Advertisement

BJP ಜತೆಗೆ ಮಿತ್ರತ್ವ ಬಯಸಿದ್ದ ಕೆಸಿಆರ್‌; ಸ್ಫೋಟಕ ಮಾಹಿತಿ ಕೊಟ್ಟ ಪ್ರಧಾನಿ ಮೋದಿ

09:17 PM Nov 27, 2023 | Team Udayavani |

ಹೈದರಾಬಾದ್‌: ಬಿಜೆಪಿಯ ಜತೆಗೆ ಮೈತ್ರಿ ಮಾಡಿಕೊಳ್ಳಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಮುಂದಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ತೆಲಂಗಾಣದ ಮಹಬೂಬಾಬಾದ್‌ ಮತ್ತು ಕರೀಂನಗರಗಳಲ್ಲಿ ಸೋಮವಾರ ಅವರು ಬಿರುಸಿನ ಪ್ರಚಾರ ನಡೆಸಿದರು.

Advertisement

” ಬಿಜೆಪಿಯ ಪ್ರಭಾವ ಹೆಚ್ಚುತ್ತಿರುವುದನ್ನು ಗಮನಿಸಿದ ಕೆಸಿಆರ್‌ ಅವರು ಪಕ್ಷದ ಜತೆಗೆ ಮೈತ್ರಿಗೆ ಮುಂದಾಗಿದ್ದರು. ಈ ನಿಟ್ಟಿನಲ್ಲಿ ಅವರು ನವದೆಹಲಿಗೆ ಆಗಮಿಸಿ, ನನ್ನ ಜತೆಗೆ ಮಾತುಕತೆ ನಡೆಸಿದ ವೇಳೆ ಮಿತ್ರತ್ವದ ಪ್ರಸ್ತಾಪ ಮಾಡಿದ್ದರು. ಆದರೆ, ತೆಲಂಗಾಣದ ಜನರ ವಿರುದ್ಧ ನಿರ್ಣಯ ಕೈಗೊಳ್ಳಲಿಲ್ಲ’ ಎಂದು ಹೇಳುವ ಮೂಲಕ ಕೆಸಿಆರ್‌ ಪ್ರಸ್ತಾಪ ತಿರಸ್ಕರಿಸಿದ್ದರ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.

ಈ ಘಟನೆಯ ಬಳಿಕ ತೆಲಂಗಾಣ ಸಿಎಂ ಬಿಜೆಪಿ ವಿರುದ್ಧ ಬಿರುಸಿನ ವಾಗ್ಧಾಳಿ ನಡೆಸಲಾರಂಭಿಸಿದರು ಎಂದರು. ಬಿಜೆಪಿ ನೇತೃತ್ವದ ಸರ್ಕಾರ ತೆಲಂಗಾಣದಲ್ಲಿ ಅಸ್ತಿತ್ವಕ್ಕೆ ಬಂದರೆ ಹಾಲಿ ಸರ್ಕಾರದ ಹಗರಣಗಳನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಜತೆಗೆ ಬಿಆರ್‌ಎಸ್‌ನ ಕಪಿಮುಷ್ಟಿಯಿಂದ ತೆಲಂಗಾಣವನ್ನು ಬಿಡಿಸುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಜತೆಗೆ ಆ ಪಕ್ಷದ ಭ್ರಷ್ಟ ನಾಯಕರನ್ನು ಜೈಲಿಗೆ ಅಟ್ಟುತ್ತೇವೆ ಎಂದರು.

ಜನರು ಕೋಪಗೊಂಡಿದ್ದಾರೆ: ಅಮಿತ್‌ ಶಾ
ತೆಲಂಗಾಣದ ಜನರು ಬಿಆರ್‌ಎಸ್‌ ಸರ್ಕಾರದ ವಿರುದ್ಧ ಕೋಪಗೊಂಡಿದ್ದಾರೆ. ಈ ಬಾರಿ ಕೆಸಿಆರ್‌ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರೂ ಬಯಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಹುಜೂರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ರೋಡ್‌ ಶೋನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಬಿಆರ್‌ಎಸ್‌ ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡುವ ವಾಗ್ಧಾನ ಮಾಡಿದ್ದೇವೆ ಎಂದರು. ನ.30ರಂದು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ, ಬಿಆರ್‌ಎಸ್‌ಗೆ ವಿಆರ್‌ಎಸ್‌ (ಸ್ವಯಂ ನಿವೃತ್ತಿ) ನೀಡಬೇಕು ಎಂದು ಅಮಿತ್‌ ಶಾ ಮನವಿ ಮಾಡಿದರು.

Advertisement

ಸಿದ್ದರಾಮಯ್ಯ ಸರ್ಕಾರ ವಿರುದ್ಧ ಇ.ಸಿ.ಗೆ ದೂರು
ತೆಲಂಗಾಣದಲ್ಲಿ ಜಾಹೀರಾತು ಕೊಟ್ಟದ್ದಕ್ಕೆ ಬಿಜೆಪಿ ಆಕ್ರೋಶ
ನವದೆಹಲಿ: ಕರ್ನಾಟಕದಲ್ಲಿ ಇರುವ ಕಾಂಗ್ರೆಸ್‌ ಸರ್ಕಾರ ತನ್ನ ಯೋಜನೆಗಳ ಬಗ್ಗೆ ತೆಲಂಗಾಣದ ಮಾಧ್ಯಮ ಗಳಲ್ಲಿ ಜಾಹೀರಾತು ನೀಡಿ, ರಾಜ್ಯದ ಮತದರಾರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಚಿವ ಸಂಪುಟದ ಇತರ ಸದಸ್ಯರು ಮತ್ತು ಕಾಂಗ್ರೆಸ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ನೀಡಿದ ದೂರಿನಲ್ಲಿ ಒತ್ತಾಯಿಸಲಾಗಿದೆ.

ಕೇಂದ್ರ ಸಚಿವ ಭೂಪೇಂದ್ರ ಯಾದವ್‌, ಮಾಜಿ ಸಚಿವ ಪ್ರಕಾಶ್‌ ಜಾವಡೇಕರ್‌ ನೇತೃತ್ವದಲ್ಲಿನ ಬಿಜೆಪಿ ನಿಯೋಗ ಸೋಮವಾರ ನವದೆಹಲಿಯಲ್ಲಿ ಆಯೋಗದ ಮುಂದೆ ಈ ಬಗ್ಗೆ ತಕರಾರು ತೆಗೆದಿದೆ. ಕರ್ನಾಟಕದ ಯೋಜನೆಗಳ ಬಗ್ಗೆ ತೆಲಂಗಾಣದಲ್ಲಿ ಜಾಹೀರಾತು ನೀಡುವ ಮೂಲಕ ಕಾಂಗ್ರೆಸ್‌ ಮಾದರಿ ನೀತಿ ಸಂಹಿತೆ, ಜನತಾ ಪ್ರಾತಿನಿಧ್ಯ ಕಾಯ್ದೆಯ ಅಂಶಗಳನ್ನು ಉಲ್ಲಂಘಿಸಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಈ ಬಗ್ಗೆ ವಿವರಣೆ ನೀಡಿದ ಸಚಿವ ಭೂಪೇಂದ್ರ ಯಾದವ್‌, ಕಾಂಗ್ರೆಸ್‌ ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿ ಜಾಹೀರಾತು ನೀಡುತ್ತಿದೆ. ಕಾಂಗ್ರೆಸ್‌ ಸಾರ್ವಜನಿಕರ ದುಡ್ಡಿನ ಮೂಲಕ ಮತ್ತೊಂದು ರಾಜ್ಯದ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ಚುನಾವಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳು ಸರ್ಕಾರಿ ಆಡಳಿತ ವ್ಯವಸ್ಥೆ ಮತ್ತು ಬೊಕ್ಕಸವನ್ನು ಬಳಕೆ ಮಾಡುವುದರ ಮೇಲೆ ನಿಷೇಧ ಹೇರಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.

ತೋಟದ ಮನೆಯಿಂದ ಆಡಳಿತ ನಡೆಸುತ್ತಾರೆ: ಪ್ರಿಯಾಂಕ
“ಈ ಬಾರಿಯ ಚುನಾವಣೆಯಲ್ಲಿ ಬಿಆರ್‌ಎಸ್‌ ಪಕ್ಷ ಗೆದ್ದರೆ ಅದರ ನಾಯಕರು ತೋಟದ ಮನೆಯಿಂದಲೇ ಆಡಳಿತ ನಡೆಸುತ್ತಾರೆ’ ಹೀಗೆಂದು ವ್ಯಂಗ್ಯವಾಡಿದ್ದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ. ತೆಲಂಗಾಣದ ಭೋಂಗಿರ್‌ ಎಂಬಲ್ಲಿ ಆಯೋಜಿಸಲಾಗಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು ಕೆ.ಚಂದ್ರಶೇಖರ ರಾವ್‌ ನೇತೃತ್ವದ ಸರ್ಕಾರ ಮುಂದುವರಿದರೆ ಅಬಕಾರಿ ಮಾಫಿಯಾ ಬಲಗೊಂಡು, ಆಡಳಿತ ನಡೆಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. “ನಮ್ಮ ಪಕ್ಷಕ್ಕೆ ಮತ ನೀಡಿ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಿ. ಆರು ಗ್ಯಾರಂಟಿ ಜಾರಿ ಮಾಡುತ್ತೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next