Advertisement

ಖಾದಿ ಕಮಾಲ್‌

03:43 PM Mar 28, 2018 | |

ಬೇಸಿಗೆಗೆ ಕಾಲಿಟ್ಟಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಸಂಗ್ರಹದಲ್ಲಿ ಎಷ್ಟೇ ಅಂದಚೆಂದದ ಬಟ್ಟೆಗಳಿದ್ದರೂ ನಾವು ಹೊರ ತೆಗೆಯುವುದು ಕಾಟನ್‌ ಮತ್ತಿತರ ಬೇಸಿಗೆಸ್ನೇಹಿ ಉಡುಪುಗಳನ್ನು! ಬೇಸಿಗೆ ಸ್ನೇಹಿ ಉಡುಪು ಅಂದಕೂಡಲೆ ಕಾಟನ್‌ ಜೊತೆಗೆ ನೆನಪಾಗೋದು ಖಾದಿ ಬಟ್ಟೆಗಳು. 

Advertisement

ಬಿಸಿಲು ಚಳಿ ಏನೇ ಬರಲಿ…: ಖಾದಿಯ ವೈಶಿಷ್ಟವೆಂದರೆ, ಚಳಿಗಾಲ ಮತ್ತು ಬೇಸಿಗೆಕಾಲ ಎರಡಕ್ಕೂ ಅದು ಹೊಂದುತ್ತದೆ. ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಟ್ಟರೆ, ಬೇಸಿಗೆಯಲ್ಲಿ ತಂಪಾಗಿರಿಸುತ್ತದೆ. ಖಾದಿ ದಿರಿಸುಗಳು ಬೆವರನ್ನು ಹೀರಿ ನಮ್ಮನ್ನು ಯಾವತ್ತೂ ಡ್ರೈ ಆಗಿರಿಸುತ್ತೆ. ಇಪ್ಪತ್ತನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಇಂಗ್ಲಿಷ್‌ ಉತ್ಪನ್ನಗಳನ್ನು ಬಹಿಷ್ಕರಿಸುವ ಸ್ವದೇಶಿ ಚಳುವಳಿ ಮೂಲಕ ಖಾದಿ ಪ್ರಸಿದ್ಧಿ ಪಡೆಯಿತು.

ಖಾದಿ ಎಂದ ಕೂಡಲೇ ಅವೇ ಅಚ್ಚ ಬಿಳಿ ಬಣ್ಣದ ಸರಳ ಕುರ್ತಾಗಳೇ ನೆನಪಿಗೆ ಬರುತ್ತವೆ. ಅವುಗಳಲ್ಲಿ ಹೆಚ್ಚಿನ ಬಣ್ಣದ ಆಯ್ಕೆಗಳಿಲ್ಲ ಎನ್ನುವುದು ಬಹುತೇಕರ ದೂರಾಗಿತ್ತು. ಆದರೀಗ ಖಾದಿ ಮೇಕ್‌ ಓವರ್‌ ಪಡೆದಿದೆ. ಅದೀಗ ಸಾಹಿತ್ಯ ಕಾರ್ಯಕ್ರಮ, ಕಚೇರಿ ಕಾರ್ಯಕ್ರಮ, ಉತ್ಸವಗಳಿಗಷ್ಟೇ ಸೀಮಿತವಾಗಿಲ್ಲ. ಖಾದಿ ಅಂಗಿಗಳನ್ನು ಸೂಟ್‌ ಜೊತೆ, ಫಾರ್ಮಲ್‌ ಸ್ಕರ್ಟ್‌ ಜೊತೆ ಮತ್ತು ಪ್ಯಾರಲಲ್‌ ಪ್ಯಾಂಟ್‌ಗಳ ಜೊತೆ ತೊಟ್ಟು, ಆಫೀಸ್‌ಗೂ ಹೋಗಬಹುದು.

ಹೈಬ್ರಿಡ್‌ ಖಾದಿ!: ಸಾಂಪ್ರದಾಯಿಕ ಮತ್ತು ಭಾರತೀಯ ಶೈಲಿಯ ಉಡುಪುಗಳನ್ನು ತೊಡಲು ಇಷ್ಟ ಪಡುವವರು ಖಾದಿ ಬಟ್ಟೆಯ ಕುರ್ತಾ, ಲಂಗ, ಸೀರೆ, ಚೂಡಿದಾರ್‌ ಅಥವಾ ಸಲ್ವಾರ್‌ ಕಮೀಜ್‌ ಉಡುವುದು ಉತ್ತಮ. ಅದರಲ್ಲೂ ಪೇಸ್ಟಲ್‌ ಬಣ್ಣಗಳು, ಅಂದರೆ ಬಳಪದ ಕಡ್ಡಿಯ ಬಣ್ಣಗಳು (ತಿಳಿ ಬಣ್ಣಗಳು) ಕಣ್ಣಿಗೆ ಇಂಪು, ದೇಹಕ್ಕೂ ತಂಪು. ಖಾದಿ ಅಥವಾ ಖದ್ದರ್‌ ಬಟ್ಟೆ ಖಡಕ್‌ ಆಗಿ ಕಾಣಲು ಅದನ್ನು, ಗಂಜಿ ಹಿಟ್ಟಿನಲ್ಲಿ ಒಗೆಯಲಾಗುತ್ತದೆ. ಚರಕದಲ್ಲಿ ನೇಯಲಾಗುವ ಈ ಖಾದಿ ಬಟ್ಟೆ ತಯಾರಿಸಲು ಹತ್ತಿಯನ್ನು ಮಾತ್ರವಲ್ಲ, ರೇಷ್ಮೆ ಮತ್ತು ಉಣ್ಣೆಯನ್ನೂ ಬಳಸಲಾಗುತ್ತಿದೆ. 

ಅವರವರ ಭಾವಕ್ಕೆ…: ಬದಲಾದ ಕಾಲಮಾನಕ್ಕೆ ಹೊಂದುವಂತೆ ಈಗ ಖಾದಿ ವಸ್ತ್ರಗಳಲ್ಲೂ ಬಣ್ಣ ಬಣ್ಣದ ಆಕಾರಗಳು, ವಿನ್ಯಾಸಗಳು ಮತ್ತು ಚಿತ್ರಗಳನ್ನೂ ಬಿಡಿಸಲಾಗುತ್ತಿದೆ. ಧ್ಯಾನಸ್ಥ ಬುದ್ಧನ ಚಿತ್ರ, ಬೇರೆ ಬೇರೆ ಭಾಷೆಯ ಲಿಪಿಗಳ ಅಕ್ಷರಗಳು, ರೇಖಾಗಣಿತದಲ್ಲಿ ಬರುವ ಆಕೃತಿಗಳು, ದಿನಪತ್ರಿಕೆಯಂತೆ ಕಾಣುವ ಬಟ್ಟೆ ಪೂರ್ತಿ ಸುದ್ದಿಗಳ ವಿನ್ಯಾಸ, ಅನಿಮಲ್‌ ಪ್ರಿಂಟ್‌… ಹೀಗೆ ನಮ್ಮ ಊಹೆಗಿಂತಲೂ ಹೆಚ್ಚು ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಸಿದ್ಧ ವಿನ್ಯಾಸಗಳಲ್ಲದೆ ಕಸ್ಟಮೈಸ್ಡ್ (ನಮಗೆ ಬೇಕಾದ ಹಾಗೆ) ವಿನ್ಯಾಸದ ಸೌಲಭ್ಯವನ್ನೂ ಬಳಸಿಕೊಳ್ಳಬಹುದು. ಆ ಮೂಲಕ ನಮಗೆ ಬೇಕಾದ ವಿನ್ಯಾಸಗಳನ್ನು ಹೇಳಿ ಮಾಡಿಸಿಕೊಳ್ಳಲೂಬಹುದು. ಬಣ್ಣ ಮತ್ತು ಆಕೃತಿಗಳಿರುವ ಕುರ್ತಾಗಳನ್ನು ಮಾರುವ ಅಂಗಡಿಗಳು ಆನ್‌ಲೈನ್‌ನಲ್ಲೂ ಲಭ್ಯವಿವೆ. 

Advertisement

ಸ್ಲಿವ್‌ಲೆಸ್‌ ಖಾದಿ: ಖಾದಿ ಕುರ್ತಾಗಳಲ್ಲಿ ಸ್ಲಿವ್‌ಲೆಸ್‌ ಆಯ್ಕೆಗಳೂ ಇವೆ. ಉದ್ದ ತೋಳಿನ ಕುರ್ತಾಗಳಲ್ಲಿ ಬೆಲ್‌ ಬಾಟಮ್‌ ತೋಳು, ಮುಕ್ಕಾಲು ತೋಳು, ಪುಶ್‌ ಪಫ್ ತೋಳು, ಕ್ಯಾಪ್‌ ಸ್ಲಿವ್‌, ಫೋಲೆಡ್‌ ತೋಳು, ಗುಂಡಿ (ಬಟನ್‌) ಇರುವ ತೋಳು ಮುಂತಾದ ಆಯ್ಕೆಗಳಿವೆ. ಇವುಗಳಲ್ಲಿ ಅಂಗಿಯಂತೆ ಕಾಲರ್‌ ಲಭ್ಯ. ಚೂಡಿದಾರದ ಟಾಪ್‌ನಂತೆ ಬಗೆಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ.

ಇಂಥ ಖಾದಿ ಕುರ್ತಾಗಳನ್ನು ಜೀನ್ಸ್ ಪ್ಯಾಂಟ್‌, ಫಾರ್ಮಲ್‌ ಪ್ಯಾಂಟ್‌, ಉದ್ದ ಲಂಗ, ಲೆಗಿಂಗ್ಸ್, ಪಟಿಯಾಲ ಪ್ಯಾಂಟ್‌ ಅಥವಾ ಹ್ಯಾರೆಮ್‌ ಪ್ಯಾಂಟ್‌ಗಳ ಜೊತೆಗೂ ತೊಡಬಹುದಾಗಿದೆ. ಆದ್ದರಿಂದ ಕ್ಯಾಶುವಲ್‌ ಉಡುಗೆ ಆಗಿರಲಿ, ಫಾರ್ಮಲ್‌ ದಿರಿಸೇ ಆಗಿರಲಿ, ಅಥವಾ ಸಾಂಪ್ರದಾಯಿಕ ಉಡುಪೇ ಆಗಿರಲಿ, ಎಲ್ಲಾ ಥರದ ಬಟ್ಟೆಗಳ ಜೊತೆಗೂ ಸೈ ಎನಿಸಿಕೊಳ್ಳುತ್ತದೆ ಈ ಖಾದಿ ಕುರ್ತಾ. 

* ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next