ಕೊಚ್ಚಿ : ಕೇರಳದ ಶಬರಿಮಲೆಯಲ್ಲಿನ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯೋವರ್ಗದ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್ ನಲ್ಲಿ ಐತಿಹಾಸಿಕ ತೀರ್ಪು ನೀಡಿದುದನ್ನು ಅನುಸರಿಸಿ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿದ್ದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದೆ.
ರೆಹಾನಾ ಫಾತಿಮಾ ಅವರ ಕೆಲವೊಂದು ಫೇಸ್ ಬುಕ್ ಪೋಸ್ಟ್‌ಗಳು ಧಾರ್ಮಿಕ ಮನೋಭಾವನೆಯನ್ನು ನೋಯಿಸುವಂತಿದೆ ಎಂದು ರಾಧಾಕೃಷ್ಣ ಮೆನನ್ ಎಂಬವರು ದಾಖಲಿಸಿದ ದೂರಿನ ಆಧಾರದಲ್ಲಿ ಪತ್ತನಂತಿಟ್ಟ ಪೊಲೀಸರು ಫಾತಿಮಾ ವಿರುದ್ಧ ಐಪಿಸಿ ಸೆ.295ಎ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು.
ತನ್ನನ್ನು ಪೊಲೀಸರು ಬಂಧಿಸಬಹುದೆಂಬ ಶಂಕೆಯಲ್ಲಿ ಫಾತಿಮಾ ಕೇರಳ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆಕೆಯ ಈ ಅರ್ಜಿಯನ್ನು ವಜಾ ಮಾಡಿದ ಕೇರಳ ಹೈಕೋರ್ಟ್, ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದು ಹೇಳಿತು.