ಪ್ಯಾರಿಸ್: ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಮತ್ತೆ ವಿಶ್ವದ ನಂಬರ್ ವನ್ ಟೆನಿಸ್ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ. ಇನ್ನೊಂದೆಡೆ ಹಿರಿಯ ಟೆನಿಸಿಗ ರೋಜರ್ ಫೆಡರರ್ 4 ಸ್ಥಾನಗಳ ನೆಗೆತ ಕಂಡು 6ನೇ ಸ್ಥಾನ ಅಲಂಕರಿಸಿದ್ದಾರೆ. ಇವರಿಬ್ಬರ ಸಾಧನೆಗೆ ಮೆಟ್ಟಿಲಾದದ್ದು ಇಂಡಿಯನ್ ವೆಲ್ಸ್ ಟೆನಿಸ್ ಪಂದ್ಯಾವಳಿ.
29ರ ಹರೆಯದ ಕೆರ್ಬರ್ ಇಂಡಿಯನ್ ವೆಲ್ಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗದೇ ಹೋದರೂ ಅಗ್ರಸ್ಥಾನ ಅಲಂಕರಿಸಲು 4ನೇ ಸುತ್ತಿನ ವರೆಗಿನ ಪಯಣವೇ ಸಾಕಾಯಿತು. ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ದ್ವಿತೀಯ ಸ್ಥಾನಕ್ಕೆ ಇಳಿದರು. ಸೆರೆನಾ ಗಾಯಾಳಾದ ಕಾರಣ ಇಂಡಿಯನ್ ವೆಲ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ನಂಬರ್ ವನ್ ಕಿರೀಟ ಉಳಿಸಿಕೊಳ್ಳುವಲ್ಲಿ ವಿಫಲರಾದರು. ಡಬ್ಲ್ಯುಟಿಎ ಟಾಪ್-10 ರ್‍ಯಾಂಕಿಂಗ್ ಯಾದಿಯಲ್ಲಿ ಬೇರೆ ಯಾವುದೇ ಗಮನಾರ್ಹ ಬದಲಾವಣೆ ಸಂಭವಿಸಿಲ್ಲ.
ಆರಕ್ಕೇರಿದ ಫೆಡರರ್: ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ ಈಗ 6ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ. ಫೆಡರರ್ ಅವರದು 4 ಸ್ಥಾನಗಳ ನೆಗೆತ. ಇದರಿಂದ ರಫೆಲ್ ನಡಾಲ್ ಒಂದು ಸ್ಥಾನ ಕೆಳಕ್ಕಿಳಿದರು. ಆ್ಯಂಡಿ ಮರ್ರೆ ಮತ್ತು ನೊವಾಕ್ ಜೊಕೋವಿಕ್ ಮೊದಲೆರಡು ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್-10 ಎಟಿಪಿ ರ್‍ಯಾಂಕಿಂಗ್: 1. ಆ್ಯಂಡಿ ಮರ್ರೆ (12,005), 2. ಜೊಕೋವಿಕ್ (8,915), 3. ವಾವ್ರಿಂಕ (5,705), 4. ಕೀ ನಿಶಿಕೊರಿ (4,730), 5. ಮಿಲೋಸ್ ರಾನಿಕ್ (4,480), 6. ಫೆಡರರ್ (4,305), 7. ನಡಾಲ್ (4,145), 8. ಡೊಮಿನಿಕ್ ಥೀಮ್ (3,465), 9. ಮರಿನ್ ಸಿಲಿಕ್ (3,420), 10. ಸೋಂಗ (3,310).
ಟಾಪ್-10 ಡಬ್ಲ್ಯುಟಿಎ ರ್‍ಯಾಂಕಿಂಗ್: 1. ಕೆರ್ಬರ್ (7,515), 2. ಸೆರೆನಾ ವಿಲಿಯಮ್ಸ್ (7,130), 3. ಪ್ಲಿಸ್ಕೋವಾ (5,640), 4. ಡೊಮಿನಿಕಾ ಸಿಬುಲ್ಕೋವಾ (5,160), 5. ಸಿಮೋನಾ ಹಾಲೆಪ್ (5,022), 6. ಗಾರ್ಬಿನ್ ಮುಗುರುಜಾ (4,790), 7. ಸ್ವೆತ್ಲಾನಾ ಕುಜ್ನೆತ್ಸೋವಾ (4,555), 8. ಅಗ್ನಿಸ್ಕಾ ರಾದ್ವಂಸ್ಕಾ (4,345), 9. ಮ್ಯಾಡಿಸನ್ ಕೇಯ್ಸ (4,007), 10. ಎಲಿನಾ ಸ್ವಿಟೋಲಿನಾ (3,850).