Advertisement

ಕಾಶಿಪಟ್ಣ: ತೋಡಿನ ದಂಡೆ ಒಡೆದು ಗದ್ದೆಗೆ ನುಗ್ಗಿದ ನೀರು

12:00 PM Jul 15, 2018 | Team Udayavani |

ವೇಣೂರು : ನಿರಂತರವಾಗಿ ಸುರಿದ ಮಳೆಗೆ ತೋಡಿನ ದಂಡೆ ಒಡೆದು ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಭತ್ತದ ಕೃಷಿಗೆ ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾ.ಪಂ. ವ್ಯಾಪ್ತಿಯ ಕಿರೋಡಿ ಕಿರಿಂಗಲ್‌ ಪ್ರದೇಶದಲ್ಲಿ ಸಂಭವಿಸಿದೆ. ಸುಮಾರು 15 ಕುಟುಂಬಗಳ ಕೃಷಿಗೆ ಹಾನಿಯಾಗಿದೆ.

Advertisement

ಘಟನೆ ಏನು?
ಸುರಿಯುತ್ತಿರುವ ಭಾರೀ ಮಳೆಗೆ ಗದ್ದೆಯ ಬಳಿ ಇರುವ ತೋಡಿನ ದಂಡೆ ಒಡೆದು ನೀರು ಗದ್ದೆಗೆ ಹರಿದು ಕಿರಿಂಗಲ್‌ ಪ್ರದೇಶದ ಸುಮಾರು 25 ಎಕ್ರೆ ಭತ್ತದ ಕೃಷಿ ನಾಶವಾಗಿದೆ. ಈ ಬಗ್ಗೆ ಕಾಶಿಪಟ್ಣ ಗ್ರಾ.ಪಂ., ಗ್ರಾಮಕರಣಿಕರು ಕಂದಾಯ ಅಧಿಕಾರಿಗಳಿಗೆ, ತಹಶೀಲ್ದಾರರಿಗೆ, ಕೃಷಿ ಇಲಾಖೆ, ಜಲಾನಯನ ಇಲಾಖೆಗೆ ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಜಲಾನಯನ ಇಲಾಖೆ ಹಾಗೂ ಗ್ರಾಮಕರಣಿಕರು ಒಂದೆರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದು ಹೋದವರು ಮತ್ತೆ ವಾಪಸ್‌ ಬರಲಿಲ್ಲ ಎನುತ್ತಾರೆ ಇಲ್ಲಿನ ರೈತರು. ತಹಶೀಲ್ದಾರರಿಗೆ ಕರೆ ಮಾಡಿದರೂ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂಬ ಭರವಸೆ ಹೊರತು ಇದುವರೆಗೆ ಯಾರೂ ಭೇಟಿ ನೀಡಲಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಬೇಡಿಕೆ ಕಾಲು ಸಂಕದ್ದು, ಮಾಡಿದ್ದು ಕಿಂಡಿ ಅಣೆಕಟ್ಟು
ಈ ಗದ್ದೆ ಬಳಿ ಇರುವ ತೋಡಿಗೆ ಸಾರ್ವಜನಿಕರಿಗೆ ಹೋಗಲು ಕಾಲು ಸಂಕಕ್ಕೆ ಮನವಿ ನೀಡಿದ್ದು, ಇಲಾಖೆ ಕಿಂಡಿ ಅಣೆಕಟ್ಟು ನಿರ್ಮಿಸಿದೆ. ಇದರಿಂದಾಗಿಯೇ ಈ ಅನಾಹುತಕ್ಕೆ ಕಾರಣವಾಗಿದೆ. ಕಿರಿದಾದ ತೋಡು ಇದಾಗಿರುವುದರಿಂದ ಕಿಂಡಿ ಅಣೆಕಟ್ಟುವಿನಲ್ಲಿ ಕಸ-ಕಡ್ಡಿಗಳು ತುಂಬಿ ತೊಡಿನ ದಂಡೆ ಒಡೆದು ಗದ್ದೆಗೆ ನೀರು ನುಗ್ಗಿದೆ.

ಭಾರೀ ನಷ್ಟ
ಭತ್ತದ ಕೃಷಿಯನ್ನೇ ನಂಬಿದ್ದ ನಮಗೆ ಈ ಹಾನಿ ಭಾರೀ ನಷ್ಟ ಉಂಟು ಮಾಡಿದೆ. ಅಧಿಕಾರಿಗಳು ಶೀಘ್ರ ಸ್ಪಂದಿಸಿ ಕೃಷಿ ಮಾಡಲು ಅನುಕೂಲ ಮಾಡಿಕೊಡಬೇಕು.
-ಅರುಣ್‌ ಶೆಟ್ಟಿ, ಕೃಷಿಕ

Advertisement

ಸ್ಪಂದಿಸುವವರಿಲ್ಲ
ಭತ್ತದ ಕೃಷಿಯೇ ನಮ್ಮ ಬದುಕು. ಆದರೆ ನಮ್ಮ ಕಷ್ಟಕ್ಕೆ ಸ್ಪಂದಿಸುವವರು ಯಾರೂ ಇಲ್ಲ. ಪ್ರತಿಭಟಿಸುವ ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಶಕ್ತಿ ನಮ್ಮಲ್ಲಿಲ್ಲ. ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಿ ಎಂಬುದೇ ನಮ್ಮ ಮನವಿ.
-ಶೀನ ಪೂಜಾರಿ, ಕೃಷಿಕ

ಪರಿಹಾರ ಸಿಗಬಹುದು
ಕಾಶಿಪಟ್ಣ ಗ್ರಾಮದ ಕಿರೋಡಿ ಕಿರಿಂಗಲ್‌ ಪ್ರದೇಶಕ್ಕೆ ಭೇಟಿ ನೀಡಿ ಕೃಷಿಕರ ಹಾನಿ ಬಗ್ಗೆ ರಿಪೋರ್ಟ್‌ ಮಾಡಿ ತಹಶೀಲ್ದಾರ್‌ರ ಗಮನಕ್ಕೆ ತಂದಿದ್ದೇವೆ. ಗದ್ದೆಗೆ ಮಣ್ಣು, ಮರಳು ಬಿದ್ದು ಹಾನಿಯಾದ ರೈತರಿಗೆ ಪರಿಹಾರ ಸಿಗಬಹುದು. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗದ್ದೆಗೆ ಹರಿಯುವ ನೀರನ್ನು ನಿಲ್ಲಿಸಲು ಕಷ್ಟಸಾಧ್ಯ. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ ನೀಡಬಹುದು.
 -ಸುಜಿತ್‌
ಗ್ರಾಮಲೆಕ್ಕಿಗ

Advertisement

Udayavani is now on Telegram. Click here to join our channel and stay updated with the latest news.

Next