Advertisement

ಮುತುವರ್ಜಿ ವಹಿಸಿ ಸೇವೆ ನೀಡಿ: ಡಾ|ಹರ್ಷ

09:00 AM Mar 29, 2018 | Team Udayavani |

ಕಾರ್ಕಳ: ನೌಕರರು ಸಂಘಟಿಗರಾಗಿದ್ದುಕೊಂಡು ತಮ್ಮ ಸವಲತ್ತುಗಳ ಬಗ್ಗೆ ಹೋರಾಡುವುದರ ಜತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮುತುವರ್ಜಿ ವಹಿಸಬೇಕು ಎಂದು ಕಾರ್ಕಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಡಾ| ಹರ್ಷ ಕೆ.ಎಂ. ಹೇಳಿದರು.

Advertisement

ಬಂಡೀಮಠದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹಣ್ಯ ಶೇರಿಗಾರ್‌ ಅವರು ಮಾತನಾಡಿ, ಪ್ರತಿಯೊಬ್ಬ ಸರಕಾರಿ ನೌಕರನಿಗೂ ಸಂಘದ ಸದಸ್ಯ ಎಂಬ ಅಭಿಮಾನ ಇರಬೇಕು. 6ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾ, ರಾಜ್ಯ ಸಂಘದವರು ಶ್ರಮ ಪಟ್ಟಿದ್ದಾರೆ. ಕಾರ್ಕಳ ಸಂಘದ ಅಧ್ಯಕ್ಷರು ಸಮಾಜಮುಖೀ ಚಿಂತನೆಯ ಮೂಲಕ ಚಾಲನೆ ನೀಡಿದ ಒಇಇ ಯೋಜನೆ ಮೆಚ್ಚುವಂಥ‌ದ್ದು ಎಂದರು.

ಕಾರ್ಯದರ್ಶಿ ಉಮೇಶ್‌ ಕೆ.ಎಸ್‌. ಆಡಳಿತ ವರದಿ, ಖಜಾಂಚಿ ಬಿ.ವಿ. ಶಿವರಾಮ್‌ ರಾವ್‌ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭ ಸರಕಾರಿ ನೌಕರರ 12 ಪ್ರತಿಭಾವಂತ ಮಕ್ಕಳನ್ನು, ವಿವಿಧ ಇಲಾಖೆಗಳ 20 ಮಂದಿ ನಿವೃತ್ತ ಸರಕಾರಿ ನೌಕರರನ್ನು ಸಮ್ಮಾನಿಸಲಾಯಿತು.

ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದಲ್ಲಿ ಪದಕ ಗಳಿಸಿದ ಗ್ರೆಟ್ಟಾ ಮಸ್ಕರೇನಸ್‌, ರಾಷ್ಟ್ರ ಮಟ್ಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಪದಕ ವಿಜೇತೆ ಸ್ವಾತಿ, ಪೌರ ಕಾರ್ಮಿಕ ಬೊಗ್ಗು ಅವರನ್ನು ನಗದು ಪುರಸ್ಕಾರ‌ದೊಂದಿಗೆ ಹಾಗೂ ಬಾಲ ಕವಯಿತ್ರಿ ಅವನಿ ಉಪಾಧ್ಯ, ತೆರಿಗೆ ಸಲಹೆಗಾರ ನಾಮ್‌ದೇವ್‌ ಕಾಮತ್‌, ಸ್ವತ್ಛ ವಿದ್ಯಾಲಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ, ಸರಕಾರಿ ಪ್ರೌಢಶಾಲೆ ಸೂಡ ಇಲ್ಲಿನ ಮುಖ್ಯ ಶಿಕ್ಷಕರಾದ ಹರ್ಷಿಣಿ ಜಯರಾಜ್‌ ಶೆಟ್ಟಿ, ರಿತೇಶ್‌ ಶೆಟ್ಟಿ ಮತ್ತು ಸಹಶಿಕ್ಷಕರನ್ನು ಸಮ್ಮಾನಿಸಲಾಯಿತು.

Advertisement

ತಾಲೂಕು ಸಂಘದ ಅಧ್ಯಕ್ಷ  ಜೋಕಿಂ ಮೈಕಲ್‌ ಎಚ್‌. ಪಿಂಟೊ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೋಶಾಧಿಕಾರಿ ಚಂದ್ರಶೇಖರ್‌, ಸರಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ವಸಂತ ಎಂ., ಶಶಿಧರ ಭಂಡಾರಿ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕೃತರನ್ನು ಗೀತಾ ಕೆ., ನಿವೃತ್ತರನ್ನು ಹಾಗೂ ಸಮ್ಮಾನಿತರನ್ನು ಕೃಷ್ಣ ಕುಮಾರ್‌ ಎನ್‌.ಇ. ಪರಿಚಯಿಸಿದರು. ರಾಮಕೃಷ್ಣ ಹೆಗ್ಡೆ, ಸದಾನಂದ ಪೈ, ಅರುಣ್‌ ಕುಮಾರ್‌ ಹಾಗೂ ಸೈಮನ್‌ ಡಿ’ಮೆಲ್ಲೊ ಸಹಕರಿಸಿದರು. ಪ್ರಮೋದ್‌ ಕುಮಾರ್‌ ಸ್ವಾಗತಿಸಿ, ಜಯಲಕ್ಷ್ಮೀ ವಂದಿಸಿದರು. ಗುಣಪಾಲ ಜೈನ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next