Advertisement

Katapady: ನೀರು ತುಂಬಿದ ಹೊಂಡಗಳ ನಡುವೆ ರಸ್ತೆ ಹುಡುಕಿ ಕೊಡಿ!

02:39 PM Sep 15, 2024 | Team Udayavani |

ಕಟಪಾಡಿ: ಕೋಟೆ ಗ್ರಾ.ಪಂ. ವ್ಯಾಪ್ತಿಯ ಕೋಟೆ – ಕಜಕಡೆ ಭಾಗದಲ್ಲಿ ರಸ್ತೆಯು ಹೊಂಡ ಗುಂಡಿಯಿಂದ ಕೂಡಿದ್ದು ಸಂಚಾರ ದುಸ್ತರವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಈ ಭಾಗದಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನ ಸವಾರರು ಸಹ ಸವಾರರನ್ನು ಇಳಿಸಿ ರಸ್ತೆಯನ್ನು ಹುಡುಕಿ ಮುಂದಕ್ಕೆ ಸಾಗಿ ಬಳಿಕ ಹತ್ತಿಸಿಕೊಂಡು ಹೋಗುವಂತಹ ಸನ್ನಿವೇಶವು ದಿನನಿತ್ಯದ ಪಾಡಾಗಿದೆ.

ಇನ್ನುಳಿದಂತೆ ಶಾಲಾ ವಾಹನಗಳು ಸಹಿತ ಇತರೇ ವಾಹನಗಳು ಸಂಚರಿಸುವಾಗ ಹೊಂಡ ಗುಂಡಿಯಲ್ಲಿ ಬಿದ್ದು ಎದ್ದು ಸಂಚರಿಸುವ ಅಪಾಯಕಾರಿ ಪರಿಸ್ಥಿತಿ ಕಂಡು ಬರುತ್ತಿದೆ. ಮಳೆ ಬಂದಾಗಲಂತೂ ನೀರು ತುಂಬಿದ ಹೊಂಡವು ಮತ್ತಷ್ಟು ಹೆಚ್ಚಿನ ಅಪಾಯವನ್ನು ಉಂಟು ಮಾಡುತ್ತಿದೆ.

ಈ ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ಇಲ್ಲದೇ ನೀರು ರಸ್ತೆಯ ಮೇಲೆಯೇ ಹರಿದು ಹಾಗೂ ಅಧಿಕ ಭಾರದ ಘನ ವಾಹನಗಳ ಅಧಿಕ ಸಂಚಾರದಿಂದ ಇಂತಹ ದುಸ್ಥಿತಿಗೆ ಈ ರಸ್ತೆಗೆ ಬಂದಿದೆ ಎಂದು ಸ್ಥಳೀಯರು ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಈ ಭಾಗದ ಸುಮಾರು 60ಕ್ಕೂ ಅಧಿಕ ಮನೆಗಳು ಹಾಗೂ ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳು, ವಾಹನ ಸವಾರರು ನಿತ್ಯ ಸಂಕಟವನ್ನು ಅನುಭವಿಸುವಂತೆ ಆಗಿದೆ ಎಂದು ಪರಿತಪಿಸುತ್ತಿದ್ದಾರೆ.

ಕೋಟೆ ಗ್ರಾ.ಪಂ. ಸಹಿತ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಈ ಕೂಡಲೇ ಹೆಚ್ಚಿನ ಅವಘಡಗಳು ಸಂಭವಿಸುವ ಮುನ್ನವೇ ಎಚ್ಚೆತ್ತು ಶಾಶ್ವತ ಪರಿಹಾರವನ್ನು ಒದಗಿಸಿ ರಸ್ತೆಯನ್ನು ಸುಸ್ಥಿತಿಗೆ ತಂದು ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

Advertisement

ನಡೆದಾಡಲೂ ಸಂಕಷ್ಟ ಪಡುವಂತಾಗಿದೆ
ಘನ ವಾಹನಗಳು ಸಂಚರಿಸಿ ರಸ್ತೆಯು ಕಾಣೆಯಾಗಿ ಹೊಂಡ ಗುಂಡಿ ಮಾತ್ರ ಇದೆ. ಸ್ಥಳೀಯವಾಗಿ ಶಾಲೆಯ ಮಕ್ಕಳು, ಮಹಿಳೆಯರು, ಕೆಲಸಕ್ಕೆ ತೆರಳುವವರು ವಾಹನ ಸಂಚರಿಸುವಾಗ ಕೆಸರು ಎರಚುವ ಭೀತಿಯಿಂದ ರಸ್ತೆಯಲ್ಲಿ ನಡೆದಾಡಲೂ ಸಂಕಷ್ಟ ಪಡುವಂತಾಗಿದೆ. ಇನ್ನು ವಾಹನ ಸಂಚಾರವಂತೂ ಸರ್ಕಸ್‌ನಂತಾಗಿದೆ. ರಸ್ತೆಯ ಆರಂಭದ ಜಂಕ್ಷನ್‌ ಪ್ರದೇಶವೂ ಹೊಂಡ ಗುಂಡಿ, ಕೆಸರು ನೀರು ತುಂಬಿ ಅವ್ಯವಸ್ಥೆಯಿಂದ ಕೂಡಿದೆ. ಕೂಡಲೇ ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಎಚ್ಚೆತ್ತು ರಸ್ತೆ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸಲಿ. ಈ ಭಾಗದ ನಿವಾಸಿಗಳ ನಿತ್ಯ ಬವಣೆಗೆ ಮುಕ್ತಿ ಕಲ್ಪಿಸಲಿ. – ಉಮಾನಾಥ, ಸ್ಥಳೀಯರು, ರಿಕ್ಷಾ ಚಾಲಕ

ತಾತ್ಕಾಲಿಕ ದುರಸ್ತಿ ಕಾರ್ಯ
ಕೋಟೆ ಸಂಪರ್ಕ ರಸ್ತೆಯ ಆರಂಭದ ಭಾಗದಲ್ಲಿ ತಾತ್ಕಾಲಿಕ ದುರಸ್ತಿ ನಡೆಸಲಾಗುತ್ತದೆ. ಇನ್ನುಳಿದಂತೆ ಕಜಕಡೆ ಭಾಗದಲ್ಲಿ ಉದ್ಯಮಿಗಳ ಅಧಿಕ ಭಾರದ ವಾಹನಗಳ ಓಡಾಟದಿಂದ ರಸ್ತೆಯು ಹಾಳಾಗಿದೆ. ಸೂಕ್ತ ರೀತಿಯಲ್ಲಿ ಅನುದಾನದ ಹೊಂದಾಣಿಕೆ ಮಾಡಿಕೊಂಡು ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ನಡೆಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. – ಪ್ರಮೀಳ ಜತ್ತನ್ನ,
ಅಧ್ಯಕ್ಷರು, ಕೋಟೆ ಗ್ರಾ.ಪಂ.

ರಸ್ತೆ ಆರಂಭದಲ್ಲಿ ಹೊಂಡಗುಂಡಿಗಳಿಂದ ಸ್ವಾಗತ
ಕೋಟೆ ಸಂಪರ್ಕದ ಈ ರಸ್ತೆಯು ಆರಂಭದಲ್ಲಿ ಬೃಹತ್‌ ಗಾತ್ರದ ಹೊಂಡ ಗುಂಡಿಗಳನ್ನು ಹೊಂದಿದ್ದು, ಬಳಿಕ ಸುಸಜ್ಜಿತ ಕಾಂಕ್ರೀಟ್‌ ರಸ್ತೆಯನ್ನು ಹೊಂದಿದೆ. ಅಭಿವೃದ್ಧಿಗೊಂಡ ಕಾಂಕ್ರೀಟ್‌ ರಸ್ತೆಯ ಮುಕ್ತಾಯದ ಬಳಿಕ ಮುಂದುವರೆದ ಈ ರಸ್ತೆಯಲ್ಲಿ ಇಂತಹ ಹೊಂಡ ಗುಂಡಿಯಿಂದ ಕೂಡಿದ್ದು, ಸುಗಮ ಸಂಚಾರಕ್ಕೆ ತೊಡಕುಂಟು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next