ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ ನಾಯಕಿ ಮತ್ತು ಮೆಹಬೂಬಾಬಾದ್ ಕ್ಷೇತ್ರದ ಸಂಸದೆ ಕವಿತಾ ಮಾಲೋತ್ ಅವರಿಗೆ 2019ರ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪದ ಹಿನ್ನೆಲೆಯಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಹಾಲಿ ಲೋಕಸಭೆಯಲ್ಲಿ ಶಿಕ್ಷೆಗೆ ಗುರಿಯಾದ ಮೊದಲ ಸಂಸದೆ ಎಂಬ ಅಪಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.
ಚುನಾವಣ ಪ್ರಚಾ ರದ ವೇಳೆ ಅವರು ಮತದಾರರಿಗೆ ಹಣ ಹಂಚಿದ್ದಾರೆ ಎಂದು ಆರೋಪಿಸಲಾಗಿತ್ತು.
ಶನಿವಾರ ವಿಶೇಷ ಕೋರ್ಟ್ ವಿಚಾರಣೆ ನಡೆಸಿ ಸಂಸದೆ ವಿರುದ್ಧದ ಆರೋಪಗಳು ಸಾಬೀತಾಗಿವೆ ಮತ್ತು ಅವರಿಗೆ ಹತ್ತು ಸಾವಿರ ರೂ. ದಂಡ, ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ಅವರಿಗೆ ಅದೇ ದಿನ ಜಾಮೀನು ನೀಡಲಾಗಿದೆ.
ವಿಶೇಷ ಕೋರ್ಟ್‌ನ ತೀರ್ಪು ವಿರುದ್ಧ ಅವರು ತೆಲಂಗಾಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.