ಕೆಲವು ಆಸೆಗಳು ಈಡೇರಲು ವರ್ಷಾನುಗಟ್ಟಲೇ ಸಮಯ ಹಿಡಿಯುತ್ತದೆ. ಈಗ ಸುದೀಪ್ ಅವರ ಆಸೆಯೊಂದು ಬರೋಬ್ಬರಿ 36 ವರ್ಷಗಳ ನಂತರ ಈಡೇರಿದೆ. ಆ ಆಸೆ ಯಾವುದೆಂದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಜೊತೆ ಫೋಟೋ ತೆಗೆಸಿಕೊಳ್ಳೋದು. 36 ವರ್ಷಗಳ ಹಿಂದೆ ಕಪಿಲ್ ದೇವ್ ಜೊತೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದ ಆಸೆ, ಈಗ ಸ್ವತಃ ಕಪಿಲ್ ದೇವ್ ಅವರೇ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಫೋಸ್ ಕೊಡುವ ಮೂಲಕ ಈಡೇರಿದೆ.
ಇತ್ತೀಚೆಗೆ ರಣವೀರ್ ಸಿಂಗ್ ನಾಯಕರಾಗಿರುವ “83′ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನಟ ಸುದೀಪ್, ಕಪಿಲ್ ದೇವ್ ಕೂಡಾ ಭಾಗವಹಿಸಿದ್ದರು. ಈ ವೇಳೆ ಸುದೀಪ್ ಅವರು, 36 ವರ್ಷಗಳ ಹಿಂದೆ ತಾನು ಕಪಿಲ್ ದೇವ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದ ಘಟನೆ ಯನ್ನು ವಿವರಿಸಿದರು.
ಇದನ್ನೂ ಓದಿ:ದೇಶೀಯ ಕೂಟ ಮುಂದೂಡಿದ ದ.ಆಫ್ರಿಕಾ: ಭಾರತ ವಿರುದ್ಧದ ಸರಣಿ ನಡೆಯುವುದೂ ಅನುಮಾನ!
“ನಾನಿನ್ನು ಆಗ ಚಿಕ್ಕವನು. ನನಗೆ ಕಪಿಲ್ ದೇವ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ. ಆಗ ಭಾರತ ತಂಡ ಬೆಂಗಳೂರಿಗೆ ಬಂದು ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿತ್ತು. ನಾನು ಕಪಿಲ್ ದೇವ್ ಅವರನ್ನು ನೋಡಿ, ಫೋಟೋ ತೆಗೆಸಿ ಕೊಳ್ಳಬೇಕೆಂದು ಹೋದೆ. ಆಗ ಕಪಿಲ್ ದೇವ್ ಒಬ್ಬರೇ ವಾಕ್ ಮಾಡುತ್ತಿದ್ದರು. ಕೂಡಲೇ ಅವರ ಬಳಿ ಫೋಟೋ ತೆಗೆಸಿಕೊಳ್ಳಲು ಹೋದೆ. ನನ್ನ ಅಕ್ಕನೂ ಜೊತೆಗಿದ್ದಳು. ಆದರೆ, ನನ್ನ ದುರಾದೃಷ್ಟಕ್ಕೆ ನನ್ನ ಕ್ಯಾಮರಾ ವರ್ಕ್ ಆಗಲಿಲ್ಲ. ಅದರಿಂದ ಬೇಸರಗೊಂಡ ನಾನು ಅಳ್ಳೋಕೆ ಶುರು ಮಾಡಿದೆ. ಆಗ ಕಪಿಲ್ ದೇವ್ ಅವರು ನನ್ನನ್ನು ಸಮಾಧಾನ ಮಾಡಿದರು. ಅವತ್ತು ಹುಟ್ಟಿದ ಆಸೆ ಇಂದು ಈಡೇರಿದೆ’ ಎಂದರು.
ಈ ಮಾತನ್ನು ಕೇಳಿಸಿಕೊಂಡು ಕಪಿಲ್ ದೇವ್, ಸುದೀಪ್ ಅವರ ಬಳಿ ಬಂದು, “ಬನ್ನಿ ನಿಮ್ಮ ಜೊತೆ ನಾನು ಫೋಟೋ ತೆಗೆಸಿಕೊಳ್ಳುತ್ತೇನೆ’ ಎಂದು ಸುದೀಪ್ ಅವರ ಹೆಗಲಿಗೆ ಕೈ ಹಾಕಿ ಫೋಟೋಗೆ ಫೋಸ್ ಕೊಟ್ಟರು. ಈ ಮೂಲಕ ಸುದೀಪ್ ಅವರ 36 ವರ್ಷಗಳ ಹಿಂದಿನ ಕನಸು ಈಡೇರಿದಂತಾಗಿದೆ.