾರೆ. ಅಲ್ಬಿನೋ ಮತ್ತು ರೋಜರ್ ಒಬ್ಬರನ್ನೊಬ್ಬರು ಬಿಗಿಯಾಗಿ ತಬ್ಬಿಕೊಂಡು ಆನಂದ ಬಾಷ್ಪ ಸುರಿಸಿದ್ದರು ಎಂದು ಅಲಿಡಾ ಆ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಕಳೆದ ತಿಂಗಳು ರೋಜರ್ (82ವರ್ಷ) ಕ್ಯಾನ್ಸರ್ ನಿಂದ ಕೊನೆಯುಸಿರೆಳೆದಿದ್ದರು.
ಅಲ್ಬಿನೋ ತನ್ನ ಅಪಹರಣದ ನಂತರದ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದು, ತನ್ನನ್ನು ಯಾರು ಅಪಹರಿಸಿದ್ದು, ಯಾರ ಜೊತೆ ಬೆಳೆದಿದ್ದೆ ಎಂಬ ವಿಚಾರದ ಬಗ್ಗೆ ಯಾವುದೇ ಉತ್ತರ ನೀಡುತ್ತಿಲ್ಲ. ಕೆಲವೊಂದು ವಿಚಾರ ಗುಪ್ತವಾಗಿರಬೇಕೆಂಬುದು ಅಲ್ಬಿನೋ ಅಭಿಪ್ರಾಯವಂತೆ. ದುರದೃಷ್ಟ ಅಲ್ಬಿನೋ ತಾಯಿಯದ್ದು, ತನ್ನ ಮಗು (ಅಲ್ಬಿನೋ) ಏನಾಯ್ತು ಎಂಬ ಕೊರಗಿನಲ್ಲೇ 2005ರಲ್ಲಿ ಕೊನೆಯುಸಿರೆಳೆದಿದ್ದರು.