ವಯನಾಡ್: 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶತಾಯಗತಾಯ ಸೋಲಿಸಲು ಬಿಜೆಪಿ ಸಕಲ ರೀತಿಯಲ್ಲಿ ತಯಾರಿ ನಡೆಸುತ್ತಿದೆ.
ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಲು ಈಗಾಗಲೇ ಅನೇಕ ಅಭಿಯಾನಗಳನ್ನು ಕೇಸರಿ ಪಕ್ಷ ಆರಂಭಿಸಿದೆ. ಈ ಮೂಲಕ ಈ ಬಾರಿ ರಾಹುಲ್ ಗಾಂಧಿ ಹಾಗೂ ಸಿಪಿಎಂ ಅಭ್ಯರ್ಥಿಗೆ ತೀವ್ರ ಪೈಪೋಟಿ ಒಡ್ಡಲು ಮುಂದಾಗಿದೆ.
ಕೇಂದ್ರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಲು ಬಿಜೆಪಿ ಹಿರಿಯ ನಾಯಕರು ಹಾಗೂ ಕೇಂದ್ರ ಸಚಿವರು ಪದೇ ಪದೆ ವಯನಾಡ್‌ಗೆ ಭೇಟಿ ನೀಡುತ್ತಿದ್ದಾರೆ.
ಪಕ್ಷದ ಅಲ್ಪಸಂಖ್ಯಾತ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ “ನಮ್ಮ ವಯನಾಡ್’ ಎಂಬ ಅಭಿಯಾನ ಆರಂಭಿಸಲಾಗಿದೆ. ಈ ವೇಳೆ ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.