Advertisement

Passes Away: ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ವಿಧಿವಶ

11:41 PM Dec 26, 2024 | Team Udayavani |

ಹೊಸದಿಲ್ಲಿ: ತೀವ್ರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನಮೋಹನ್‌ ಸಿಂಗ್‌ (92 ವರ್ಷ) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

Advertisement

ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ ಮೋಹನ್‌ ಸಿಂಗ್‌ ಕಳೆದ ಕೆಲವು ತಿಂಗಳುಗಳಿಂದ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು. ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದರಿಂದ ದಿಲ್ಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು.

ಮನಮೋಹನ್‌ ಸಿಂಗ್ ಅವರು ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದ ಕಾರಣಗಳಿಂದ ರಾಜಕೀಯದಿಂದ ದೂರವಿದ್ದರು ಮತ್ತು 2024ರ ಆರಂಭದಿಂದಲೂ ಅವರ ಆರೋಗ್ಯ ಚೆನ್ನಾಗಿರಲಿಲ್ಲ. 2024ರ ಜನವರಿಯಲ್ಲಿ ಅವರು ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಪುತ್ರಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಡಾ. ಮನಮೋಹನ್‌ ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರ ಅಗಲಿದ್ದಾರೆ. 1991ರಲ್ಲಿ ರಾಜ್ಯಸಭೆಗೆ ಪ್ರವೇಶಿಸುವ  ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಿ, 2024ರ ಏಪ್ರಿಲ್​ನಲ್ಲಿ  ರಾಜ್ಯಸಭೆ ಅಧಿಕಾರವಧಿ ಅಂತ್ಯವಾಗಿತ್ತು. ಈ ಮೂಲಕ ಅವರು ಸಂಸತ್ತಿನ ಮೇಲ್ಮನೆಯಲ್ಲಿ 33 ವರ್ಷ ಕಾಲ ಕಾರ್ಯನಿರ್ವಹಿಸಿದ್ದರು.

ಆರ್ಥಿಕ ಸುಧಾರಣೆಯ ಶಿಲ್ಪಿ:
ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಸಿಂಗ್, 1991ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರು. ಅವರು 1991ರಿಂದ 1996ರವರೆಗೆ ಪಿ.ವಿ.ನರಸಿಂಹ ರಾವ್ ನೇತೃತ್ವದ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬಳಿಕ 2004 ರಿಂದ 2014ರವರೆಗೆ ದೇಶದ ಪ್ರಧಾನಿಯಾಗಿದ್ದರು.

Advertisement

ಆರಂಭಿಕ ಜೀವನ:
ಮನಮೋಹನ್‌ ಸಿಂಗ್  1932ರ ಸೆ. 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ಡಾ. ಸಿಂಗ್  ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದರು. ಅವರ ಶೈಕ್ಷಣಿಕ ಸಾಧನೆ ಅವರನ್ನು ಪಂಜಾಬ್ ನಿಂದ ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಕರೆದೊಯಿತು. ಅಲ್ಲಿ ಅವರು 1957ರಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು.

ಗಣ್ಯರಿಂದ ಸಂತಾಪ:
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು,  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಹಲವು ಕೇಂದ್ರ ಸಚಿವರು, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ,  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಿಯಾಂಕಾ ಪತಿ ರಾಬರ್ಟ್‌ ವಾದ್ರಾ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರು ಸೇರಿ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next