Advertisement

Kundapura: ಗೌರಿ ಗಣೇಶ ಹಬ್ಬಕ್ಕೆ ಇನ್ನು ಎರಡೇ ದಿನ; ವಿಗ್ರಹ ರಚನೆ ಪೂರ್ಣತೆಯ ಹಂತಕ್ಕೆ

03:26 PM Sep 04, 2024 | Team Udayavani |

ಕುಂದಾಪುರ: ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಗೌರಿ ಗಣೇಶ ಹಬ್ಬಕ್ಕೆ ಇನ್ನು ಎರಡೇ ದಿನ. ಬೇರೆ ಬೇರೆ ಉದ್ಯೋಗದ ಸ್ಥಳಗಳಿಂದ ಹಬ್ಬಕ್ಕಾಗಿ ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದರೆ ಹಾಗೆ ಬಂದವರಿಗೂ ಆತಿಥ್ಯವಾಗಬೇಕೆಂದು, ಹಬ್ಬ ಇನ್ನಷ್ಟು ಕಳೆಗಟ್ಟಬೇಕೆಂದು ಬಯಸುವವರ ಸಂಖ್ಯೆಯೂ ದೊಡ್ಡದಿದೆ. ಊರಿನ ಜಾತ್ರೆಯಂತೆಯೇ ಗಣೇಶ ಹಬ್ಬದ ಆಚರಣೆಗೂ ಕೆಲವೆಡೆ ಸಿದ್ಧತೆ ನಡೆದಿದೆ. ಸೆ.6ರಂದು ಗೌರಿ ತೃತೀಯಾ, ಸೆ.7ರಂದು ಗಣೇಶ ಚತುರ್ಥಿ.

Advertisement

ಬೋನಸ್‌ ರಜೆ
ಈ ಬಾರಿಯ ವಿಶೇಷ ಎಂಬಂತೆ ಶುಕ್ರವಾರ ಗೌರಿ ಹಬ್ಬ ಬಂದಿದ್ದು ಶನಿವಾರ ಚೌತಿ ಬಂದ ಕಾರಣ ರಜೆ ಒಂದು ದಿನ ಹೆಚ್ಚುವರಿಯಾಗಿ ದೊರೆಯಲಿದೆ. ಈ ಕಾರಣದಿಂದ ಹೆಚ್ಚು ಜನರ ಪಾಲ್ಗೊಳ್ಳುವಿಕೆಯಿಂದ ನಾಡಿನಾದ್ಯಂತ ಚೌತಿ ಸಂಭ್ರಮ ಕಳೆಗಟ್ಟಲಿದೆ. ಸಾರ್ವಜನಿಕವಾಗಿ ವ್ಯಾಪಕವಾಗಿ ಆಚರಿಸಲ್ಪಡುವ ಏಕೈಕ ಹಬ್ಬವಾದ ಗಣೇಶ ಚತುರ್ಥಿ ಹಬ್ಬಕ್ಕೆ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ. ತಾಲೂಕಿನ ಹಟ್ಟಿಯಂಗಡಿ, ಗುಡ್ಡಟ್ಟು, ಆನೆಗುಡ್ಡೆ ಗಣಪತಿ ದೇವಸ್ಥಾನ ಸೇರಿದಂತೆ ಎಲ್ಲೆಡೆ ಚೌತಿ ಆಚರಣೆ ನಡೆಯಲಿದೆ.

ವಿಗ್ರಹ ರಚನೆ
ಗಣೇಶ ವಿಗ್ರಹ ರಚನೆಯೂ ಪೂರ್ಣ ಹಂತಕ್ಕೆ ಬಂದಿದೆ. ಇಲ್ಲಿನ ಜೂನಿಯರ್‌ ಕಾಲೇಜು ಬಳಿ ವಸಂತ ಗುಡಿಗಾರ್‌ ಅವರು 75 ಗಣಪತಿ ವಿಗ್ರಹಗಳನ್ನು ರಚಿಸಿದ್ದಾರೆ. 8 ವಿಗ್ರಹಗಳು ಪರಿಸರಸ್ನೇಹಿ ವಿಗ್ರಹಗಳಾಗಿವೆ.

ಮಣ್ಣು ತೆಗೆಯದಂತೆ ಆದೇಶ
ಈ ಭಾಗದಲ್ಲಿ ಗದ್ದೆಯಿಂದ ಜೇಡಿಮಣ್ಣು ತೆಗೆಯಬಾರದು ಎಂದು ಸರಕಾರದ ಆದೇಶ ಇರುವ ಕಾರಣ ದೂರದ ಶಿರಸಿ ಸೇರಿದಂತೆ ವಿವಿಧೆಡೆಯಿಂದ ಕೆರೆಯಿಂದ ಹೂಳೆತ್ತಿದ ಮಣ್ಣನ್ನು ತಂದು ಹದಗೊಳಿಸಿ ಸಂಸ್ಕರಿಸಿ ಅನಂತರ ವಿಗ್ರಹ ಮಾಡಬೇಕಾಗಿ ಬಂದಿದೆ. ಸ್ಥಳೀಯ ಮಣ್ಣಾದರೆ ಕಡಿಮೆ ದರದಲ್ಲಿ ಭಕ್ತರಿಗೆ ವಿಗ್ರಹಗಳನ್ನು ತಯಾರಿಸಿ ಕೊಡಲು ಅನುಕೂಲ ವಾಗುತ್ತಿತ್ತು ಎನ್ನುತ್ತಾರೆ ಗುಡಿಗಾರ್‌ ಅವರು.

ಗಣೇಶ ಮೂರ್ತಿ ದರ ದುಬಾರಿ
ಈ ನಡುವೆ ಬೆಂಗಳೂರು, ಮುಂಬಯಿ ಮೊದಲಾದೆಡೆ ಪಿಒಪಿ ಗಣಪತಿ ಮಾಡದ ಕಾರಣ, ಸರಕಾರದ ಕಟ್ಟುನಿಟ್ಟಿನ ಆದೇಶ ಇರುವ ಕಾರಣ ಈ ಭಾಗದಿಂದಲೂ ಮಣ್ಣು ಮಾರಲ್ಪಡುತ್ತದೆ. ಹಾಗಾಗಿ ಕ್ವಿಂಟಾಲ್‌ಗೆ 110 ರೂ.ಗೆ ದೊರೆಯುತ್ತಿದ್ದ ಮಣ್ಣು ದರ 160 ರೂ.ಗೆ ಏರಿದೆ. ಜತೆಗೆ ಬಣ್ಣ, ಸಿಬಂದಿ ವೇತನ ಇತ್ಯಾದಿಗಳೂ ಹೆಚ್ಚಾಗಿದೆ. ಹಾಗಾಗಿ ಈ ಬಾರಿ ಗಣಪತಿ ವಿಗ್ರಹ ರಚನೆಯ ಕಾರ್ಯವೂ ತುಸು ದುಬಾರಿ ಎನಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next