Advertisement
ಶ್ರೀ ಜನಾರ್ದನ ದೇವರ ಒರೆಸರೆ ಬಲಿ, ಉತ್ಸವ, ಮಾರಿಯಮ್ಮ ದೇವರ ದರ್ಶನ, ನೇಮದ ಸಂದರ್ಭದ ಗಗ್ಗರದೆಚ್ಚಿ, ಸಿರಿನಲಿಕೆ, ನಾಗಾರಾಧನೆಯಲ್ಲಿ ಬರುವ ಕಟ್ಟು ವಾದ್ಯ-ಎಲ್ಲದಕ್ಕೂ ಜಲೀಲ್ ಸಾಹೇಬ್ ಅವರು ತಮ್ಮ ನಾದಸ್ವರ ವಾದನದಿಂದ ಜೀವ ತುಂಬುತ್ತಿದ್ದರು.
Related Articles
ಶನಿವಾರ ರಾತ್ರಿ ಕೊಪ್ಪಲಂಗಡಿ ವಾಸುದೇವ ದೇವಸ್ಥಾನದಲ್ಲಿ ಜರಗಿದ ಮುಳ್ಳಮುಟ್ಟೆ ಮತ್ತು ಬಂಟ ಕೋಲದಲ್ಲಿ ರಾತ್ರಿ ಯಿಡೀ ಓಲಗ ಸೇವೆ ನಡೆಸಿದ್ದರು. ರವಿವಾರ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಾನದಲ್ಲಿ ದೀಪಾವಳಿ ಸಂಭ್ರಮ ಮತ್ತು ವಾರ್ಷಿಕ ಬಲಿ ಹೊರಡುವ ಸಂದರ್ಭಕ್ಕೂ ನಾದಸ್ವರ ನುಡಿಸಿದ್ದರು. ಆತ್ಮೀಯರೊಂದಿಗೆ ಹಾಸ್ಯ ಚಟಾಕಿ ಸಿಡಿಸಿ ಮನೆಗೆ ತರಳಿದ್ದರು. ಆದರೆ ಇದುವೇ ಕೊನೆಯ ಸೇವೆಯಾಯಿತು. ಮರುದಿನ ಇಹಲೋಕವನ್ನೇ ತ್ಯಜಿಸುತ್ತಾರೆಂಬ ಯಾವುದೇ ಮುನ್ಸೂಚನೆ ಕಂಡಿರಲಿಲ್ಲ ಎನ್ನುತ್ತಾರೆ ಅವರಲ್ಲಿ ಮಾತನಾಡಿದ್ದ ದೇವಸ್ಥಾನದ ಸಿಬಂದಿ ಮತ್ತು ಪರಿಚಾರಿಕ ವರ್ಗದವರು.
Advertisement
ಸರಸ್ವತಿಯ ಜತೆಗೇ ಪಯಣಪೇಟೆಗೆ ಬಂದಾಗಲೆಲ್ಲ ಜನಾರ್ದನ ಭವನ ಹೊಟೇಲ್‌ನಲ್ಲಿ ಚಹಾ – ತಿಂಡಿ ಸೇವಿಸುತ್ತಿದ್ದರು. ಸೋಮವಾರ ಮುಂಜಾನೆಯೂ ಅಲ್ಲಿ ಚಹಾ ಕುಡಿದು, ಹತ್ತಿರದ ಮತ್ತೂಂದು ಹೊಟೇಲ್‌ಗೆ ತೆರಳಿ ಹುಡುಗರ ಜತೆಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿತ್ತು. ಆಸ್ಪತ್ರೆಗೆ ಕೊಂಡೊಯ್ದರೂ ಪ್ರಯೋ ಜನವಾಗಲಿಲ್ಲ. ಸೋಮವಾರ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಲ್ಲ. ಆದರೂ ನಾದಸ್ವರವನ್ನು ಹೆಗಲಿಗೇ ರಿಸಿಕೊಂಡು ಪೇಟೆಗೆ ಬಂದಿದ್ದ ಅವರು ತನ್ನ ಉಸಿರಾಗಿದ್ದ ಸರಸ್ವತಿಯನ್ನು ಬದುಕಿನ ಪಯಣ ಮುಗಿಸುವಾಗಲೂ ಬಿಟ್ಟುಕೊಡದಿರುವುದು ವಿಶೇಷ. ಐದು ತಲೆಮಾರುಗಳಿಂದ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸೇವೆಯಲ್ಲಿ ನಿರತರಾಗಿದ್ದ ಶೇಖ್ ಜಲೀಲ್ ಸಾಹೇಬ್ ಅವರ ವಂಶಸ್ಥರಿಗೆ ದೇವಸ್ಥಾನದ ವತಿಯಿಂದ 1 ಎಕ್ರೆ ಜಾಗವನ್ನು ಉಂಬಳಿ ಬಿಡಲಾಗಿದೆ. ವಂಶ ಪಾರಂಪರ್ಯವಾಗಿಸಿಕ್ಕ ಜಮೀನಿಗೆ ಹೊಂದಿಕೊಂಡ ಪುರಾತನ ನಾಗಬನ ಮತ್ತು ಪಂಜುರ್ಲಿ ದೈವಗಳ ಸಾನ್ನಿಧ್ಯದಲ್ಲಿ ನಿತ್ಯ ಆರಾಧನೆ ನಡೆಸುತ್ತಿ ದ್ದರು. ನಾಗ ದೇವರಿಗೆ ಪ್ರತೀ ಪಂಚಮಿಯಂದು ತನು- ತಂಬಿಲ ಸೇವೆ ನಡೆಸುತ್ತಿದ್ದ ಅವರು ಮತ್ತು ಪಂಜುರ್ಲಿ ದೈವಕ್ಕೂ ಗುಡಿ ಕಟ್ಟಿಸಿದ್ದರು. ಜಲೀಲ್ ಅವರು ಮನೆಯಲ್ಲಿ ತಮ್ಮ ಮತದ ರೀತಿ, ನೀತಿ ಅನುಸರಿಸುತ್ತಿದ್ದರು. ಮಸೀದಿಗೆ ಹೋಗುವಾಗ ಮಸೀದಿಗೆ, ದೇವರ ಸೇವೆ ಮಾಡುವಾಗ ದೇಗುಲಕ್ಕೆ ತೆರಳುತ್ತಿದ್ದರು. ಪವಿತ್ರ ರಮ್ಜಾನ್ ಮಾಸಾಚರಣೆಯ ವೇಳೆಯೂ ಓಲಗ ಸೇವೆಯನ್ನು ನಿಲ್ಲಿಸುತ್ತಿರಲಿಲ್ಲ. ಸ್ವರ ನಿಲ್ಲಿಸಿದ ಮಾಂತ್ರಿಕ
ಜಲೀಲ್ ಅವರಿಗೆ ಒಡೆಯನ ಸೇವೆಯೆಂದರೆ ಅಚ್ಚು ಮೆಚ್ಚು. ಬೇಷ (ವೃಷಭ) ಹುಣ್ಣಿಮೆಯಂದು ಜನಾರ್ದನ ದೇವರ ಉತ್ಸವ ಮೂರ್ತಿ ಗರ್ಭಗುಡಿಯೊಳಗೆ ತೆರಳುವುದು ವಾಡಿಕೆ. ಬಳಿಕ ಬಲಿಮೂರ್ತಿಯನ್ನು ದೀಪಾವಳಿ ಅಮವಾಸ್ಯೆಯಂದು ಉತ್ಸವಕ್ಕಾಗಿ ಹೊರಗೆ ತರಲಾಗುತ್ತದೆ. ದೇವರನ್ನು ಹೊರಗೆ ತಂದು ಸೀಮೆಯ ಕೈಗೆ ಕೊಟ್ಟು ತಾನು ಮಾತ್ರ ಭಗವಂತನೊಳಗೆ ಐಕ್ಯವಾಗಿದ್ದಾರೆ. ಒಡೆಯನ ಸನ್ನಿಧಾನದಲ್ಲಿ ಸೇವೆ ಮುಗಿಸಿ ಹೊರಡುವಾಗ ಸಾಷ್ಟಾಂಗ ನಮಸ್ಕರಿಸುವುದು ವಾಡಿಕೆ. ರವಿವಾರ ರಾತ್ರಿಯೂ ತನ್ನ ಸಾಷ್ಟಾಂಗ ಪ್ರಣಾಮ ಸಲ್ಲಿಸಿ ಮನೆಗೆ ತೆರಳಿದ್ದರು. ಸೋಮವಾರ ಇಲ್ಲವಾಗಿದ್ದಾರೆ. ಇದು ಈ ಸೀಮೆಗೆ ದೊಡ್ಡ ನಷ್ಟ ಎನ್ನುತ್ತಾರೆ ಜನಾರ್ದನ ದೇಗುಲದ ಅರ್ಚಕ ವೇ| ಮೂ| ಜನಾರ್ದನ ತಂತ್ರಿ. – ರಾಕೇಶ್ ಕುಂಜೂರು