Advertisement

ಕೇಪು, ಅಳಿಕೆ, ಕನ್ಯಾನ, ಪೆರುವಾಯಿ ಸರ್ವಋತು ರಸ್ತೆಗೆ ಆಗ್ರಹ : ನೂರಾರು ಕುಟುಂಬಗಳಿಗೆ ಅನುಕೂಲ

09:55 PM Mar 14, 2021 | Team Udayavani |

ವಿಟ್ಲ: ಅಳಿಕೆ ಗ್ರಾಮ ಪಂಚಾಯತ್‌ ಕಚ್ಚಾ ರಸ್ತೆಯಾದ ಮೈರ-ಎರುಂಬು-ಗಂಗೆಮೂಲೆ- ಮೆಣಸಿನಗಂಡಿ- ದೂಜಮೂಲೆ-ನೆಕ್ಕರೆ-ಮುಳಿಯ- ನೆಕ್ಕಿತ್ತಪುಣಿ-ಕಲ್ಲಜೇರ-ಕೇಕಣಾಜೆ- ಗುರಿಮಾರ್ಗ ತನಕ ವೈಜ್ಞಾನಿಕವಾಗಿ ರಸ್ತೆ ಅಭಿವೃದ್ಧಿ ಮತ್ತು ರಸ್ತೆ ಡಾಮರು ಅಥವಾ ಕಾಂಕ್ರೀಟ್‌ ಮಾಡಬೇಕೆಂಬ ಬೇಡಿಕೆ ನಾಗರಿಕರಿಂದ ಕೇಳಿಬಂದಿದೆ.

Advertisement

ಇದು ಅಳಿಕೆ, ಕನ್ಯಾನ, ಪೆರುವಾಯಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಅಂತರ್‌ ಗ್ರಾಮ ರಸ್ತೆಗೆ ಕನ್ಯಾನ ಗ್ರಾಮದ ಕೇಕಣಾಜೆಯಲ್ಲಿ ಸೇತುವೆ ನಿರ್ಮಾಣವಾದಲ್ಲಿ ಈ ರಸ್ತೆ ಸರ್ವಋತು ರಸ್ತೆಯಾಗುತ್ತದೆ. ಆಗ ಈ ಪರಿಸರದ ಜನತೆಗೆ ಅನುಕೂಲ ಒದಗಿಸಿದಂತಾಗುತ್ತದೆ.

ಕೇಪು ಗ್ರಾಮ ಮತ್ತು ಅಳಿಕೆ ಗ್ರಾಮದ ಗಡಿ ಮೈರದಿಂದ ಕೇಕಣಾಜೆ ತನಕ ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕರಿಗೆ ಬರುತ್ತದೆ. ಅಳಿಕೆ ಗ್ರಾಮ ಮತ್ತು ಕನ್ಯಾನ ಗ್ರಾಮದ ಗಡಿಯಾದ ಕೇಕಣಾಜೆಯಿಂದ ಗುರಿಮಾರ್ಗ ತನಕ (ಕನ್ಯಾನ- ಶಿರಂಕಲ್ಲು-ಪೆರುವಾಯಿ ಸಂಪರ್ಕ ರಸ್ತೆ ತನಕ) ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕರಿಗೆ ಬರುತ್ತದೆ. ಆದುದರಿಂದ ಇಬ್ಬರು ಶಾಸಕರು ಈ ಅಭಿವೃದ್ಧಿ ಕಾರ್ಯಕ್ಕೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಕೇಕಣಾಜೆಯಲ್ಲಿ ಸೇತುವೆ ಆಗಬೇಕು
ಈ ರಸ್ತೆ ಮೈರದಿಂದ ಕೇಕಣಾಜೆ ತನಕ ಆಗಿದೆ ಮತ್ತು ನೆಕ್ಕಿತ್ತಪುಣಿಯಲ್ಲಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ.(ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ಸೇತುವೆಗೆ ಮೂರು ಮುಕ್ಕಾಲು ಕೋಟಿ ಅನುದಾನ ಒದಗಿಸಿದ್ದಾರೆ.) ಕನ್ಯಾನ ಗ್ರಾಮದ ಗುರಿಮಾರ್ಗದಿಂದ ಕೇಕಣಾಜೆ ತನಕ ಮಾರ್ಗ ಇದೆ. ಕೇಕಣಾಜೆಯಲ್ಲಿ ಸೇತುವೆ ಆದರೆ ರಸ್ತೆ ಸಂಪೂರ್ಣವಾಗುತ್ತದೆ. ಈ ರಸ್ತೆಯ ದೂರ ಒಟ್ಟು ಅಂದಾಜು 11.65 ಕಿ.ಮೀ.ಆಗಬಹುದು.

ಮನವಿ ಸಲ್ಲಿಕೆ
ಈ ಒಳರಸ್ತೆ ನಿರ್ಮಾಣವಾದಲ್ಲಿ ನೂರಾರು ಕುಟುಂಬಗಳಿಗೆ ಅನುಕೂಲವಾಗುತ್ತದೆ.

Advertisement

ಅನುದಾನ ತರಬೇಕಾಗಿದೆ
ರಸ್ತೆ ಅಭಿವೃದ್ಧಿಗೆ ಮನವಿ ಬಂದಿದೆ. ಕೇಕಣಾಜೆಯ ಸೇತುವೆ ನಿರ್ಮಾಣ ಮಾಡಬೇಕು ಎಂದೂ ತಿಳಿದುಬಂದಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಆದರೆ ನಮ್ಮಲ್ಲಿ ಪ್ರಸ್ತುತ ಅನುದಾನವಿಲ್ಲ. ಇನ್ನಾವುದಾದರೂ ಯೋಜನೆಯ ಮೂಲಕ ಅನುದಾನ ತರಬೇಕಾಗಿದೆ.
-ಪ್ರಸನ್ನ, ಎಂಜಿನಿಯರ್‌, ಪಿಎಂ ಗ್ರಾಮ ಸಡಕ್‌ ಯೋಜನೆ

ಅನುಕೂಲವಾಗಲಿದೆ
ಈ 11.65 ಕಿ.ಮೀ. ರಸ್ತೆಯನ್ನು ನಿರ್ಮಿಸಿದಲ್ಲಿ ಸಮಯ, ಆರ್ಥಿಕ ಅನುಕೂಲವಾಗುತ್ತದೆ. ಅನುದಾನ ಬಿಡುಗಡೆಗೊಳಿಸಿ, ನಮ್ಮ ಕಷ್ಟವನ್ನು ಪರಿಹರಿಸಬೇಕು. ಕೇಕಣಾಜೆ ಕ್ರಾಸಿನಿಂದ ಕೇಕಣಾಜೆಗೆ 1 ಕಿಮೀ ದೂರವಿದೆ. ಕೇಕಣಾಜೆ ಯಿಂದ ಗುರಿಮಾರಿಗೆ 0.65 ಕಿಮೀ ದೂರವಿದೆ. ಇದಾದ ಬಳಿಕ ಕನ್ಯಾನ ಪೇಟೆಗೆ ಹತ್ತಿರ ಸಂಪರ್ಕ ಸಿಗುತ್ತದೆ.

-ಕರುಣಾಕರ ಶೆಟ್ಟಿ ನಾರ್ಣಗುಳಿ

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next