Advertisement

ಪ್ರಧಾನಿ ಕನಸು ನನಸು ಮಾಡಲು ಸಿದ್ಧರಾಗಿ

04:55 PM Dec 18, 2022 | Team Udayavani |

ಚಿಕ್ಕಬಳ್ಳಾಪುರ: ಪ್ರಧಾನಿ ಮೋದಿ ಅವರು ಹೇಳಿದಂತೆ ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾ ಮೂಲಕ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನೇ ಬಳಸುವ ಮೂಲಕ ದೇಶವನ್ನು ಆರ್ಥಿಕವಾಗಿ ಸದೃಢ ಮಾಡಬೇಕೆಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅಭಿಪ್ರಾಯಪಟ್ಟರು.

Advertisement

ನಗರದ ಒಕ್ಕಲಿಗರ ಭವನದಲ್ಲಿ ಆಯೋಜಿಸಿದ್ದ ಖಾದಿ ಉತ್ಸವ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಸ್ವರಾಜ್ಯದ ಕನಸನ್ನು ಗಾಂಧೀಜಿಯವರು ಕಂಡಿದ್ದರು. ನಮ್ಮದೇ ಹತ್ತಿಯಿಂದ ತಯಾರಿಸಿದ ವಸ್ತುಗಳನ್ನು ನಮಗೇ ಮಾರಿ ಬ್ರಿಟಿಷರು ಆರ್ಥಿಕವಾಗಿ ಸದೃಢರಾಗುತ್ತಿದ್ದರು. ಇದನ್ನು ಅರ್ಥ ಮಾಡಿಕೊಂಡ ಗಾಂಧೀಜಿಯವರು ಸ್ವದೇಶಿ ವಸ್ತ್ರ ಚಳವಳಿ ಮೂಲಕ ದೇಶದ ಜನರಲ್ಲಿ ಅರಿವು ಮೂಡಿಸಿದರು ಎಂದರು.

ಖಾದಿ ಸರಳತೆಯ ಪ್ರತಿಬಿಂಬ: ಖಾದಿ ಸರಳತೆಯನ್ನು ಬಿಂಬಿಸುತ್ತದೆ. ದೇಶೀತನವನ್ನು ಖಾದಿ ಎತ್ತಿ ತೋರಿಸಲಿದೆ. ಪ್ರಧಾನಿ ಮೋದಿ ಅವರು ಮನ್‌ ಕೀ ಬಾತ್‌ ಮೊದಲ ಕಾರ್ಯಕ್ರಮದಲ್ಲಿ ಖಾದಿ ವಿಷಯ ಪ್ರಸ್ತಾಪಿಸಿದರು. ಪ್ರಧಾನಿಯವರೂ ಖಾದಿಯನ್ನೇ ಧರಿಸುತ್ತಾರೆ. ಬಾಲಗಂಗಾಧರ ನಾಥ ತಿಲಕ್‌ ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದಿದ್ದರು. ಖಾದಿಯ ಗ್ರಾಮ ಸ್ವರಾಜ್ಯದ ಅಲೋಚನೆಯೂ ಸ್ವಾತಂತ್ರ್ಯ ಬರಲು ಒಂದು ಕಾರಣವಾಗಿದೆ. ಉತ್ಸವದಲ್ಲಿ ಗುಣಮಟ್ಟದ ಸೀರೆಗಳನ್ನು ತಂದಿದ್ದಾರೆ. ನಮ್ಮದೇ ಜಿಲ್ಲೆಯ ತಾಲೂಕಿನ ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳು ಬಂದಿವೆ ಇದಕ್ಕೆ ವಿಶೇಷ ಒತ್ತು ನೀಡಿ ಸಚಿವರು, ಅಧ್ಯಕ್ಷರು ಮುತುವರ್ಜಿ ವಹಿಸುತ್ತಿದ್ದಾರೆ ಎಂದರು.

ಬಾಗಲಕೋಟೆ ಮತ್ತು ಹುಬ್ಬಳ್ಳಿಯ ಖಾದಿ ಕೇಂದ್ರಗಳ ರಕ್ಷಣೆಗೆ ಸರ್ಕಾರ ಕ್ರಮವಹಿಸಲಿದೆ. ರಾಷ್ಟ್ರಧ್ವಜ ತಯಾರಿಸುವ ಏಕೈಕ ಕೇಂದ್ರ ತುಳಸಿಗೆರೆ ಖಾದಿ ಕೇಂದ್ರ, ಮಾಜಿ ಸಿಎಂ ಯಡಿಯೂರಪ್ಪ ಅವರು ಕೋವಿಡ್‌ ಸಂದರ್ಭದಲ್ಲಿ ನೇಕಾರರಿಗಾಗಿಯೇ ವಿಶೇಷ ಪ್ಯಾಕೇಜ್‌ ನೀಡಿದ್ದರು. ನೇಕಾರರ ಸಮ್ಮಾನ್‌ ಯೋಜನೆ ಮೂಲಕ 54,789 ಫಲಾನುಭವಿಗಳಿಗೆ ತಲಾ 2 ಸಾವಿರದಂತೆ ಪ್ರತಿ ವರ್ಷ 10 ಕೋಟಿ ಸಹಾಯ ನೀಡಲಾಗುತ್ತಿದೆ ಎಂದರು.

2014 ಮತ್ತು 2015 ರಲ್ಲಿ ಶೇ.170 ರಷ್ಟಿದ್ದ ಖಾದಿ ಮಂಡಳಿ ವಹಿವಾಟು ಇಂದು ಶೇ. 248ಕ್ಕೆ ಏರಿದೆ. ಅಂದರೆ ವಹಿವಾಟಿನಲ್ಲಿ ದ್ವಿಗುಣವಾಗಿದೆ. ಜತೆಗೆ 3,528 ಕೋಟಿಯನ್ನು ಮಂಡಳಿ ಗಳಿಸಿದೆ ಎಂದು ಸಚಿವರು ಅಂಕಿ ಅಂಶ ಸಮೇತ ವಿವರಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್‌, ಸಿಇಒ ಬಸವರಾಜ್‌, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್‌ ಕಿರಣ್‌, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌. ಕೇಶವರೆಡ್ಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ಡಿ.ಎಸ್‌. ಆನಂದರೆಡ್ಡಿ(ಬಾಬು), ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮುನಿರಾಜು, ನಿರ್ಮಲಾಪ್ರಭು, ರಾಮಸ್ವಾಮಿ, ರಾಜಣ್ಣ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಎ.ಬಿ.ರಾಜಶೇಖರ್‌ ಇತರರಿದ್ದರು.

ನೀವೇ ಉದ್ಯೋಗದಾತರಾಗಿ: ಯುವಕರು ಉದ್ಯೋಗಕ್ಕಾಗಿ ಹುಡುಕುವುದನ್ನು ಬಿಟ್ಟು ನೀವೇ ಉದ್ಯೋಗದಾತರಾಗಿ. ದೇಶದಲ್ಲಿ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಸಬ್ಸಿಡಿ ನೀಡಲಾಗುತ್ತಿದೆ. ಈ ಸಬ್ಸಿಡಿ ಲಕ್ಷಾಂತರ ರೂ.ಗಳವರೆಗೂ ಇದ್ದು, ಪ್ರಧಾನಿ ಉದ್ಯಮ ಸೃಜನ ಶೀಲತೆ ಬಗ್ಗೆ ವಿಶೇಷ ಕಾರ್ಯಕ್ರಮ ಇದೆ. ಸಂಬಂಧಿಸಿದವರಿಂದ ಸೂಕ್ತ ಮಾರ್ಗದರ್ಶನ ಪಡೆದು ಯುವಕರು ಮುಂದೆ ಸಾಗಬೇಕು ಎಂದು ಸಚಿವರು ಸಲಹೆ ನೀಡಿದರು.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈಗಾಗಲೇ ಖಾದಿ ಉತ್ಸವ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಐದನೇ ಜಿಲ್ಲೆಯಾಗಿದ್ದು, ಜಿಲ್ಲೆಯಲ್ಲಿ 9 ದಿನಗಳ ಕಾಲ ನಡೆಯಲಿರುವ ಖಾದಿ ಉತ್ಸವವನ್ನು ನಾಗರಿಕರು ಸದುಪಯೋಗಪಡಿಸಿಕೊಂಡು ಖಾದಿ ಉದ್ಯಮದ ಅಭಿವೃದ್ಧಿಗೆ ತಮ್ಮ ಪಾಲಿನ ಸಹಕಾರ ನೀಡಬೇಕೆಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next