ಹಬ್ಬಗಳ ಋತು ಆರಂಭವಾಗಿದ್ದು, ಎಲ್ಲೆಲ್ಲೂ ಸಂಭ್ರಮದ ವಾತಾವರಣ ಮನೆಮಾಡಿದೆ. ಹಬ್ಬಗಳ ಸಂಭ್ರಮ ದಕ್ಷಿಣ ಭಾರತದಲ್ಲಿ ಬಲು ಜೋರಾಗೇ ಇರುತ್ತದೆ. ಅದರಲ್ಲೂ ಅಪ್ಪಟ ದಕ್ಷಿಣ ಭಾರತದ ಹಬ್ಬವಾದ ಓಣಂ ಅನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಓಣಂ ಕೇರಳದಲ್ಲಿ ಆಚರಿಸುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ವಿಶೇಷವಾಗಿ ಕೇರಳದಲ್ಲಿ ಓಣಂ ಹಬ್ಬವು ತಿರುವೋಣಂ ನಕ್ಷತ್ರದ ಸಮಯದಲ್ಲಿ ವರ್ಷಕೊಮ್ಮೆ ತನ್ನ ಪ್ರಜೆಯನ್ನು ಭೇಟಿಯಾಗಲು ಭೂಮಿಗೆ ಬಲಿರಾಜ ಬರುವ ಸುದಿನವಾಗಿದೆ. ಮಲಯಾಳ ಕ್ಯಾಲೆಂಡರ್ ಪ್ರಕಾರ, ಹಬ್ಬವನ್ನು ಚಿಂಗಂನ ಮೊದಲ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಕೇರಳದ ತುಂಬ ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಈ ಹಬ್ಬವನ್ನು ಆಚರಿಸುವುದು ಶಾಂತಿ, ಸೌಹಾರ್ದತೆ ಕನ್ನಡಿ ಹಿಡಿದಂತಿದೆ.
ಹಿನ್ನಲೆ:
ಪುರಾಣಗಳ ಪ್ರಕಾರ, ಮಹಾಬಲಿ ಚಕ್ರವರ್ತಿಯ ಕಾಲದಲ್ಲಿಯೇ ಕೇರಳವು ಸುವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಆತನನ್ನು ಬ್ರಾಹ್ಮಣ ಋಷಿ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಕಶ್ಯಪನ ವಂಶಸ್ಥನೆಂದು ಹೇಳಲಾಗುತ್ತದೆ. ಅವನ ರಾಜ್ಯಭಾರದ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಂತಸ, ನೆಮ್ಮದಿ ಮತ್ತು ಸಂತೃಪ್ತಿಯಿಂದಿದ್ದು, ಅರಸನೂ ಕೂಡ ಅವರೆಲ್ಲರ ಮೆಚ್ಚುಗೆ ಪಾತ್ರನಾಗಿದ್ದ ಎಂದು ತಿಳಿದು ಬರುತ್ತದೆ. ಮಹಾಬಲಿ ತನ್ನ ಒಳ್ಳೆಯ ಗುಣಗಳ ಫಲವಾಗಿ ದೇವರಿಂದ ಒಂದು ವರವನ್ನು ಪಡೆದುಕೊಂಡಿದ್ದ. ಅದೇನೆಂದರೆ ವರ್ಷಕೊಮ್ಮೆ ಅವನು ತೀರಾ ಆತ್ಮೀಯರಾಗಿದ್ದ ತನ್ನ ಜನರನ್ನು ಭೇಟಿ ಮಾಡಲು ಸಾಧ್ಯವಿತ್ತು. ಅವನು ಭೂಲೋಕವನ್ನು ಭೇಟಿ ಮಾಡುವ ದಿನವನ್ನು ಕೇರಳದಲ್ಲಿ ಓಣಂ ಆಗಿ ಪ್ರತೀ ವರ್ಷವೂ ಆಚರಿಸುತ್ತಾರೆ.
ವೈವಿಧ್ಯ ಸಂಭ್ರಮ
ಓಣಸದ್ಯ ಎಂಬ ಭೋಜನ ಕೂಟವು ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹೊಸ ಬೆಳೆಗಳನ್ನು ತಂದು ಈ ದಿನ ವಿಶೇಷ ಆಹಾರವನ್ನು ತಯಾರಿಸಲಾಗುತ್ತದೆ. ಮೂರು ಬಗೆಯ ಪಾಯಸ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ರಾಜ ಮಹಾಬಲಿಯ ಸಂತೋಷ ಮತ್ತು ಸಮೃದ್ಧಿಯುತ ಜೀವನವನ್ನು ಈ ಊಟ ನೆನಪಿಸುತ್ತದೆ.
ಸಾಂಪ್ರದಾಯಿಕ ಆಟಗಳು
ಓಣಂ ಉತ್ಸವದ ಮತ್ತೊಂದು ಮೋಡಿ ಮಾಡುವ ಅಂಶವೆಂದರೆ ವಲ್ಲಂಕಲಿ ಎನ್ನುವ ಹಾವು ದೋಣಿ ಪಂದ್ಯ. ಈ ಪಂದ್ಯವನ್ನು ಪಂಪಾ ನದಿಯಲ್ಲಿ ಆಯೋಜಿಸಲಾಗುತ್ತದೆ. ಕಣ್ಮನ ಸೆಳೆಯುವಂತೆ ಸಿಂಗಾರಗೊಂಡ ದೋಣಿಯಲ್ಲಿ ನೂರಾರು ನಾವಿಕರು ಕೇಕೆ ಹಾಕುತ್ತಾ ಉತ್ಸಾಹದಿಂದ ಹಾಡುಗಳನ್ನು ಹೇಳಿಕೊಂಡು ದೋಣಿ ನಡೆಸುವುದನ್ನು ನೋಡಲು ಅಸಂಖ್ಯಾಕ ಜನ ನೆರೆದಿರುತ್ತಾರೆ.
ಓಣಂ ದಿವಸ ಓಣಕಲಿಕಾಲ್ ಎನ್ನುವ ಆಟವನ್ನು ಗುಂಪುಗುಂಪಾಗಿ ಆಡುವ ಸಂಪ್ರದಾಯವು ಇದೆ. ಹೆಚ್ಚು ದೈಹಿಕ ಶ್ರಮವನ್ನು ಹಾಕಿ ಆಡಲಾಗುವ ಆಟಗಳಾದ ತಳಪ್ಪಂತುಕಲಿ(ಇಲ್ಲಿ ಚೆಂಡನ್ನು ಬಳಸಲಾಗುತ್ತದೆ), ಆಮ್ಬೆಯಲ್(ಬಿಲಿನಾಟ), ಕುಟುಕುಟು ಮತ್ತು ಕಯ್ಯಮಕಲಿ ಹಾಗೂ ಅತ್ತಕಳಂ ಎಂಬುವ ಕಾಳಗದ ಆಟವನ್ನು ಪುರುಷರು ಆಯ್ಕೆ ಮಾಡಿಕೊಳ್ಳುತ್ತಾರೆ.
ಮಹಿಳೆಯರು ಸಾಮಾನ್ಯವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಕುರುಹಾಗಿ ಅವರವರ ಮನೆಗಳ ಮುಂದೆ ಹೂವುಗಳಿಂದ ತುಂಬಾ ಸುಂದರವಾದ ಪೂಕ್ಕಳಂ ಎಂಬ ರಂಗೋಲಿಗಳನ್ನು ಬಿಡಿಸುತ್ತಾರೆ.
ಓಣಂ ಸಂದರ್ಭದಲ್ಲಿ ಕಥಕ್ಕಳಿ ಮತ್ತು ತುಂಬಿ ತುಳ್ಳಾಲ್ ಎಂಬೆರಡು ಬಗೆಯ ಅತ್ಯಂತ ಮನೋಹರವಾದ ನೃತ್ಯ ಪ್ರಕಾರಗಳನ್ನು ಮಹಿಳೆಯರು ಪ್ರದರ್ಶಿಸುತ್ತಾರೆ. ಜಾನಪದ ನೃತ್ಯ ಪ್ರಕಾರಗಳಾದ ಕುಮ್ಮಟ್ಟಿಕಲಿ ಮತ್ತು ಪುಲಿಕಲಿಗಳಂತೂ ಇಡೀ ಉತ್ಸವದ ಮೇರು ಆಕರ್ಷಣೆಗಳಾಗಿವೆ. ಒಣಂ ಸಮಯದಲ್ಲಿ ಹಿಂದೂ ಕೇರಳಿಗರು ತ್ರಿಕ್ಕಾಕ್ಕರ ಅಪ್ಪನ್(ವಾಮನ ಸ್ವರೂಪದಲ್ಲಿರುವ ವಿಷ್ಣು) ಎಂಬ ಮೂರ್ತಿಯೊಂದನ್ನು ನಿರ್ಮಿಸಿ ತಮ್ಮತಮ್ಮ ಮನೆಗಳಲ್ಲಿ ಪೂಜಿಸುತ್ತಾರೆ.
ವಿಶೇಷ ಹತ್ತು ದಿನಗಳು
*
ಆಥಂ- ಆಥಂ ದಿನದಂದು ಕೊಚ್ಚಿಯ ಮಾಮನ ಮೂರ್ತಿಯನ್ನು ತಿರಿಕಾರ ದೇವಸ್ಥಾನದಲ್ಲಿ ಉತ್ಸವಗಳು ಆರಂಭವಾಗುತ್ತದೆ.
* ಚಿತಿರಾ – ಎರಡನೇ ದಿನವಾದ ಚಿತಿರಾದಲ್ಲಿ ಪೂಕಳಕ್ಕೆ ಇನ್ನೂ ಎರಡು ಪದರದ ಹೂವುಗಳನ್ನು ಸೇರಿಸಲಾಗುತ್ತದೆ.
* ಚೋಧಿ ಪೂಕ್ಕಳಂ – ಮೂರನೇ ದಿನವಾದ ಚೋಡಿಯಂದು ಜನರು ಒನಕ್ಕೋಡಿ ಎಂಬ ಹೊಸ ಬಟ್ಟೆಗಳನ್ನು ಧರಿಸುತ್ತಾರೆ.
* ವಿಶಾಕಂ- ಓಣಸದ್ಯದ( ಓಣಂನ ವಿಶೇಷ ಭೋಜನ) ಸಿದ್ಧತೆಗಳು ಪ್ರಾರಂಭವಾಗುವ ಅತ್ಯಂತ ಮಂಗಳಕರ ದಿನವಾಗಿದೆ.
* ಅನಿಜಂ -ಪಂಪಾ ನದಿಯಲ್ಲಿ ವಲ್ಲಂಕಾಳಿ ಕ್ರೀಡೆಗಳ ಆರಂಭ.
*
ತ್ರಿಕೆಟ್ಟಾ- ಈ ದಿನದಂದು ಜನರು ತಮ್ಮ ಪೂರ್ವಿಕರ ಮನೆಗಳಿಗೆ ತೆರಳಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
* ಮೂಲಂ – ಪುಲಿಕಳಿ ಮತ್ತು ಇತರ ನೃತ್ಯ ಪ್ರಕಾರಗಳನ್ನು ವಿವಿಧೆಡೆ ಪ್ರದರ್ಶಿಸಲಾಗುತ್ತದೆ.
* ಪೂರದಂ – ಪೂಕಳಂ ಮಧ್ಯಭಾಗದಲ್ಲಿ ಮಹಾಬಲಿ ಮತ್ತು ಮಾಮನ ಮಣ್ಣಿನ ಪ್ರತಿಮೆಗಳನ್ನು ಒನತಪ್ಪಂ ಎಂದು ಪ್ರತಿಷ್ಠಾಪಿಸುವ ದಿನ.
*
ಉತ್ತರಾದಂ – ಈ ದಿನದ ಸಂಜೆಯನ್ನು ಓಣಂ ಎಂದು ಪರಿಗಣಿಸಲಾಗುತ್ತದೆ. ಈ ದಿನ ಮಹಾಬಲಿ ಕೇರಳಕ್ಕೆ ಆಗಮಿಸುತ್ತಾನೆ.
*ತಿರುವೋಣಂ – ಮಹಾಬಲಿ ಪ್ರತೀ ಮನೆಗಳಿಗೆ ತೆರಳಿ ಜನರನ್ನು ಆಶೀರ್ವದಿಸುವ ದಿನ.
*ಮಾಹಿತಿ: ದಿವ್ಯಾ, ನಾಯ್ಕನಕಟ್ಟೆ