Advertisement

ಉದಯವಾಣಿಯಲ್ಲಿ ಕಿಚ್ಚನ ಬೆಳ್ಳಿ ಹಬ್ಬದ ಸಂಭ್ರಮ: 25 ವರ್ಷದ ಸಿನಿಪಯಣಕ್ಕೆ ಆತ್ಮೀಯ ಅಭಿನಂದನೆ

08:32 AM Feb 12, 2021 | Team Udayavani |

ಅದೊಂದು ಆತ್ಮೀಯ ಕಾರ್ಯಕ್ರಮ. ಎಲ್ಲರಲ್ಲೂ ಉತ್ಸಾಹ, ಕಾತರ.. ಜೊತೆಗೆ ಸಂಭ್ರಮ. ಈ ವಾತಾವರಣಕ್ಕೆ ಕಾರಣವಾಗಿದ್ದು ಕಿಚ್ಚ ಸುದೀಪ್‌ ಅವರ ಚಿತ್ರರಂಗದ 25 ವರ್ಷದ ಜರ್ನಿ. ನಟನೊಬ್ಬನ ಜೀವನದಲ್ಲಿ 25 ವರ್ಷ ಅನ್ನೋದು ತುಂಬಾ ಪ್ರಮುಖ ಘಟ್ಟ. ಆ ಘಟ್ಟಕ್ಕೆ ಬರಲು ಯಾವುದೇ ಕಲಾವಿದ ಸಾಕಷ್ಟು ಶ್ರಮ ಪಟ್ಟಿರುತ್ತಾನೆ. ಈ ವಿಷಯದಲ್ಲಿ ಸುದೀಪ್‌ ಕೂಡಾ ಹೊರತಾಗಿಲ್ಲ. ಈಗ ಸುದೀಪ್‌ ಬಹುಭಾಷೆಯಲ್ಲಿ ಸ್ಟಾರ್‌ ನಟ. ಕೋಟಿ ಕೋಟಿ ಸಂಭಾವನೆ, ಬಿಗ್‌ ಬಜೆಟ್‌ ಸಿನಿಮಾಗಳು ಅವರ ಸುತ್ತ ಸುತ್ತುತ್ತವೆ. ಆದರೆ, ಆರಂಭದಲ್ಲಿ ಸುದೀಪ್‌ ಕೂಡಾ ಎಲ್ಲಾ ಹೊಸ ನಟರಂತೆ ಒಂದು ಶಿಳ್ಳೆ, ಚಪ್ಪಾಳೆ, ಹೌಸ್‌ಫ‌ುಲ್‌ ಬೋರ್ಡ್‌ಗಾಗಿ ಆಸೆ ಪಟ್ಟವರು. ಈಗ ಅವೆಲ್ಲವೂ ಸಾಧ್ಯವಾಗಿದೆ. ಅದಕ್ಕೆ ಕಾರಣ ಸುದೀಪ್‌ ಅವರ ಶ್ರಮ. ಎಷ್ಟೇ ಕಷ್ಟವಾದರೂ, ಏನೇ ಬೇಸರವಾದರೂ ಈ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ತುಡಿತ ಇವತ್ತು ಎಲ್ಲವನ್ನು ಸಾಧ್ಯವಾಗಿಸಿದೆ.

Advertisement

ಇತ್ತೀಚೆಗಷ್ಟೇ ಸುದೀಪ್‌ ಅವರ ಕಟೌಟ್‌ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್‌ ಖಲೀಫಾದ ಮೇಲೆ ರಾರಾಜಿಸಿದೆ ಎಂದರೆ ಅದಕ್ಕೆ ಕಾರಣ ಸುದೀಪ್‌ ಅವರ ಸಿನಿಮಾ ಪ್ರೀತಿ ಹಾಗೂ ಅದನ್ನು ನಂಬಿದ ರೀತಿ. ಹೀಗೆ ತಮ್ಮ ಸಿನಿಮಾ ಪ್ರೀತಿಯಿಂದ 25 ವರ್ಷ ಪೂರೈಸಿದ ಸುದೀಪ್‌ ಅವರನ್ನು “ಉದಯವಾಣಿ’ ಪತ್ರಿಕೆ ಗುರುವಾರ ಆತ್ಮೀಯವಾಗಿ ಆಮಂತ್ರಿಸಿ, ಸನ್ಮಾನಿಸಿತು. ಕನ್ನಡ ಚಿತ್ರರಂಗದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ, ಸಿನಿಮಾ ಮಂದಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ “ಉದಯವಾಣಿ’ ಪತ್ರಿಕೆ, ಸುದೀಪ್‌ ಅವರ 25 ವರ್ಷದ ಜರ್ನಿಯನ್ನು ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಚರಿಸಿತು. ಕುಟುಂಬ ಕಾರ್ಯಕ್ರಮದಂತೆ ನಡೆದ ಈ ಸರಳ ಸುಂದರ ಸಮಾರಂಭಕ್ಕೆ ಕಚೇರಿಯ ಸಿಬ್ಬಂದಿ ಸಾಕ್ಷಿಯಾದರು. ನಟ ಸುದೀಪ್‌ ಕೂಡಾ “ಉದಯವಾಣಿ‘ ಜೊತೆ ಸುಂದರ ಸಂಜೆ ಕಳೆದರು.

ಸಿಬ್ಬಂದಿಯ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಮುಂದೆ ಮತ್ತೂಂದಿಷ್ಟು ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಪ್ರೀತಿಯಿಂದ ಹೇಳಿದರು. ಕಾರ್ಯಕ್ರಮದಲ್ಲಿ “ಉದಯವಾಣಿ’ಬೆಂಗಳೂರು ಆವೃತ್ತಿಯ ಆ್ಯಕ್ಟಿಂಗ್‌ ಎಡಿಟರ್‌ ಬಿ.ಕೆ.ಗಣೇಶ್, ಬೆಂಗಳೂರು ಚೀಫ್ ಆಫ್ ಬ್ಯೂರೋ ನವೀನ್‌ ಅಮ್ಮೆಂಬಳ, ಜಾಹೀರಾತು ವಿಭಾಗದ ವ್ಯವಸ್ಥಾಪಕ ಬಿ.ಕೆ. ಕೃಷ್ಣಪ್ಪ, ಸಿನಿಮಾ ವಿಭಾಗದ ಮುಖ್ಯಸ್ಥ ರವಿಪ್ರಕಾಶ್‌ ರೈ ಸೇರಿದಂತೆ “ಉದಯವಾಣಿ’ ಸಿಬ್ಬಂದಿ ವರ್ಗ ಹಾಜರಿತ್ತು. ಸುದೀಪ್‌ ಅವರ ಸನ್ಮಾನ ಕಾರ್ಯಕ್ರಮದ ಕ್ಷಣಗಳು ಹಾಗೂ ಅವರ ಮಾತುಗಳು ಇಲ್ಲಿವೆ…

ಇಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮುಖ್ಯ

Advertisement

ಅನೇಕರು ನನ್ನಲ್ಲಿ ನೀವ್ಯಾಕೆ ಮತ್ತೆ “ಶಾಂತಿ ನಿವಾಸ’, “ಮುಸ್ಸಂಜೆ ಮಾತು’ ತರಹದ ಸಿನಿಮಾಗಳನ್ನು ಯಾಕೆ ಮಾಡಲ್ಲ ಎಂದು ಕೇಳುತ್ತಾರೆ. ಆದರೆ, ಆ ತರಹದ ಸಿನಿಮಾಗಳನ್ನು ಮಾಡಿದಾಗ ನನಗೆ ಗೊತ್ತಾಗಿದ್ದು ಏನೆಂದರೆ ಇಲ್ಲಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಅಷ್ಟೇ ಮುಖ್ಯವಾಗುತ್ತದೆ. ಅಂದಿನಿಂದ ನಾನು ಕೂಡಾ ಬದಲಾದೆ. ಅದೇ “ಶಾಂತಿ ನಿವಾಸ’ನ ಸ್ವಲ್ಪ ಬದಲಾಯಿಸಿ, ಕಮರ್ಷಿಯಲ್‌ ಚೌಕಟ್ಟಿನಲ್ಲಿ “ಮಾಣಿಕ್ಯ’ ಮಾಡಿದೆ. ಜನ ಖುಷಿಯಿಂದ ನೋಡದ್ರು, ದೊಡ್ಡ ಮಟ್ಟದ ಕಲೆಕ್ಷನ್‌ ಕೂಡಾ ಆಯಿತು. ಈಗ ನಾನು ಕೂಡಾ “ಶಾಂತ’ವಾಗಿದ್ದೇನೆ

ಇದನ್ನೂ ಓದಿ:ನಿರ್ದಿಷ್ಟ ಪಾತ್ರದ ಕನಸು ನನ್ನಲ್ಲಿಲ್ಲ: ಸುದೀಪ್‌

ಆ ಕ್ಷಣದ ಕನಸು ನನ್ನದು …

ಇಂಥದ್ದೇ ಪಾತ್ರವನ್ನು ಮಾಡಬೇಕು, ಇಂಥ ನಿರ್ದೇಶಕರು, ನಿರ್ಮಾಪಕರ ಜೊತೆಗೇ ಕೆಲಸ ಮಾಡಬೇಕು ಅಂಥ ಯಾವುದೇ ಕನಸಿಲ್ಲ. ನನಗಾಗಿ ಪಾತ್ರವನ್ನು ಸೃಷ್ಟಿಸುವ, ನನಗಾಗಿ ಸಿನಿಮಾ ಮಾಡಲು ಬರುವ ನಿರ್ಮಾಪಕರು, ನಿರ್ದೇಶಕರ ಸಿನಿಮಾಕ್ಕೆ ನ್ಯಾಯ ಒದಗಿಸುವುದು ನನ್ನ ಕರ್ತವ್ಯ. ನನಗಾಗಿ ಸಿನಿಮಾ ನಿರ್ದೇಶಿಸುವ ನಿರ್ದೇಶಕರೇ ನನಗೆ ಸ್ಟೀವನ್‌ ಸ್ಪೀಲ್ಬರ್ಗ್‌. ನನಗೆ ಸಿನಿಮಾದಲ್ಲಿ ಕೆಲಸ ಕೊಡುವವರಷ್ಟೇ ಮುಖ್ಯವಾಗುತ್ತಾರೆ. ಅದನ್ನು ಬಿಟ್ಟು ಬೇರೆ ಕಡೆಗೆ ನಾನು ಗಮನ ಕೊಡುವುದಿಲ್ಲ.

ನಮ್ಮ ದೇಹವೇ ನಮ್ಮ ಇನ್ವೆಸ್ಟ್‌ಮೆಂಟ್‌

ನನ್ನ ಫಿಟ್ನೆಸ್‌ ಬಗ್ಗೆ ಹೇಳ್ಳೋದಾದ್ರೆ ನಾನು ಯೋಗ ಅಂತೇನೂ ಮಾಡಲ್ಲ. ಆದ್ರೆ ಪ್ರತಿದಿನ ಜಿಮ್‌ನಲ್ಲಿ ಒಂದೂವರೆ ಗಂಟೆಯಷ್ಟು ವರ್ಕೌಟ್‌ ಮಾಡ್ತೀನಿ. ಸಿನಿಮಾದಲ್ಲಿ ನಮ್ಮ ದೇಹ ತುಂಬ ಮುಖ್ಯ ಹಾಗಾಗಿ ಅದನ್ನ ಚೆನ್ನಾಗಿ ಇಟ್ಟುಕೊಳ್ಳಬೇಕಾಗುತ್ತೆ. ಒಂದು ಸಿನಿಮಾದ ಪಾತ್ರಕ್ಕೆ ಏನು ತಯಾರಿ ಬೇಕೋ ಅದನ್ನ ಮಾಡಿಕೊಳ್ತೀನಿ.

ಗಾಸಿಪ್‌ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

ಕೆಲವೊಮ್ಮೆ ನಾನು ಏನೇ ಮಾಡಿದ್ರೂ ಅದು ಗಾಸಿಪ್‌ ಆಗುತ್ತೆ. ಹೆಂಡತಿ, ಅಫೇರ್‌ ಅದು – ಇದು ಅಂಥ ಕೆಲವರು ಏನೇನೂ ಮಾತಾಡುತ್ತಿರುತ್ತಾರೆ. ಆದ್ರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತ ಕೂರಬಾರದು. ಹಾಗೆ ಮಾಡಿದ್ರೆ ನಾನು ಏನು ಅಂದು ಕೊಂಡಿದ್ದೇನೋ ಅದನ್ನ ರೀಚ್‌ ಮಾಡೋದಕ್ಕೆ ಆಗೋದೆ ಇಲ್ಲ. ಗಾಸಿಪ್‌ ಮೂಲಕ ಆದ್ರೂ ನನ್ನ ಬಗ್ಗೆ ಮಾತಾಡುತ್ತಾರಲ್ಲ ಅದಕ್ಕೆ ಖುಷಿ ಪಡಬೇಕು.

ಸಿನಿಮಾ ಜೀವನದ ಭಾಗ

ಸಿನಿಮಾ ನನ್ನ ಜೀವನದಲ್ಲಿ ಒಂದು ಭಾಗ ಅಷ್ಟೇ. ಸಿನಿಮಾನೇ ಜೀವನ ಅಲ್ಲ. ನಮ್ಮ ಜೀವನದಲ್ಲಿ ಬೇರೆ ಬೇರೆ ಸಂಗತಿಗಳು ಇರುವಂತೆ ಸಿನಿಮಾ ಕೂಡ ಒಂದು. ಸಿನಿಮಾವನ್ನು ಒಂದು ವೃತ್ತಿ ಅಂಥ ತೆಗೆದುಕೊಂಡಾಗ ಅದಕ್ಕೆ ಎಷ್ಟು ಸಮಯ ಕೊಡಬೇಕೋ, ಎಷ್ಟು ಅದನ್ನ ನ್ಯಾಯಯುತವಾಗಿ ಕೆಲಸ ಮಾಡಬೇಕೋ ಅದನ್ನ ಮಾಡಬೇಕು. ನಾನು ಮಾಡುತ್ತಿದ್ದೇನೆ.

ಇಷ್ಟದ ಹಾಡು

“ಓಂ’ ಸಿನಿಮಾದಲ್ಲಿ ಡಾ. ರಾಜಕುಮಾರ್‌ ಹಾಡಿರುವ ಹಾಡು, ವಿಷ್ಣುವರ್ಧನ್‌ ಅವರ “ತುತ್ತು ಅನ್ನ ತಿನ್ನೋಕೆ…’, ರವಿಚಂದ್ರನ್‌ ಅವರ ‘ಕಲಾವಿದ’ ಸಿನಿಮಾದ “ಓ ಕುಂಚವೇ…’ ಈ ಥರ ಕೆಲವೊಂದು ಹಾಡುಗಳು ನನಗೆ ತುಂಬಾ ಇಷ್ಟ. ಆದ್ರೆ ಅದು ಯಾಕೆ ಇಷ್ಟ ಅನ್ನೋದು ಮಾತ್ರ ನಿಜಕ್ಕೂ ನಂಗೆ ಗೊತ್ತಿಲ್ಲ. ಅದರ ಬಗ್ಗೆ ಮಾತ್ರ ಕೇಳ್ಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next