Advertisement

ಕೇರಳ ಸರಕಾರ ಹಿಂದೂಗಳನ್ನು ವಿಭಜಿಸಲು ಪ್ರಯತ್ನಿಸುತ್ತಿದೆ

09:17 AM Oct 21, 2018 | Team Udayavani |

ಶಬರಿಮಲೆ ವಿವಾದ ಭುಗಿಲೆದ್ದಿದೆ. ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ನಿತ್ಯವೂ ಪ್ರತಿಭಟನೆಗಳು ನಡೆಯುತ್ತಿವೆ.ಈ ಪ್ರತಿಭಟನೆಗಳ ಮುಂಚೂಣಿ ಮುಖವಾಗಿರುವವರು ಪಂದಳಂ ಪ್ಯಾಲೇಸ್‌ ನಿರ್ವಹಣಾ ಸಮಿತಿಯ ಅಧ್ಯಕ್ಷ ಶಶಿಕುಮಾರ್‌ ವರ್ಮಾ. ಶಶಿಕುಮಾರ್‌ ಪಂದಳಂ ರಾಜಮನೆತನಕ್ಕೆ ಸೇರಿದವರು. ಪಂದಳಂ ಅರಮನೆಯಲ್ಲೇ ಅಯ್ಯಪ್ಪನ ಜನನವಾಯಿತೆಂದು ಹೇಳಲಾಗುತ್ತದೆ. ಶಬರಿಮಲೆ ರಕ್ಷಿಸಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಶಿಕುಮಾರ್‌, ಪಿಣರಾಯಿ ವಿಜಯನ್‌ ನೇತೃತ್ವದ ಕೇರಳದ ಸರಕಾರ ಹಿಂದೂಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ ಎನ್ನುತ್ತಾರೆ…

Advertisement

ಶಬರಿಮಲೆ ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿರೋಧಿಸಿ ನಡೆದ ಅನೇಕ ಪ್ರತಿಭಟನೆಗಳಲ್ಲಿ ನೀವು ಭಾಗಿಯಾಗಿದ್ದೀರಿ..
ನ್ಯಾಯಮೂರ್ತಿಗಳಿಗೆ ಕೇರಳದ ಮಂದಿರಗಳ ಬಗ್ಗೆ, ದರಲ್ಲೂ ಶಬರಿಮಲೆ ದೇವಸ್ಥಾನದ ಆಚರಣೆಗಳು ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲವೆಂದು ನನಗನ್ನಿಸುತ್ತದೆ. ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಆಚರಣೆ-ಸಂಪ್ರದಾಯಕ್ಕೂ, ಕೇರಳದಲ್ಲಿರುವ ಇತರೆ ಅಯ್ಯಪ್ಪ ಸ್ವಾಮಿ ದೇವಸ್ಥಾನಗಳ ಆಚರಣೆ- ಸಂಪ್ರದಾಯ ಗಳಿಗೂ ವ್ಯತ್ಯಾಸವಿದೆ. ಇಂಥ ಸಂಪ್ರದಾಯಗಳ ಹಿನ್ನೆಲೆ ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸಬೇಕಿತ್ತು. ನಾವು ನ್ಯಾಯಾಲಯದ ತೀರ್ಪನ್ನು ಕಿವಿಗೊಟ್ಟು ಆಲಿಸುತ್ತಿದ್ದೆವು. ಯಾವಾಗ ನ್ಯಾಯಮೂರ್ತಿಗಳು “ನಾವು ಮಂದಿರದ ಆಚರಣೆಗಳ ಬಗ್ಗೆ ಚಿಂತಿಸುತ್ತಿಲ್ಲ ಬದಲಾಗಿ, ಈ ದೇಶದ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆಯಷ್ಟೇ ವಿಚಾರ ಮಾಡುತ್ತಿದ್ದೇವೆ’ ಎಂದು ಹೇಳಿದಾಗಲೇ ಈ ತೀರ್ಪು ಮಂದಿರದ ಸಂಪ್ರದಾಯಕ್ಕೆ ವಿರುದ್ಧವಾಗಿ ಬರಲಿದೆ ಎನ್ನುವುದು ನಮಗೆ ಅರ್ಥವಾಗಿತ್ತು.

ಬಹುಶಃ ವಕೀಲರು ಸ್ಪಷ್ಟವಾಗಿ ವಾದ ಮಂಡಿಸಿ ಇದನ್ನೆಲ್ಲ ಅರ್ಥಮಾಡಿಸಲು ವಿಫ‌ಲರಾದರೇನೋ?
ಇದು ಶಬರಿಮಲೆ ಮಂದಿರವನ್ನು ಅರ್ಥ ಮಾಡಿಕೊಳ್ಳದಿರುವ ವಿಚಾರವೇನೂ ಅಲ್ಲ. ಅವರು ಕೇವಲ ಮೂಲಭೂತ ಹಕ್ಕುಗಳ ಬಗ್ಗೆ ಯೋಚಿಸಿದರು. ನಮಗೆ, ಅಂದರೆ, ಮಂದಿರದ ಜೊತೆ ನಿಕಟವಾಗಿರುವವರಿಗೆ ಈ ಸಂಪ್ರದಾಯಗಳು ಮತ್ತು ಆಚರಣೆಗಳ ಬಗ್ಗೆ ವಿಶಿಷ್ಟ ಭಾವನೆಯಿರುತ್ತದೆ. ಮಂದಿರದ ಬಗ್ಗೆ ನಮಗಿರುವಷ್ಟು ನಿಕಟತೆ ಅವರಿಗೆ ಇರುವುದಿಲ್ಲ. ನಿಮಗೆ ಗೊತ್ತಿರಬಹುದು, ಕೇರಳದ ಉಳಿದ ಮಂದಿರ ಗಳಿಗಿಂತ ಶಬರಿಮಲೆ ಮಂದಿರ ಭಿನ್ನವಾಗಿದೆ. ಬಹುಶಃ ಅವರಿಗೆ ಈ ಮೂಲಭೂತ ವ್ಯತ್ಯಾಸವನ್ನು ಅರ್ಥಮಾಡಿ ಕೊಳ್ಳಲು ಆಗಲಿಲ್ಲ ಅನ್ನಿಸುತ್ತೆ. ಅಥವಾ ಅರ್ಥಮಾಡಿಕೊ ಳ್ಳುವುದಕ್ಕೆ ಅವರಿಗೆ ಆಸಕ್ತಿಯಿ ಇಲಿಲ್ಲವೇನೋ? ಅಥವಾ ಮೊದಲೇ ಈ ವಿಚಾರದಲ್ಲಿ ಅವರು ಒಂದು ಅಭಿಪ್ರಾಯ ತಾಳಿಬಿಟ್ಟಿದ್ದರೇನೋ? ಒಟ್ಟು 400ಕ್ಕೂ ಹೆಚ್ಚು ಪುಟಗಳಷ್ಟಿದೆ ತೀರ್ಪು. ಆದರೆ ಅದರಲ್ಲೆಲ್ಲೂ ನಾವು ಮುಂದಿಟ್ಟ ವಾದಗಳ ಬಗ್ಗೆ ಉಲ್ಲೇಖವೇ ಇಲ್ಲ. 

ನ್ಯಾಯಮೂರ್ತಿಗಳು ಕೇವಲ ಮೂಲಭೂತ ಹಕ್ಕುಗಳ ಆಯಾಮದಿಂದ ಈ ವಿಷಯವನ್ನು ನೋಡುತ್ತಿದ್ದಾರೆ ಎಂದು ನೀವನ್ನುತ್ತೀರಿ. ಆದರೆ ಶಬರಿಮಲೆ ಮಂದಿರವು ಒಂದು ವಯೋಮಾನದ ಮಹಿಳೆಯರಿಗೆ ಮಂದಿರ ಪ್ರವೇಶಕ್ಕೆ ಅನುಮತಿ ನೀಡದೆ ತಾರತಮ್ಯ ಮಾಡುತ್ತಿದೆ ಎನ್ನುವ ಆರೋಪಕ್ಕೇನಂತೀರಿ?
ಖಂಡಿತ ಶಬರಿಮಲೆ ಮಂದಿರ ತಾರತಮ್ಯ ಮಾಡುವುದೇ ಇಲ್ಲ. ಇದನ್ನೆಲ್ಲ ತಪ್ಪಾಗಿ ಅರ್ಥೈಸಲಾಗಿದೆ. ನೋಡಿ, ಒಂದು ವಯೋಮಾನಕ್ಕೆ ಸಂಬಂಧಿಸಿದ ಮಹಿಳೆಯರಿಗಷ್ಟೇ ಮಂದಿರ ಪ್ರವೇಶವಿಲ್ಲ. ಅಷ್ಟಕ್ಕೂ ಗಂಡಸರಿಗೆ ಈ ಕಾರಣಗಳ ಬಗ್ಗೆ ತಿಳಿದಿಲ್ಲ ಎನ್ನುವಂತೇನೂ ಇಲ್ಲ. ಎಲ್ಲಾ ಗಂಡಸರೂ ಮಹಿಳೆಯರಿಗೇ ಹುಟ್ಟಿದ್ದಲ್ಲವೇ? ಇಲ್ಯಾರು ಸ್ವಯಂಭೂ ಇದ್ದಾರೆ?  ನಾವು ನ್ಯಾಯಾಲಯಕ್ಕೆ ಮಂದಿರದ ಇತಿಹಾಸದ ಕುರಿತ ಎಲ್ಲಾ ವಿವರಗಳನ್ನು ಸಲ್ಲಿಸಿದೆವು. ಇವನ್ನೆಲ್ಲ ತಯಾರಿಸುವಲ್ಲಿ ನಾನೂ ವಕೀಲರ ಜೊತೆಗಿದ್ದವನು. 1991ರಲ್ಲಿ  ಹೈಕೋರ್ಟ್‌ನಲ್ಲಿ ಮೊದಲ ಬಾರಿಗೆ ಮಂದಿರದ ವಿರುದ್ಧ ಕೇಸ್‌ ಹಾಕಲಾಯಿತು. ಆದರೆ ಮಂದಿರದಲ್ಲಿ ಏನಾಗುತ್ತಿದೆ ಎನ್ನುವುದರ ಸಂಪೂರ್ಣ ಚಿತ್ರಣ ತಿಳಿದು ಕೊಳ್ಳುವುದಕ್ಕಾಗಿ ಹೈಕೋರ್ಟ್‌ನ ಅಂದಿನ ನ್ಯಾಯ ಮೂರ್ತಿಗಳು, ಅಯ್ಯಪ್ಪ ದೇವಸ್ಥಾನದ ಸಂಪ್ರದಾಯ ಹಾಗೂ ಆಚರಣೆಗಳಿಗೆ ಸಂಬಂಧಿಸಿದ ಎಲ್ಲಾ ಜನರನ್ನೂ ಕರೆಸಿದ್ದರು. ನಮ್ಮ ಪಂದಳಂ ಪ್ಯಾಲೆಸ್‌ನ ಹಿರಿಯರನ್ನೂ ಅವರು ಆಗ ಕರೆಸಿದ್ದರು. 10-50ರ ವಯೋಮಾನದ ನಡುವಿನ ಹೆಣ್ಣುಮಕ್ಕಳಿಗೆ ಮಂದಿರ ಪ್ರವೇಶವಿಲ್ಲ ಎಂದು ಅಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ ಕೂಡ ಇಂಥದ್ದೇ ಪ್ರಕ್ರಿಯೆಯನ್ನು ಅನುಸರಿಸಿದ್ದರೆ, ಶಬರಿಮಲೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಚಿತ್ರಣ ಸಿಗುತ್ತಿತ್ತು. 

1991ಕ್ಕೂ ಮುನ್ನ, ಅಂದರೆ ಹೈಕೋರ್ಟ್‌ ತೀರ್ಪು ಹೊರಬರುವವರೆಗೂ ಎಲ್ಲಾ ವಯೋಮಾನದ ಹೆಣ್ಣು ಮಕ್ಕಳಿಗೆ ಮಂದಿರ ಪ್ರವೇಶಕ್ಕೆ ಅವಕಾಶವಿತ್ತು ಎಂದು ಅನೇಕರು ಹೇಳುತ್ತಾರೆ… 
ಇದು ಮಹಾ ಸುಳ್ಳು. ಈ ವದಂತಿಯನ್ನು ನಿವೃತ್ತ ಅಧಿಕಾರಿಯೊಬ್ಬರು ಹರಿಬಿಡುತ್ತಿದ್ದಾರೆ. ಬೇಕಿದ್ದರೆ ನೀವೊಮ್ಮೆ ಬ್ರಿಟಿಷರು ನಡೆಸಿದ ಭಾರತೀಯ ಸಮೀಕ್ಷೆಯನ್ನು ಗಮನಿಸಿ. ಶಬರಿಮಲೆಯಲ್ಲಿ ಆಗಲೇ ಇಂಥ ಸಂಪ್ರದಾಯವಿರುವುದು ತಿಳಿಯುತ್ತದೆ. ಇದಷ್ಟೇ ಅಲ್ಲ, ಭಾರತ ಸರಕಾರ ಪ್ರಕಟಿಸಿದ “ಟೆಂಪಲ್ಸ್‌ ಆಫ್ ಇಂಡಿಯಾ’ ಪುಸ್ತಕದಲ್ಲೂ ಶಬರಿಮಲೆಯಲ್ಲಿನ ಈ ನಿರ್ದಿಷ್ಟ ಆಚರಣೆಯ ಬಗ್ಗೆ ಉಲ್ಲೇಖವಿದೆ. ಮಂದಿರ ನಿರ್ಮಾಣವಾದಾಗಿನಿಂದಲೂ ನಿರ್ದಿಷ್ಟ ವಯೋಮಾನದ ಹೆಣ್ಣುಮಕ್ಕಳಿಗೆ ನಿಷೇಧವಿದ್ದೇ ಇದೆ. 

Advertisement

ಇಂಥದ್ದೊಂದು ನಿಯಮಕ್ಕೆ ಕಾರಣವೇನು?
ಒಂದೊಂದು ಮಂದಿರವೂ ಒಂದೊಂದು ರೀತಿಯ ಸಂಪ್ರದಾಯಗಳನ್ನು ಪಾಲಿಸುತ್ತದೆ. ಶಬರಿಮಲೆ ವಿಚಾರಕ್ಕೆ ಬಂದರೆ…ಮಂದಿರ ಎಲ್ಲಿರಬೇಕು, ಇಲ್ಲಿ ಯಾವ ಆಚರಣೆಗಳಿರಬೇಕು, ಭಕ್ತಾದಿಗಳು ಯಾವ ಮಾರ್ಗದ ಮೂಲಕ ಮಂದಿರಕ್ಕೆ ಬರಬೇಕು ಎಂದು ತಿಳಿಸಿರುವುದು ಖುದ್ದು ಸ್ವಾಮಿ ಅಯ್ಯಪ್ಪನೇ. ಕುಮುದ ಗೀತಂ ಮತ್ತು ಅಯ್ಯಪ್ಪ ಗೀತಂನಲ್ಲಿ ಒಂದು ಭಾಗವಿದೆ, ಅದರಲ್ಲಿ ಅಯ್ಯಪ್ಪ ತನ್ನ ಭಕ್ತಾದಿಗಳಿಗೆ 41 ದಿನಗಳ ವೃತ ಆಚರಿಸಬೇಕೆಂದು ಹೇಳಿದ್ದಾನೆ, ಯಾಕೆ ಆಚರಿಸಬೇಕೆನ್ನುವುದನ್ನೂ ಹೇಳಿದ್ದಾನೆ. 

ಅಯ್ಯಪ್ಪ ಗೀತಂಗೆ ವಿರುದ್ಧವಾಗಿರುವ ಈ ತೀರ್ಪಿನ ಬಗ್ಗೆ  ಪಂಡಂಲಂ ರಾಜಮನೆತನಕ್ಕೆ ಏನನ್ನಿಸುತ್ತದೆ? 
ನಿಜಕ್ಕೂ ನಮಗೆಲ್ಲ ಇದು ಅತ್ಯಂತ ನೋವಿನ ಸಂಗತಿ. ಇದು ನೋವಿಗಿಂತಲೂ ಇನ್ನೇನೋ ಹೆಚ್ಚಿನ ಸಂಕಟ ಉಂಟುಮಾಡುತ್ತಿರುವ ಭಾವನೆ. ನಾವೆಲ್ಲ ಏನೂ ಮಾಡಲಾಗದಂಥ ಸ್ಥಿತಿಗೆ ಸಿಲುಕಿದ್ದೇವೆ. ಅತ್ಯಂತ ಅಸಹಾಯಕರಾಗಿದ್ದೇವೆ. ನಮಗೆ ಅನಾಥಪ್ರಜ್ಞೆ ಕಾಡುತ್ತಿದೆ. ನಾವು ಇಲ್ಲಿಯವರೆಗೂ “ಅಯ್ಯಪ್ಪ ರಕ್ಷಿಕನೆ'(ಕಾಪಾಡು ಅಯ್ಯಪ್ಪ) ಎಂದು ಪ್ರಾರ್ಥಿಸುತ್ತಿದ್ದೆವು. ಈಗ ನಾವು “ಅಯ್ಯಪ್ಪನೇ ರಕ್ಷಿಕನೆ'(ಅಯ್ಯಪ್ಪನನ್ನು ರಕ್ಷಿಸಿ) ಎಂದು ಪ್ರಾರ್ಥಿಸುವಂತಾಗಿದೆ. ಶಬರಿಮಲೆಯಲ್ಲಿನ ಆಚರಣೆಗಳಲ್ಲಿ ಚಿಕ್ಕ ಬದಲಾವಣೆಯಾದರೂ, ನಮ್ಮ  ಮನಕ್ಕೆ ಅದು ತಾಕುತ್ತದೆ. 

ಅನೇಕ ಮಹಿಳೆಯರೂ ನಿಮ್ಮ ಜೊತೆಯಲ್ಲಿ ಪ್ರತಿಭಟನೆಯಲ್ಲಿ  ಪಾಲ್ಗೊಳ್ಳುತ್ತಿದ್ದಾರೆ. ತಾವು ಮಂದಿರ ಪ್ರವೇಶಿಸುವುದಿಲ್ಲ, ತಮಗೆ 50 ವರ್ಷವಾಗುವವರೆಗೂ ಕಾಯುತ್ತೇವೆ ಎನ್ನುತ್ತಿದ್ದಾರೆ. ಇವರನ್ನು ನೋಡಿ ನಿಮಗೆ ಆಶ್ಚರ್ಯವಾಗಿರಬೇಕಲ್ಲ? 
ಹೌದು, ಇದು ಅತ್ಯದ್ಭುತ ವಿದ್ಯಮಾನ. ಪಂದಳಂನಲ್ಲಿ ನಡೆದ ಮೊದಲ ಪ್ರತಿಭಟನೆಯನ್ನು ನಾನೇ ಆಯೋಜಿಸಿದ್ದೆ. ಆ ಪ್ರತಿಭಟನೆಯ ಬಗ್ಗೆ ನಾವೇನೂ ದೊಡ್ಡ ಘೋಷಣೆಯನ್ನೇನೂ ಮಾಡಿರಲಿಲ್ಲ. ಈ ವಿಷಯ ಜನರಿಂದ ಜನರಿಗೆ ಮತ್ತು ವಾಟ್ಸಾಪ್‌ಗ್ಳ ಮೂಲಕ ಹರಿದಾಡಿತು. ಹೆಚ್ಚೆಂದರೆ 2000 ದಿಂದ 3000 ಜನ ನಮ್ಮ ಹೋರಾಟದಲ್ಲಿ ಭಾಗವಹಿಸಬಹುದು ಎಂದು ಭಾವಿಸಿದ್ದೆವು. ಆದರೆ ರ್ಯಾಲಿಗೆ ಬಂದವರು 65000 ಮಂದಿ! ಅದು ಕೇವಲ ಆರಂಭವಾಗಿತ್ತಷ್ಟೆ. ತನದನಂತರ ನಾನು ಇಂಥ 30ಕ್ಕೂ ಹೆಚ್ಚು ಪ್ರತಿಭಟನಾ ರ್ಯಾಲಿಗಳಲ್ಲಿ ಭಾಗವಹಿಸಿದ್ದೇನೆ. ಪ್ರತಿ ರ್ಯಾಲಿಯಲ್ಲೂ 25000ದಿಂದ 50000 ಜನ ಬಂದಿದ್ದರು, ಬರುತ್ತಿದ್ದಾರೆ.

ಈ ಪ್ರತಿಭಟನೆಗಳು “ಮೇಲ್ಜಾತಿಗಳ ಆಂದೋಲನ’ ಎನ್ನುವ ಟೀಕೆಯಿದೆ. ಅಲ್ಲದೇ ಈ ಪ್ರತಿಭಟನೆಗಳಿಂದಾಗಿ ಕೇರಳದ ಹಿಂದೂ ಸಮಾಜದಲ್ಲಿ ಜಾತಿ ಬಿರುಕುಗಳ ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ. ಒಪ್ಪುತ್ತೀರಾ? 
ಇದನ್ನು ನಾನು “ಟೀಕೆ’ ಎನ್ನುವುದಕ್ಕೂ ಹೋಗುವುದಿಲ್ಲ. ಇದು ಟೀಕೆಯಲ್ಲ, ಬದಲಾಗಿ ಧಾರ್ಮಿಕ ನಂಬಿಕೆಯನ್ನು ಒಡೆಯುವುದಕ್ಕಾಗಿ ಒಂದು ಸಮೂಹ ಸೃಷ್ಟಿಸಿರುವ ತಂತ್ರವಷ್ಟೆ. ಕೇರಳದ ಹಿಂದೂಗಳ ನಡುವೆ ಬಿರುಕೇನೂ ಮೂಡಿಲ್ಲ. ಇದು ಮೇಲ್ಜಾತಿಗಳ ಆಂದೋಲನವೂ ಅಲ್ಲ. 

ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದೇನಾಗಬಹುದು ಎಂದು ಭಾವಿಸುತ್ತೀರಿ?
ಕೇರಳದ ಆಡಳಿತ ಪಕ್ಷ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಕ್ಕೆ ತರಲು ಬಹಳ ಪ್ರಯತ್ನಿಸುತ್ತಿದೆ. ಆದರೆ ಇದು ಭವಿಷ್ಯದಲ್ಲಿ ದೊಡ್ಡ ರಾಜಕೀಯ ವಿಷಯವಾಗಿ ಬದಲಾಗುತ್ತದೆ ಅನಿಸುತ್ತದೆ. ಹಿಂದೂಗಳ ಧ್ರುವೀಕರಣಕ್ಕೆ ಇದು ಕಾರಣವಾಗಲಿದೆ. 

ಇದುವರೆಗೂ ಬಹುತೇಕ ಹಿಂದೂಗಳು ಎಲ್‌ಡಿಎಫ್ಗೆ (ಸಿಪಿಐ-ಎಂ ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್‌ ಫ್ರಂಟ್‌) ಮತ ನೀಡುತ್ತಿದ್ದರು. ಇತ್ತ ಬಹುತೇಕ ಕ್ರಿಶ್ಚಿಯನ್ನರು ಯುಡಿಎಫ್(ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌) ಅನ್ನು ಬೆಂಬಲಿಸುತ್ತಿದ್ದರು. ಈಗ ಈ ವಿಷಯದಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಸರಕಾರ ಹಿಂದೂ ಆಚರಣೆಗಳು, ಸಂಪ್ರದಾಯದ ವಿರುದ್ಧ ನಡೆದುಕೊಳ್ಳುತ್ತಿದೆ ಎನ್ನುವ ಭಾವನೆ ಈಗ ಹಿಂದೂಗಳಲ್ಲಿದೆ. ಇದೇ ವೇಳೆಯಲ್ಲೇ ಸರಕಾರ ಹಿಂದೂಗಳನ್ನು ವಿಭಜಿಸಲೂ ಪ್ರಯತ್ನಿಸುತ್ತಿದೆ. 

ನಿಜಕ್ಕೂ ನಮಗೆಲ್ಲ ಇದು ಅತ್ಯಂತ ನೋವಿನ ಸಂಗತಿ. ಇದು ನೋವಿಗಿಂತಲೂ ಇನ್ನೇನೋ ಹೆಚ್ಚಿನ ಸಂಕಟ ಉಂಟುಮಾಡುತ್ತಿರುವ ಭಾವನೆ. ನಾವೆಲ್ಲ ಏನೂ ಮಾಡಲಾಗದಂಥ ಸ್ಥಿತಿಗೆ ಸಿಲುಕಿದ್ದೇವೆ. ಅತ್ಯಂತ ಅಸಹಾಯಕರಾಗಿದ್ದೇವೆ. ನಮಗೆ ಅನಾಥಪ್ರಜ್ಞೆ ಕಾಡುತ್ತಿದೆ.  ನಾವು ಇಲ್ಲಿಯವರೆಗೂ “ಅಯ್ಯಪ್ಪ ರಕ್ಷಿಕನೆ'(ಕಾಪಾಡು ಅಯ್ಯಪ್ಪ) ಎಂದು ಪ್ರಾರ್ಥಿಸುತ್ತಿದ್ದೆವು. ಈಗ ನಾವು “ಅಯ್ಯಪ್ಪನೇ ರಕ್ಷಿಕನೆ'(ಅಯ್ಯಪ್ಪನನ್ನು ರಕ್ಷಿಸಿ) ಎಂದು ಪ್ರಾರ್ಥಿಸುವಂತಾಗಿದೆ.
(ಕೃಪೆ: ರೆಡಿಫ್.ಕಾಂ)

ಶಶಿಕುಮಾರ್‌ ವರ್ಮಾ ಪಂದಳಂ ರಾಜವಂಶಸ್ಥ

Advertisement

Udayavani is now on Telegram. Click here to join our channel and stay updated with the latest news.

Next