ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿ ತನ್ನ ರಾಜಕೀಯ ಕಾರ್ಯತಂತ್ರ ಬದಲಾಯಿಸಲು ಮುಂದಾಗಿದೆ. ದಾವಣಗೆರೆ ಸಮಾವೇಶಕ್ಕೆ ಪ್ರತ್ಯುತ್ತರ ಎಂಬಂತೆ ಸರ್ಕಾರದ ಸಾಧನೆ ಬಿಂಬಿಸಲು ಬೃಹತ್ ಸಮಾವೇಶ ಹಮ್ಮಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ.
ದಾವಣಗೆರೆಯಲ್ಲಿ ಸೇರಿದ್ದ ಬೃಹತ್ ಜನಸ್ತೋಮ ದಿಂದ ಬಿಜೆಪಿ ನಾಯಕರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಪಕ್ಷದ ವತಿಯಿಂದಲೂ ಬೃಹತ್ ಸಮಾವೇಶ ಹಮ್ಮಿಕೊಳ್ಳಬೇಕೆಂಬ ಚರ್ಚೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಮತ್ತು ಬಿಜೆಪಿ ಹಿಂದುಳಿದ ವರ್ಗಗಳಿಗೆ ಮತ್ತು ದಲಿತ ಸಮುದಾಯಗಳಿಗೆ ನೀಡುತ್ತಿರುವ ಪ್ರಾತಿ ನಿಧ್ಯದ ಕುರಿತು ಆ ಸಮುದಾಯಗಳಿಗೆ ಜಾಗೃತಿ ಮೂಡಿಸಲು ಬೂತ್ ಮಟ್ಟದಲ್ಲಿಯೇ ಅಭಿಯಾನ ರೂಪದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಚಿಂತನೆ ನಡೆಸಿದೆ.
ದಲಿತರು ಮತ್ತು ಒಬಿಸಿ ಸಮುದಾಯದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಪುಟದಲ್ಲಿ ನೀಡಿರುವ ಸಚಿವ ಸ್ಥಾನ, ವಿವಿಧ ನಿಗಮ ಮಂಡಳಿ ಗಳಲ್ಲಿ ಪ್ರಾತಿನಿಧ್ಯ, ಪಕ್ಷದ ವಿವಿಧ ಘಟಕಗಳಲ್ಲಿ ನೀಡಿ ರುವ ಪ್ರಾತಿನಿಧ್ಯದ ಕುರಿತು, ಕೇಂದ್ರ ಸಚಿವ ಸಂಪುಟದಲ್ಲಿ ಒಬಿಸಿಗೆ ನೀಡಿರುವ ಪ್ರಾತಿನಿಧ್ಯ, ರಾಜ್ಯಗಳ ರಾಜ್ಯಪಾಲರ ನೇಮಕ, ರಾಷ್ಟ್ರಪತಿ ನೇಮಕ ಸೇರಿ ದಂತೆ ಮಹತ್ವದ ಸ್ಥಾನಗಳಿಗೆ ಬಿಜೆಪಿಯಲ್ಲಿ ಹಿಂದು ಳಿದ ಹಾಗೂ ದಲಿತ ಸಮುದಾಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆ ಎನ್ನುವುದನ್ನು ಹೆಚ್ಚು ಪ್ರಚಾರ ನಡೆಸಲು ಪಕ್ಷದ ನಾಯಕರು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ಮೋದಿ, ಅಮಿತ್ ಶಾ ಕರೆಸಲು ಯತ್ನ : ಜನೋತ್ಸವ ಕಾರ್ಯಕ್ರಮ ರದ್ದಾಗಿದ್ದು, ಆ ಕಾರ್ಯಕ್ರಮವನ್ನು ಒಂದು ಭಾಗಕ್ಕೆ ಸೀಮಿತಗೊಳಿಸದೇ ಇಡೀ ರಾಜ್ಯದ ಜನರನ್ನು ಒಂದೆಡೆ ಸೇರಿಸಿ, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಿ, ಸಂದೇಶ ರವಾನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಿದ್ದರಾಮಯ್ಯ ಸಮಾವೇಶವನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ಕಾರ್ಯತಂತ್ರ ರೂಪಿಸಬೇಕೆಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಕಾರ್ಯಕ್ರಮದ ಬಗ್ಗೆ ಭಯ ಇಲ್ಲ. ಬಿಜೆಪಿ ರಾಜ್ಯಾದ್ಯಂತ ಕಾರ್ಯಕ್ರಮ ಮಾಡಲಿದೆ. ಸಮಾರೋಪ ಸಮಾರಂಭ ದಾವಣಗೆರೆ ಯಲ್ಲಿ ಮಾಡಲು ವಿನಂತಿ ಮಾಡುತ್ತೇನೆ. –
ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ
-ಶಂಕರ ಪಾಗೋಜಿ