ಕಾಸರಗೋಡು: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಅಂಗವಾಗಿ ಶನಿವಾರ ರಾತ್ರಿ ಕಯ್ನಾರು ಕ್ರಿಸ್ತ ರಾಜ ದೇವಾಲಯದಲ್ಲಿ ನಡೆದ ದಿವ್ಯ ಬಲಿ ಪೂಜೆ ಮತ್ತು ವಿಧಿ ವಿಧಾನಕ್ಕೆ ಮೂಡುಬೆಳ್ಳೆ ಕಪುಚಿನ್ ಗುರುಗಳಾದ ಫಾ| ವಲೇರಿಯನ್ ಡಿ’ಸಿಲ್ವ ಮತ್ತು ಕಯ್ನಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾ| ವಿಕ್ಟರ್ ಡಿ’ಸೋಜಾ ನೇತೃತ್ವ ನೀಡಿದರು.
ಹೊಸ ಅಗ್ನಿಯ ಆಶೀರ್ವಚನ ದೊಂದಿಗೆ ಕಾರ್ಯಕ್ರಮ ಆರಂಭ ವಾಯಿತು. ಹೊಸ ಅಗ್ನಿಯಿಂದ ಈಸ್ಟರ್ ಮೋಂಬತ್ತಿಯನ್ನು ಧರ್ಮಗುರು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಆ ಅಗ್ನಿಯ ಮೂಲಕ ಮೇಣದ ಬತ್ತಿ ಉರಿಸಿ ಪ್ರಾರ್ಥನೆ ಸಲ್ಲಿಸಿದರು.
ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಧರ್ಮಗುರುಗಳು ಪ್ರವಚನ ಹಾಗೂ ಸಂದೇಶ ನೀಡಿದರು. ಪವಿತ್ರ ಜಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಢೀಕರಣ ಈ ಸಂದರ್ಭ ನಡೆಯಿತು.
ಕ್ರೈಸ್ತ ಸಂತರನ್ನು ಸ್ಮರಿಸಿ ಅವರ ಶುಭಾಶೀರ್ವಾದ ಕೋರಲಾಯಿತು. ಸಂಭ್ರಮದ ಬಲಿ ಪೂಜೆ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಲಿ ಪೂಜೆ ಬಳಿಕ ಎ.15ರಂದು 60ನೇ ಜನ್ಮ ದಿನವನ್ನು ಕಯ್ನಾರು ಕ್ರಿಸ್ತ ರಾಜ ದೇವಾಲಯದ ಧರ್ಮಗುರು ವಂದನೀಯ ವಿಕ್ಟರ್ ಡಿ’ಸೋಜಾ ಅವರು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ’ಸೋಜಾ ಶುಭಾಶಂಸನೆಗೈದರು.