Advertisement

ಕಸ್ತೂರಿ ವರದಿ ತಿರಸ್ಕಾರ : ಸಂಪುಟ ಉಪ ಸಮಿತಿ ತೀರ್ಮಾನ

11:25 PM Dec 28, 2020 | mahesh |

ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ಸಂಬಂಧ ಡಾ| ಕೆ. ಕಸ್ತೂರಿ ರಂಗನ್‌ ಸಮಿತಿ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ಇದು ಜಾರಿಯಾದರೆ ಗಂಡಾಂತರ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿರುವ ರಾಜ್ಯ ಸರಕಾರವು, ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ಬಗ್ಗೆ ಸದ್ಯದಲ್ಲೇ ಕೇಂದ್ರ ಸರಕಾರಕ್ಕೆ ಲಿಖೀತ ಅಭಿಪ್ರಾಯ ಸಲ್ಲಿಸಲು ಮುಂದಾಗಿದೆ.

Advertisement

ಅರಣ್ಯ ಸಚಿವ ಆನಂದ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ)ವು ವ್ಯತಿರಿಕ್ತ ಆದೇಶ ನೀಡಿದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಲಾಗಿದೆ.

ವರದಿ ಅವೈಜ್ಞಾನಿಕವಾಗಿದ್ದು, ಅದರ ಜಾರಿ ಕಾರ್ಯ ಸಾಧು ವಲ್ಲ. ಅವೈಜ್ಞಾನಿಕ ವರದಿಯನ್ನು ಸರಕಾರ ಜನರ ಮೇಲೆ ಹೇರುವುದಿಲ್ಲ. ಹಾಗಾಗಿ ವರದಿಯನ್ನು ತಿರಸ್ಕರಿಸಲು ತೀರ್ಮಾನಿಸಲಾಗಿದೆ ಎಂದು ಸಭೆಯ ಬಳಿಕ ಸಚಿವ ಆರ್‌. ಅಶೋಕ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಾ| ಕಸ್ತೂರಿ ರಂಗನ್‌ ವರದಿಗೆ ಒಪ್ಪಿಗೆ ಇಲ್ಲ ಎಂಬುದಾಗಿ ಎನ್‌ಜಿಟಿಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು. ಡಿ. 31ರೊಳಗೆ ಇದು ಎನ್‌ಜಿಟಿ ಮುಂದೆ ವಿಚಾರಣೆಗೆ ಬರಲಿದ್ದು, ಕೇಂದ್ರ ಸರಕಾರ ಪ್ರಮಾಣ ಪತ್ರ ಸಲ್ಲಿಸಬೇಕಿದೆ. ಆ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚಿಸಿ ವರದಿಯನ್ನು ತಿರಸ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಲುವನ್ನು ಸಿಎಂ ಮೂಲಕ ಒಂದೆರಡು ದಿನಗಳಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವರಿಗೆ ತಿಳಿಸಲಾಗುವುದು ಎಂದರು.

ವರದಿ ಜಾರಿಗೆ ಎಲ್ಲ ಹಂತಗಳಲ್ಲೂ ವಿರೋಧವಿದೆ. ವರದಿಯನ್ನು ಒಪ್ಪಿದರೆ ಜನರ ಹೋರಾಟಕ್ಕೆ ನಾಂದಿ ಹಾಡಿದಂತಾಗಲಿದೆ ಎಂದರು.

Advertisement

ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ ರಾಜ್ಯ ಸರಕಾರ ನೆರೆಯ ಕೇರಳಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಕೇರಳಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಈಗಾಗಲೇ ವರದಿ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು.

ಜನರಲ್ಲಿ ಹರ್ಷ; ಕಾನೂನು ಸಂಘರ್ಷಕ್ಕೆ ಹಾದಿ?
ಕುಂದಾಪುರ: ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿಚಾರದಲ್ಲಿ ಸರಕಾರ ತೆಗೆದುಕೊಂಡಿರುವ ನಿರ್ಧಾರ ಜನವಲಯದಲ್ಲಿ ಹರ್ಷ ಮೂಡಿಸಿದೆ. ಆದರೆ ಸಾರಾಸಗಟಾದ ನಿರಾಕರಣೆ ಕಾನೂನು ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ.

ವರದಿ ಅನುಷ್ಠಾನಿಸದಿದ್ದರೆ ಏನು ಲಾಭ?
ಒಕ್ಕಲೆಬ್ಬಿಸುವ ಆತಂಕ ದೂರವಾಗುತ್ತದೆ. ಇದ್ದ ಜಾಗವನ್ನು ಅರಣ್ಯ ಇಲಾಖೆಗೆ ನೀಡಬೇಕೆಂಬ ಶರತ್ತು ಇಲ್ಲವಾಗುತ್ತದೆ. ಮೂಲ ಸೌಕರ್ಯಗಳಿಗೆ ಅಡೆತಡೆ ನಿವಾರಣೆಯಾಗುತ್ತದೆ. ಕುಡಿಯುವ ನೀರು, ರಸ್ತೆ ಮತ್ತಿತರ ಮೂಲ ಸೌಕರ್ಯಗಳಿಗೆ ಅಡ್ಡಿ ಮಾಡಬಾರದು ಎಂದು ನ್ಯಾಯಾಲಯದ ನಿರ್ದೇಶನ ಇದ್ದರೂ ಇಲಾಖೆಗಳು ಮಣಿಯುವುದಿಲ್ಲ. ಈ ಆತಂಕ ಜನರಿಂದ ಮರೆಯಾಗಲಿದೆ.

ಬೃಹತ್‌ ಕಾರ್ಖಾನೆ, ದೊಡ್ಡ ಹೋಟೆಲ್‌, ರೆಸಾರ್ಟ್‌, ಗಣಿಗಾರಿಕೆ ಇತ್ಯಾದಿಗಳ ಕುರಿತು ವರದಿ ಯಲ್ಲಿ ಆಕ್ಷೇಪ ಇದ್ದು, ವರದಿ ತಿರಸ್ಕೃತವಾದರೂ ಅನುಷ್ಠಾನ ಸುಲಭವಲ್ಲ. ತೋಟಕ್ಕೆ, ಕೃಷಿಗೆ ಔಷಧ ಸಿಂಪಡಿಸುವುದರ ಸಹಿತ ಸಣ್ಣಪುಟ್ಟ ಗೊಂದಲ ಗಳಿದ್ದವು. ಇವುಗಳನ್ನು ಪರಿಹರಿಸುವತ್ತ ಸರಕಾರ ಗಮನಿಸಿಲ್ಲ. ಇನ್ನಂತೂ ಅವಶ್ಯವೂ ಇಲ್ಲ. ಅರಣ್ಯ ಇಲಾಖೆಯ ಬಫರ್‌ ವಲಯವನ್ನು ಕಡಿತ ಮಾಡ ಬೇಕು, ಜನವಸತಿ ಪ್ರದೇಶ ಹೊರಗಿಡಬೇಕೆಂಬ ಬೇಡಿಕೆ ಕೂಡ ಇತ್ತು. ಇನ್ನು ಅದು ಈಡೇರಲಿದೆ.

ಮನ್ನಣೆ ಸಿಗುವುದೇ?
ಕೇರಳ ಸರಕಾರ ವರದಿ ತಿರಸ್ಕಾರದ ನಿರ್ಣಯವನ್ನು ಐದು ವರ್ಷಗಳ ಹಿಂದೆಯೇ ತೆಗೆದುಕೊಂಡಿತ್ತು. ಈಗ ಕರ್ನಾಟಕದ ಸರದಿ. ಆದರೆ ಇದನ್ನು ಕೇಂದ್ರ ಸರಕಾರ ಮತ್ತು ಹಸುರು ಪೀಠ ಎಷ್ಟು ಮಾನ್ಯ ಮಾಡಲಿದೆ ಎನ್ನುವುದು ಪ್ರಶ್ನೆ. ಅಲ್ಲದೆ, ವರದಿ ಜಾರಿಗೆ ಈಗಾಗಲೇ ಸುಪ್ರೀಂ ಕೋರ್ಟ್‌ ಗಡುವು ನೀಡಿರುವ ಕಾರಣ ಅದರ ಕೆಂಗಣ್ಣಿಗೆ ಗುರಿಯಾಗುವ ಅಪಾಯವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next