Advertisement
ಕಾಪು ಪುರಸಭೆ ವ್ಯಾಪ್ತಿಯ ಕಾಪು, ಉಳಿಯಾರಗೋಳಿ, ಮಲ್ಲಾರು ಕಂದಾಯ ಗ್ರಾಮಗಳಲ್ಲಿನ ಕೊಳಚೆ ನೀರಿನ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಹಲವು ದಶಕಗಳಿಂದಲೂ ಈ ಸಮಸ್ಯೆ ಜೀವಂತವಾಗಿಯೇ ಇದೆ. ಮಾಜಿ ಸಚಿವರಾದ ವಸಂತ ವಿ. ಸಾಲ್ಯಾನ್, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಂದ ಹಿಡಿದು ಹಾಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರವರೆಗೂ ಇಲ್ಲಿನ ಸಮಸ್ಯೆ ಕಾಡುತ್ತಿದೆ. ಜನ ತಮ್ಮ ಅಹವಾಲು ಮಂಡಿಸುತ್ತಿದ್ದಾರೆ. ಆದರೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ.
Related Articles
ಕಾಪು ಗರಡಿ ರಸ್ತೆ ಪಕ್ಕದ ಧೂಮಾವತಿ ದೈವಸ್ಥಾನದಿಂದ ಪೊಲಿಪು ರಸ್ತೆ ಪಕ್ಕದ ಅನ್ನಪೂಣೇಶ್ವರಿ ದೇವಸ್ಥಾನದವರೆಗಿನ ಕಾಪು ಬೀಡುಬದಿ ಸುಮಾರು 150 ಎಕರೆ ಭೂಪ್ರದೇಶವಿದೆ. ಇವೆಲ್ಲಾ ಬಹುತೇಕ ಕೃಷಿ ಭೂಮಿಗಳು. ಇಲ್ಲಿ ಸುಮಾರು 70-80 ಮನೆಗಳಿವೆ. ಆದರೆ ಇಲ್ಲಿ ವಾಸಿಸುತ್ತಿರುವ ನಿವಾಸಿಗಳು ಮಾತ್ರ ನೆಮ್ಮದಿಯಿಲ್ಲದೇ ದಿನ ಕಳೆಯುತ್ತಿದ್ದಾರೆ. ಬೀಡು ಬದಿಗೆ ಹರಿದು ಬಂದ ನೀರು ಇಲ್ಲಿನ ಕೃಷಿ ಗದ್ದೆ ಮತ್ತು ಕೊಳದಲ್ಲಿ ಸಂಗ್ರಹವಾಗುತ್ತಿದ್ದು ಇದರಿಂದಾಗಿ 50 ಎಕರೆಯಷ್ಟು ಕೃಷಿ ಭೂಮಿ ಕೃಷಿ ಕೆಲಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಹಡಿಲು ಬಿದ್ದಿದೆ.
Advertisement
ಬಾವಿಗಳ ನೀರು ಕೂಡ ಕಲುಷಿತಬೀಡು ಬದಿಯ ಬಹುತೇಕ ನಿವಾಸಿಗಳು ತೆರೆದ ಬಾವಿಯ ನೀರನ್ನೇ ಬಳಸುತ್ತಿದ್ದು ತೆರೆದ ಬಾವಿಯ ನೀರು ಕೂಡ ಸಂಪೂರ್ಣ ಕಲುಷಿತಗೊಂಡಿದೆ. ಹಲವು ಬಾವಿಗಳ ನೀರು ಕಲುಷಿತಗೊಂಡಿದ್ದು ಇಲ್ಲಿನ ನೀರು ಕುಡಿಯಲು ಯೋಗ್ಯವಲ್ಲದ ನೀರು ಎನ್ನುವುದನ್ನು ಇಲಾಖಾ ಪರಿಶೀಲನೆಯೇ ತಿಳಿಸಿದೆ. ಕಾಪು ಪೇಟೆ ಮತ್ತು ಕೆಲವು ಪ್ರದೇಶಗಳಲ್ಲಿ ಸಂಜೆಯ ಬಳಿಕ ಮೂಗು ಮುಚ್ಚಿಕೊಂಡೇ ಅಡ್ಡಾಡಬೇಕಾಗಿದೆ. ಯಾಕೆಂದರೆ ಸಂಜೆಯ ಹೊತ್ತು ಅಂಗಡಿ, ವಾಣಿಜ್ಯ ಸಂಕೀರ್ಣ, ವಸತಿ ಸಮುತ್ಛಯಗಳು, ಹೋಟೆಲ್‌ಗಳ ತ್ಯಾಜ್ಯಗಳನ್ನು ತೋಡಿಗೆ ಬಿಡಲಾಗುತ್ತದೆ. ಆಗ ಅಂಗಡಿ ವ್ಯಾಪಾರಿಗಳು ಕೂಡ ಸಂಕಷ್ಟ ಅನುಭವಿಸುತ್ತಾರೆ.
ಈ ಭಾಗದ ಜನರು ತಮ್ಮನ್ನು ಕಾಡುತ್ತಿರುವ ತಾಜ್ಯ, ಕೊಳಚೆ ಮತ್ತು ಮಲಿನ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕಾಪು, ಉಳಿಯಾರಗೋಳಿ, ಮಲ್ಲಾರು ಗ್ರಾಮ ಪಂಚಾಯತ್‌ಗಳಿಗೆ ಮನವಿ ನೀಡುತ್ತಾ ನೀಡುತ್ತಾ ಸೋತು ಹೋಗಿದ್ದಾರೆ. ಪುರಸಭೆಯಾದ ಬಳಿಕವೂ ಜನರು ನೀಡುತ್ತಾ ಬಂದಿರುವ ಮನವಿಯ ಸಂಖ್ಯೆಗಳಿಗೆ ಕೊರತೆಯಿಲ್ಲ. ಆದರೂ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎನ್ನುತ್ತಾರೆ ಬ್ರಹ್ಮಾನಂದ ಭಟ್ ಮತ್ತು ಪರಮಾನಂದ ಭಟ್ ಸಹೋದರರು. ಕಾಡುತ್ತಿವೆ ಹಲವು ಕಾಯಿಲೆಗಳು
ಕೊಳಚೆ ನೀರಿನ ಘಾಟಿಗೆ ಅಸ್ತಮಾದಂತಹ ಖಾಯಿಲೆಗಳು ಜನರನ್ನು ಕಾಡುತ್ತಿವೆ. ಮಲೇರಿಯಾ, ಫೆ„ಲೇರಿಯಾ ಮತ್ತು ಹಳದಿ ಜ್ವರ, ಮೈ ತುರಿಕೆ ಹೀಗೆ ನೀರಿಗೆ ಸಂಬಂಧಿಸಿದ ಮತ್ತು ಸೊಳ್ಳೆಯಿಂದ ಹರಡುವ ರೋಗಗಳು ಜನರನ್ನು ಕಾಡುತ್ತಿವೆ. ಮಳೆ ನೀರು ಹರಿದು ಬರುವ ಚರಂಡಿಯಲ್ಲಿ ದುರ್ನಾತದೊಂದಿಗೆ ಹರಿದು ಬರುವ ಮಲಿನ ನೀರಿನ ಜತೆಗೆ ಮಲಿನ ವಸ್ತುಗಳು, ತ್ಯಾಜ್ಯ ವಸ್ತುಗಳು ಕೂಡಾ ಸೇರಿ ಕಾಪುವಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಉಂಟು ಮಾಡುತ್ತಿವೆ.