ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಹಾಲಿ ಶಾಸಕರು ಗಳಿಸುವ ವಾರ್ಷಿಕ ಆದಾಯದ ಪಟ್ಟಿಯಲ್ಲಿ ಕರ್ನಾಟಕದ ಶಾಸಕರು ಮೊದಲ ಸ್ಥಾನದಲ್ಲಿ ಇದ್ದಾರೆ. ಛತ್ತೀಸ್‌ಗಡದ ಶಾಸಕರು ಕೊನೆಯ ಸ್ಥಾನದಲ್ಲಿದ್ದಾರೆ. ಈ ಬಗ್ಗೆ “ಎಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ì’ ಮತ್ತು “ನ್ಯಾಷನಲ್ ಇಲೆಕ್ಷನ್ ವಾಚ್’ ಸಂಘಟನೆ ಜಂಟಿಯಾಗಿ ಅಧ್ಯಯನ ನಡೆಸಿವೆ.
ಈ ವರದಿಯ ಪ್ರಕಾರ ಪ್ರತಿ ಶಾಸಕನ ಸರಾಸರಿ ಆದಾಯ ವರ್ಷಕ್ಕೆ 24.59 ಲಕ್ಷ ರೂ. ಇದೆ. ಈ ಪೈಕಿ ಕರ್ನಾಟಕದಲ್ಲಿನ ಪ್ರತಿ ಶಾಸಕರು ವರ್ಷಕ್ಕೆ ಸರಾಸರಿ 1 ಕೋಟಿ ರೂ. ಆದಾಯ ಪಡೆಯುತ್ತಾರೆ ಎಂದು ಹೇಳಿಕೊಂಡಿದೆ. ಛತ್ತೀಸ್‌ಗಡದ ಶಾಸಕರು ವಾರ್ಷಿಕವಾಗಿ ಕನಿಷ್ಠ 5.4 ಲಕ್ಷ ರೂ. ಆದಾಯ ಪಡೆದುಕೊಳ್ಳುತ್ತಿದ್ದಾರೆ.
ಶಾಸಕರಿಗೆ ಹೋಲಿಕೆ ಮಾಡಿದರೆ, ಶಾಸಕಿಯರಿಗೆ ಕಡಿಮೆ ಆದಾಯ ಬರುತ್ತದೆ. ಹೀಗಾಗಿ ಅದರಲ್ಲಿಯೂ ಲಿಂಗ ತಾರತಮ್ಯ ಇದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅನಕ್ಷರಸ್ಥರು ಎಂದು ಘೋಷಿಸಿಕೊಂಡ ಶಾಸಕರೂ ವಾರ್ಷಿಕವಾಗಿ 9.31 ಲಕ್ಷ ರೂ. ಆದಾಯ ಪಡೆಯುತ್ತಾರೆ. ಅರ್ಧಕ್ಕಿಂತ ಹೆಚ್ಚು ಶಾಸಕರು ತಮ್ಮ ವೃತ್ತಿಯನ್ನು ಕೃಷಿ ಅಥವಾ ವ್ಯಾಪಾರ ಎಂದು ಘೋಷಿಸಿಕೊಂಡಿದ್ದಾರೆ.
4,086 ಶಾಸಕರ ಪೈಕಿ 3,145 ಶಾಸಕರು ಸಲ್ಲಿಸಿರುವ ಅಫಿಡವಿಟ್‌ಗಳನ್ನು ಪರಿಶೀಲಿಸಿದ ಬಳಿಕ ಈ ವರದಿ ಸಿದ್ಧಗೊಳಿಸಲಾಗಿದೆ ಎಂದು “ಎಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾಮ್ಸ್ì’ ಮತ್ತು “ನ್ಯಾಷನಲ್ ಇಲೆಕ್ಷನ್ ವಾಚ್’ ಹೇಳಿಕೊಂಡಿವೆ. 941 ಶಾಸಕರು ತಮ್ಮ ಆದಾಯವನ್ನೇ ಘೋಷಣೆ ಮಾಡಿಲ್ಲ.
ಈ ವರದಿಯ ಪ್ರಕಾರ 3,145 ಶಾಸಕರ ವಾರ್ಷಿಕ ಆದಾಯ 24.59 ಲಕ್ಷ ರೂ. ಇದೆ. ದಕ್ಷಿಣ ಭಾರತದ 711 ಶಾಸಕರ ಸರಾಸರಿ ವಾರ್ಷಿಕ ಆದಾಯ 51.99 ಲಕ್ಷ ರೂ. ಇದೆ. ರಾಜ್ಯವಾರು ಹೇಳುವುದಿದ್ದರೆ ಕರ್ನಾಟಕದ 203 ಶಾಸಕರ ಅಫಿಡವಿಟ್‌ಗಳನ್ನು ಅಧ್ಯಯನ ಮಾಡಲಾಗಿದ್ದು, ಸರಾಸರಿ ಆದಾಯ 111.4 ಲಕ್ಷ ರೂ. ಇದೆ. ಈ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಮಹಾರಾಷ್ಟ್ರ 2ನೇ ಸ್ಥಾನದಲ್ಲಿದ್ದು, 256 ಶಾಸಕರ ವಿವರ ಪರಿಶೀಲನೆ ಬಳಿಕ ಪ್ರತಿ ಶಾಸಕರಿಗೆ 43.4 ಲಕ್ಷ ರೂ., ಛತ್ತೀಸ್‌ಗಡದ 63 ಶಾಸಕರಿಗೆ 5.4 ಲಕ್ಷ ರೂ. ಆದಾಯ, ಜಾರ್ಖಂಡ್‌ನ 72 ಶಾಸಕರ ವಿವರಗಳ ಪರಿಶೀಲನೆ ಬಳಿಕ 7.4 ಲಕ್ಷ ರೂ. ಆದಾಯ ಇದೆ. 55 ಶಾಸಕರು ತಮ್ಮ ವೃತ್ತಿ ಯಾವುದು ಎಂದು ನಮೂದಿಸಿಲ್ಲ. 771 ಶಾಸಕರು ತಮ್ಮ ವೃತ್ತಿ ಉದ್ಯಮ, 758 ಮಂದಿ ಕೃಷಿ ಅಥವಾ ರೈತ ಎಂದು ವಿವರಿಸಿದ್ದಾರೆ.
ರೈತ ಅಥವಾ ಕೃಷಿ ತಮ್ಮ ಉದ್ಯಮ ಎಂದು ಹೇಳಿಕೊಂಡವರ ಪೈಕಿ 57.81 ಲಕ್ಷ ರೂ. ಆದಾಯ ಪಡೆಯುವವರಿದ್ದಾರೆ. ರಿಯಲ್ ಎಸ್ಟೇಟ್, ಸಿನಿಮಾ ಮತ್ತು ನಟನಾ ಕ್ಷೇತ್ರ ಎಂದು ನಮೂದಿಸಿರುವವರ ಪ್ರಮಾಣ ಶೇ.1. ಆದರೆ ಅತ್ಯಂತ ಹೆಚ್ಚು ಆದಾಯ ಪಡೆಯುವ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ಗೃಹಿಣಿ, ಅಧ್ಯಾಪಕಿ, ಪಿಂಚಣಿದಾರರು ಮತ್ತು ವಕೀಲರು ಎಂದು ನಮೂದಿಸಿಕೊಂಡವರು ಕಡಿಮೆ ಆದಾಯ ಪಡೆಯುವ ವರ್ಗದಲ್ಲಿದ್ದಾರೆ.