Advertisement
ಮೊಂತಿ ಹಬ್ಬಕ್ಕೆ ಮುಂಚಿತವಾಗಿ 9 ದಿನ ಮಾತೆ ಮೇರಿಯ ಕೃಪೆಯನ್ನು ಬೇಡಿಕೊಂಡು ವಿಶೇಷ ಪ್ರಾರ್ಥನೆ(ನವೇನಾ) ಕರಾವಳಿಯ ಎಲ್ಲ ಚರ್ಚ್ಗಳಲ್ಲಿ ನಡೆಯುತ್ತದೆ. 9ನೇ ದಿನವನ್ನು ಮೊಂತಿ ಹಬ್ಬವಾಗಿ ಕರಾವಳಿಯ ಕ್ರೈಸ್ತ ಬಂಧುಗಳು ಆಚರಣೆ ಮಾಡುತ್ತಾರೆ. ಹಬ್ಬದ ದಿನದಂದು ಕನ್ಯಾ ಮರಿಯಮ್ಮ ಅವರ ಮೂರ್ತಿಯನ್ನು ಚರ್ಚ್ನ ಮುಂಭಾಗದಲ್ಲಿಟ್ಟು ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಕನ್ಯಾ ಮರಿಯಮ್ಮರಿಗೆ ಪುಷ್ಪಾರ್ಪಣೆ ಮಾಡಿದ ಅನಂತರ ಚರ್ಚ್ಗಳಲ್ಲಿ ಮೊಂತಿ ಹಬ್ಬಕ್ಕಾಗಿ ವಿಶೇಷವಾದ ಪ್ರಾರ್ಥನೆ, ಬಲಿಪೂಜೆಗಳು ನಡೆಯುತ್ತವೆ.
Related Articles
Advertisement
ಈ ಹಬ್ಬದ ಸಮಯದಲ್ಲಿ ಪ್ರಕೃತಿಯು ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳನಳಿಸಿ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸುವ ವಿವಿಧ ಆಚರಣೆಗಳು ಕರಾವಳಿಯಲ್ಲಿ ನಡೆಯುತ್ತದೆ. ಇದರ ಭಾಗವಾಗಿಯೇ ಕ್ರೈಸ್ತರು ಮೊಂತಿ ಫೆಸ್ತ್ ಅಥವಾ ತೆನೆ ಹಬ್ಬ ಆಚರಿಸುತ್ತಾರೆ.
ಕರಾವಳಿಯ ಕ್ರೈಸ್ತರು ಹೆಚ್ಚಿನವರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡವರು. ಪ್ರಕೃತಿಯಿಂದ ಪಡೆದ ಕೊಡುಗೆಗೆ ಕೃತಜ್ಞತೆಯೊಂದಿಗೆ ಪೂಜೆ ಸಲ್ಲಿಸುವ ಪದ್ಧತಿ ತಲತಲಾಂತರಗಳಿಂದ ನಡೆದು ಬಂದಿದೆ. ಈ ಹಬ್ಬದ ಹುಟ್ಟು ಮತ್ತು ಹಿನ್ನಲೆಯ ಬಗ್ಗೆ ಬೇರೆ ಬೇರೆ ಉಲ್ಲೇಖಗಳು ಕಂಡು ಬರುತ್ತವೆ. ಮಂಗಳೂರು ಹೊರ ಹೊಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳ ಹಿಂದೆ ಮೊಂತಿ ಫೆಸ್ತ್ ಆಚರಣೆ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ.
ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಗುರ ಮಠವೊಂದು ಇಲ್ಲಿ ಸ್ಥಾಪನೆಯಾಯಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಗೋವಾದಿಂದ ಬಂದ ಕೆಥೋಲಿಕ್ ಧರ್ಮಗುರು ಫಾದರ್ ಜೋಕಿಂ ಮಿರಾಂದಾ ಅವರು ಸ್ಥಳೀಯ ಚರ್ಚ್ನ ವಾರ್ಷಿಕ ಹಬ್ಬದ ಜತೆಗೆ ಮೇರಿ ಮಾತೆಯ ಜನ್ಮ ದಿನವನ್ನು ಪ್ರಥಮ ಬಾರಿಗೆ ಆಚರಿಸಿದರು ಎನ್ನುವುದು ಪ್ರತೀತಿ. ಮೊಂತೆ ಪದದಿಂದ ಮೊಂತಿ ಬಂತು. ವರ್ಷ ಕಳೆದಂತೆ ಈ ಆಚರಣೆ ಮಂದುವರಿಯುತ್ತಾ ಕ್ರಮೇಣ ಮೊಂತಿ ಫೆಸ್ತ್ ಆಯಿತು ಎನ್ನುವುದು ಹಿರಿಯರ ಅಭಿಪ್ರಾಯ.
ಕರಾವಳಿಯ ಕೆಥೋಲಿಕರು ಎಲ್ಲಿಯೇ ವಾಸಿಸುತ್ತಿದ್ದರೂ, ಅಲ್ಲೆಲ್ಲ ಈ ತೆನೆ ಹಬ್ಬವನ್ನು ಆಚರಿಸುತ್ತಾರೆ. ಚರ್ಚ್ನಿಂದ ಹೊಸ ತೆನೆಯೊಂದಿಗೆ ಮನೆಗೆ ತೆರಳಿದ ಬಳಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಬಳಿಕ ಆಶೀರ್ವದಿಸಿದ ಭತ್ತದ ಕಾಳಿನ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು ಪಾಯಸದಲ್ಲಿ ಹಾಕಿ ಮಿಶ್ರಣ ಮಾಡಿ ಅದನ್ನು ಕುಟುಂಬದ ಹಿರಿಯರೆನಿಸಿದವರು ಎಲ್ಲ ಮನೆ ಮಂದಿಗೆ ಬಡಿಸುತ್ತಾರೆ.
ಭೋಜನದ ವೇಳೆ ಅದನ್ನು ಪ್ರಥಮವಾಗಿ ಸೇವಿಸುತ್ತಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಈ ದಿನ ಊಟ ಮಾಡುತ್ತಾರೆ. ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿರುವ ಅಧುನಿಕ ಕಾಲದಲ್ಲಿ ಇಂತಹ ಆಚರಣೆಗಳಿಗೆ ಹೆಚ್ಚಿನ ಅರ್ಥವಿದೆ. ಸಂಬಂಧಗಳನ್ನು ಬೆಸೆದು ಅಥವಾ ಬಲಪಡಿಸಿ ಕುಟುಂಬದ ಹಾಗೂ ಸಮುದಾಯದ ಐಕ್ಯವನ್ನು ಕಾಯ್ದುಕೊಂಡು ಹೋಗುವ ಒಂದು ಪ್ರಯತ್ನ ಈ ಹಬ್ಬದ ಮೂಲಕ ನಡೆಯುತ್ತದೆ.
ತೆನೆ ಹಬ್ಬದ ವಿಶೇಷವೇ ಸಸ್ಯಾಹಾರಿ ಭೋಜನ. ಕ್ರೈಸ್ತರ ಪ್ರತೀ ಮನೆಯಲ್ಲಿ ಕನಿಷ್ಠ 3, 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳನ್ನಾದರೂ ತಯಾರಿಸಲಾಗುತ್ತದೆ. ಅದ ರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆ ಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ಈ ದಿನದಂದು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಈ ಹಬ್ಬದ ಇನ್ನೊಂದು ವೈಶಿಷ್ಟ್ಯ.
ನವ ಸಮಾಜ ಆಧುನಿಕತೆಯತ್ತ ಮುಖ ಮಾಡುತ್ತಿದ್ದರೂ ಕೂಡ ಕರಾವಳಿಯ ಕ್ರೈಸ್ತ ಸಮುದಾಯ ಇಂದಿಗೂ ತನ್ನ ಆಚರಣೆಯನ್ನು ಕೈಬಿಡದೆ ನಡೆಸಿಕೊಂಡು ಬಂದಿರುವುದು ವಿಶೇಷ. ಆಧುನಿಕ ಸಮಾಜದಲ್ಲಿ ಅಂಚೆ ವ್ಯವಸ್ಥೆ ಮೂಲೆಗುಂಪಾಗುತ್ತಿದ್ದರೂ ಕೂಡ ಹಬ್ಬಕ್ಕಾಗಿ ಹೊಸ ತೆನೆಯನ್ನು ಅಂಚೆ ಮೂಲಕ ಪರ ಊರಿನಲ್ಲಿರುವ ತಮ್ಮವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಇಂದಿಗೂ ಉಳಿದಿದೆ. ಈ ಮೂಲಕ ಆಚರಣೆಯಲ್ಲಿ ಬದಲಾವಣೆ ಕಾಣದೆ ತನ್ನತನವನ್ನು ಉಳಿಸಿಕೊಂಡಿದೆ.
-ಮೈಕಲ್ ರೊಡ್ರಿಗಸ್, ಉಡುಪಿ