ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ನಡೆಯುತ್ತಿರುವ ದೇಶವಿರೋಧಿ ಮತ್ತು ರಾಜ್ಯ ವಿರೋಧಿ ಚಟುವಟಿಕೆಗಳ ಬಗ್ಗೆ ಮಾಹಿತಿಗಾಗಿ ಮಾಡಿದ ಮನವಿಗೆ ಮೌನ, ನಿಷ್ಕ್ರಿಯತೆ ಮತ್ತು ಅತಿಯಾದ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮಂಗಳವಾರ(ಅ8 ) ಆರೋಪಿಸಿದ್ದಾರೆ.
ಚುನಾಯಿತ ಸರ್ಕಾರಕ್ಕೆ ತಿಳಿಸದೆ ರಾಜ್ಯಪಾಲರು ಅಧಿಕಾರಿಗಳನ್ನು ಕರೆಸುವಂತಿಲ್ಲ ಎಂದು ವಿಜಯನ್ ಅವರು ಖಾನ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಕಟುಆರೋಪ ಬಂದಿದೆ.
ರಾಜ್ಯಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದು ಅದರಿಂದ ಬರುವ ಹಣವನ್ನು ದೇಶವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಮಾಡಿರುವ ಕುರಿತು ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಮತ್ತು ಡಿಜಿಪಿ ಶೇಕ್ ದರ್ವೇಶ್ ಸಾಹೇಬ್ ಅವರಿಂದ ಸಂಕ್ಷಿಪ್ತ ವಿವರಣೆಯನ್ನು ಕೋರಿ ಪತ್ರವನ್ನು ಬರೆಯಲಾಗಿತ್ತು. ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ಫೋನ್ ಕದ್ದಾಲಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನೂ ರಾಜ್ಯಪಾಲರು ಕೇಳಿದ್ದರು. ಪತ್ರ ಬರೆದ ಬಳಿಕ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಇಬ್ಬರೂ ರಾಜ್ಯಪಾಲರನ್ನು ಭೇಟಿ ಮಾಡಿರಲಿಲ್ಲ.
”ರಾಷ್ಟ್ರವಿರೋಧಿ ಚಟುವಟಿಕೆಗಳಂತಹ ಗಂಭೀರ ವಿಷಯಗಳ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡುವ ಮತ್ತು ರಾಜ್ಯಪಾಲರ ಮನವಿಯನ್ನು ವಾಡಿಕೆಯ ಆಡಳಿತಾತ್ಮಕ ವಿಷಯವಾಗಿ ಪರಿಗಣಿಸುವ ತನ್ನ ಸಾಂವಿಧಾನಿಕ ಕರ್ತವ್ಯದಿಂದ ಹಿಂದೆ ಸರಿಯುವ ಸರಕಾರವು ಸಾಂವಿಧಾನಿಕ ನಿಬಂಧನೆಗಳು ಮತ್ತು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿ ವರ್ತಿಸುವ ಅಪಾಯವನ್ನು ಎದುರಿಸುತ್ತಿದೆ” ಎಂದು ರಾಜ್ಯಪಾಲ ಆರಿಫ್ ಖಾನ್ ಕಿಡಿ ಕಾರಿದ್ದಾರೆ.