ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಇದೇ ಗುರುವಾರದಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಚಿತ್ರತಂಡವಂತೂ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.
ನಟ ಸುದೀಪ್ ಅವರೂ ಸಹ ತಮ್ಮ ಮಹತ್ವಾಕಾಂಕ್ಷಿ ಚಿತ್ರದ ಕುರಿತಾಗಿ ಸಾಮಾಜಿಕ ಜಾಲತಾಣವೂ ಸೇರಿದಂತೆ ವಿವಿಧ ಕಡೆಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಈ ನಡುವೆ ಸಂದರ್ಶನ, ಪ್ರಶ್ನೋತ್ತರ ಸೇರಿದಂತೆ ಸಂವಹನ ಚಟುವಟಿಕೆಗಳಿಗಾಗಿ ರೂಪುಗೊಂಡಿರುವ ಟ್ವಿಟ್ಟರ್ ಬ್ಲೂ ರೂಂನಲ್ಲಿ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಟರೊಬ್ಬರು ಪ್ರವೇಶ ಪಡೆದಿದ್ದು ಅಲ್ಲಿ ಕಿಚ್ಚ ಸುದೀಪ್ ಅವರು #ASKPAILWAAN ಹ್ಯಾಷ್ ಟ್ಯಾಗ್ ನಡಿಯಲ್ಲಿ ಟ್ವಿಟ್ಟರಿಗರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಸುದೀಪ್ ಅವರ ಅಭಿಮಾನಿಗಳು ಮಾತ್ರವಲ್ಲದೇ ಸ್ಯಾಂಡಲ್ ವುಡ್ ತಾರೆಯರೂ ಸಹ ಈ ಚರ್ಚೆಯಲ್ಲಿ ಪಾಲ್ಗೊಂಡು ಕಿಚ್ಚನಿಗೆ ಪ್ರಶ್ನೆಗಳನ್ನು ಕೆಳಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು, ಪವನ್ ಕಲ್ಯಾಣ್ ಅವರ ಅಭಿಮಾನಿಗಳೂ ಸಹ ಈ ವೇದಿಕೆಯಲ್ಲಿ ಸುದೀಪ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
‘ನನ್ನಂತಹ ಯುವಕರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೀವು ಹೇಗೆ ಸಹಾಯ ಮಾಡುತ್ತೀರಿ’ ಎಂದು ಕೇಳಲಾದ ಪ್ರಶ್ನೆಗೆ ಕಿಚ್ಚ ನೀಡಿದ ಉತ್ತರ ಹೀಗಿತ್ತು – ‘ಕೊಡುವುದರಿಂದ ನಾನು ಬಡವನಾಗುವುದಿಲ್ಲ, ನನಗೆ ಹಸಿವಾಗಿದ್ದ ಸಂದರ್ಭದಲ್ಲಿ ಖಾಲಿಯಾಗಿದ್ದ ತಟ್ಟೆ ನನಗೆ ಬಲುದೊಡ್ಡ ಪಾಠವನ್ನು ಕಲಿಸಿದೆ, ಹಾಗಾಗಿ ಈಗ ನನ್ನ ಬಳಿ ಹಸಿವು ಎಂದು ಬರುವ ಯಾರನ್ನೂ ಸಹ ನಾನು ಹಾಗೆಯೇ ವಾಪಾಸು ಕಳಿಸುವುದಿಲ್ಲ’ ಎಂದು ಬಹಳ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಇನ್ನು ತೆಲುಗು ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಎಂಬ ಟ್ವಿಟ್ಟರ್ ಅಕೌಂಟ್ ನಲ್ಲಿ ಸುದೀಪ್ ಅವರು ಈ ಹಿಂದೆ ತೆಲುಗು ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿನ ಗಮನ ಸೆಳೆದ ಉತ್ತರ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಂದರ್ಶಕ ಸುದೀಪ್ ಅವರಿಗೆ ಕೇಳುತ್ತಾರೆ, ’22 ವರ್ಷದ ನಿಮ್ಮ ಸಿನಿ ಜರ್ನಿಯಲ್ಲಿ ಹಿಂದಕ್ಕೆ ತಿರುಗಿ ನೋಡಿದಾಗ ನಿಮಗೆ ಏನನ್ನಿಸುತ್ತದೆ’ ಅದಕ್ಕೆ ಸುದೀಪ್ ಅವರು ಕೊಟ್ಟ ಉತ್ತರ ‘ನಾನೆಂದೂ ಹಿಂದೆ ತಿರುಗಿ ನೋಡಿಲ್ಲ ಸರ್, ಯಾಕೆಂದರೆ, ಹಿಂದೆ ತಿರುಗಿ ನೋಡಲು ನಾನೇನೂ ಅಲ್ಲಿ ಮರೆತಿಲ್ಲ!’. ಇದು ಬಹಳ ಸ್ಪೂರ್ತಿದಾಯಕ ಎಂದು ಅಲ್ಲಿ ಬರೆಯಲಾಗಿದೆ. ಇದಕ್ಕೆ ಸುದೀಪ್ ಅವರು ‘ಮಚ್ ಲವ್ ಆಲ್ವೇಸ್’ ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನು ಚೆರಿಲ್ ಆ್ಯನ್ ಕೌಟೋ ಅನ್ನುವವರು ಸುದೀಪ್ ಮತ್ತು ಪೈಲ್ವಾನ್ ಚಿತ್ರತಂಡ ಫೈಟ್ ಸೀನ್ ಶೂಟಿಂಗ್ ಗಾಗಿ ಮುಂಬಯಿಗೆ ಬಂದಿದ್ದಾಗ ಅಲ್ಲಿ ಮಳೆಯಲ್ಲಿ ಸಿಲುಕಿಕೊಂಡ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ ಮುಂಬಯಿಯಲ್ಲಿ ನೀವು ತೋರಿದ ಆದರಾತಿಥ್ಯಗಳಿಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.