Advertisement

Karnataka ರಾಜ್ಯದ ಶೇ. 39ರಷ್ಟು ಜನ ಪಟ್ಟಣಗಳಲ್ಲಿ ವಾಸ!

01:20 AM Sep 01, 2024 | Team Udayavani |

ಬೆಂಗಳೂರು: ಕಳೆದ 13 ವರ್ಷಗಳಲ್ಲಿ ರಾಜ್ಯದಲ್ಲಿ ನಗರ ಸ್ಥಳೀಯ ಸರಕಾರಗಳ ಸಂಖ್ಯೆ 219ರಿಂದ 315ಕ್ಕೆ ಅಂದರೆ ಶೇ. 44ರಷ್ಟು ಏರಿಕೆಯಾಗಿದೆ ಮತ್ತು ರಾಜ್ಯದ ಜನಸಂಖ್ಯೆಯ ಶೇ. 39ರಷ್ಟು ಜನರು ನಗರ ಮತ್ತು ಪಟ್ಟಣಗಳಲ್ಲಿ ವಾಸಿಸುತ್ತಿದ್ದು ಕರ್ನಾಟಕವು ದೇಶದಲ್ಲೇ ಅತಿ ವೇಗವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ ಎಂದು ಜನಾಗ್ರಹ ಸಂಸ್ಥೆಯ ವರದಿ ಹೇಳಿದೆ.

Advertisement

ಆದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಕ್ತ ಚುನಾವಣೆ ನಡೆಸಲು ಮತ್ತು ಸಂವಿಧಾನ ದತ್ತ ಅಧಿಕಾರ ನೀಡಲು ರಾಜ್ಯ ಸರಕಾರ ಹಿಂದೇಟು ಹಾಕುತ್ತಿದೆ ಎಂದು ವರದಿ ಹೇಳಿದೆ.

ಸಂಸ್ಥೆಯು ಕರ್ನಾಟಕದ ನಗರಗಳಲ್ಲಿ ವಿಕೇಂದ್ರೀಕೃತ ಸಹಭಾಗಿತ್ವದ ಆಡಳಿತದ ವಿಶ್ಲೇಷಣಾತ್ಮಕ ವಿಮರ್ಶೆ ಎಂಬ ವರದಿಯನ್ನು ಸ್ಥಳೀಯ ಸಂಸ್ಥೆಗಳ ಚುನಾವಣ ಸ್ಥಿತಿಗತಿ, ನಾಗರಿಕರ ಸಹಭಾಗಿತ್ವದ ಸ್ಥಿತಿಗತಿ ಮತ್ತು ವಿಕೇಂದ್ರೀಕರಣ ಎಂಬ 3 ಅಂಶಗಳನ್ನು ಇಟ್ಟುಕೊಂಡು ಸಿಎಜಿ ವರದಿ, ಆಡಳಿತ ಸುಧಾರಣ ಆಯೋಗದ ವರದಿ, ಹೈಕೋರ್ಟ್‌ ತೀರ್ಪು ಮತ್ತು ವಾರ್ಡ್‌ ಅಭಿವೃದ್ಧಿ ಸಮಿತಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಿದೆ.

ಸ್ಥಳೀಯ ಸರಕಾರಗಳನ್ನು ಬಲಿಷ್ಠಗೊಳಿಸಬೇಕು ಎಂಬುದು ಸಂವಿಧಾನದ ಆಶಯವಾಗಿದ್ದರೂ ಸಹ ಸ್ಥಳೀಯ ಸರಕಾರಗಳನ್ನು ಬಲಿಷ್ಠಗೊಳಿಸುವ ಪ್ರಯತ್ನ ನಡೆಯುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯುತ್ತಿಲ್ಲ, ಮೇಯರ್‌ ಆಯ್ಕೆಯಲ್ಲಿಯೂ ವಿಳಂಬವಾಗುತ್ತಿದೆ. 280 ನಗರ ಸ್ಥಳೀಯ ಸರಕಾರದಲ್ಲಿ 210 ಕಡೆ 26 ತಿಂಗಳಲ್ಲಿ ಕೌನ್ಸಿಲ್‌ ರಚನೆಯಾಗಿಲ್ಲ. ಈ ಪೈಕಿ ಶೇ. 89 (187) ಕಡೆ ಮೇಯರ್‌, ಉಪ ಮೇಯರ್‌ಗಳ ಮೀಸಲಾತಿ ವಿವಾದ ನ್ಯಾಯಾಲಯದಲ್ಲಿದೆ. ಮಂಗಳೂರು ಹೊರತು ಪಡಿಸಿ ಉಳಿದೆಡೆ ವಾರ್ಡ್‌ ಅಭಿವೃದ್ಧಿ ಸಮಿತಿಗಳ ರಚನೆ ಮತ್ತು ಅವುಗಳ ಕಾರ್ಯನಿರ್ವಹಣೆಯಲ್ಲಿ ಅಡ್ಡಿ ಸೃಷ್ಟಿಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಾಗೆಯೇ ನಗರದ ಕುಂದುಕೊರತೆ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ವಾರ್ಡ್‌ ಸಮಿತಿ ಪ್ರಮುಖ ಪಾತ್ರವಹಿಸಲಿದ್ದು ವಾರ್ಡ್‌ ಕಮಿಟಿ ಮತ್ತು ಏರಿಯಾ ಸಭಾಗಳ ರಚನೆಗೆ ಸೂಕ್ತ ನಿಯಮ ಮತ್ತು ನಿರ್ದಿಷ್ಟ ಪ್ರಕ್ರಿಯೆಯನ್ನು ರೂಪಿಸಬೇಕು ಎಂದು ವರದಿ ಹೇಳಿದೆ.

Advertisement

ಯಾವೆಲ್ಲಾ ಮಹಾನಗರ ಪಾಲಿಕೆಗಳು?
ಬೆಂಗಳೂರು, ಮಂಗಳೂರು, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ.

ಬೆಂಗಳೂರಿನಲ್ಲಿ 47 ತಿಂಗಳು, ವಿಜಯನಗರದಲ್ಲಿ 38 ತಿಂಗಳಿನಿಂದ ಚುನಾವಣೆ ವಿಳಂಬವಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಯಲ್ಲಿ ತಲಾ 30 ತಿಂಗಳು ವಿಳಂಬವಾಗಿದ್ದು ಉಳಿದ ಪಾಲಿಕೆಗಳಲ್ಲಿಯ ಚುನಾವಣೆ ಹಲವು ತಿಂಗಳು ವಿಳಂಬವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಲೋಪಗಳು?
 11 ಮಹಾನಗರಗಳಲ್ಲಿ ಮಂಗಳೂರು ಹೊರತು ಪಡಿಸಿ ಉಳಿದ 11 ಮಹಾನಗರಗಳಲ್ಲಿ ವಾರ್ಡ್‌ ಸಮಿತಿ ಅಥವಾ ಏರಿಯಾ ಸಭಾಗಳಿಲ್ಲ
 ನಗರ ಸ್ಥಳೀಯ ಸಂಸ್ಥೆಗಳ ಚುನಾ ವಣೆ ಸರಾಸರಿ 22 ತಿಂಗಳು ವಿಳಂಬವಾಗುತ್ತಿದೆ. ಸಕಾಲಿಕವಾಗಿ ಚುನಾವಣೆ ನಡೆಯುತ್ತಿಲ್ಲ
 ನಗರ ಸ್ಥಳೀಯ ಸಂಸ್ಥೆಗಳ ಮೇಯರ್‌ ಆಯ್ಕೆಯಲ್ಲಿ ಸರಾಸರಿ 11 ತಿಂಗಳು ವಿಳಂಬವಾಗುತ್ತಿದೆ
 ಸಂವಿಧಾನದಲ್ಲಿ 18 ವಿಷಯಗಳಿಗೆ ಸಂಬಂಧಿಸಿದಂತೆ ನಗರ ಸರಕಾರಕ್ಕೆ ಪಾತ್ರ ಅಥವಾ ನಿಯಂತ್ರಣವಿರಬೇಕು ಎಂದು ಹೇಳಿದ್ದರೂ ರಾಜ್ಯದಲ್ಲಿ ಕೇವಲ 3 ವಿಷಯಗಳನ್ನು ಮಾತ್ರ ನಗರ ಸರಕಾರಕ್ಕೆ ಬಿಟ್ಟುಕೊಡಲಾಗಿದೆ
 ಸ್ಥಳೀಯ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಭೆಗಳ ಚರ್ಚೆ, ಕಲಾಪದ ಮಾಹಿತಿ ನಾಗರಿಕರಿಗೆ ಲಭ್ಯ ಇರುವುದಿಲ್ಲ

ಶಿಫಾರಸುಗಳು
ಸ್ಥಳೀಯ ಸರಕಾರಕ್ಕೆ ನಿಗದಿ ಪಡಿಸಿರುವ ಎಲ್ಲ ಅಧಿಕಾರವನ್ನು ಹಸ್ತಾಂತರಿಸಬೇಕು, ಸಿಬಂದಿ ಮತ್ತು ಸಂಪನ್ಮೂಲವನ್ನು ಸೂಕ್ತ ಪ್ರಮಾಣದಲ್ಲಿ ನೀಡಬೇಕು
ಪ್ರತೀ 5 ವರ್ಷಕ್ಕೊಮ್ಮೆ ಸಕಾಲಿಕವಾಗಿ ನಗರ ಸಂಸ್ಥೆಗೆ ಚುನಾವಣೆ ನಡೆಸಬೇಕು
ನಗರ ಸ್ಥಳೀಯ ಚುನಾವಣಾ ಫ‌ಲಿತಾಂಶ ಪ್ರಕಟಗೊಂಡ 15 ದಿನದಲ್ಲಿ ಮೇಯರ್‌ ಚುನಾವಣೆ ನಡೆಸಬೇಕು
ವಾರ್ಡ್‌ಗಳ ಮರು ವಿಂಗಡಣೆ, ಮೀಸಲಾತಿ ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಬೇಕು
ಏರಿಯಾ ಸಭಾಗಳನ್ನು ತತ್‌ಕ್ಷಣವೇ ಸ್ಥಾಪಿಸಿ, ಕಾರ್ಯಪ್ರವೃತ್ತಗೊಳಿಸಬೇಕು. ಚುನಾವಣೆ ಫ‌ಲಿತಾಂಶ ಪ್ರಕಟಗೊಂಡ ಒಂದು ತಿಂಗಳೊಳಗೆ ವಾರ್ಡ್‌ ಸಮಿತಿ ರಚಿಸಬೇಕು
ನಗರ ಸಂಸ್ಥೆ ಮತ್ತು ಸಿವಿಕ್‌ ಸೇವೆಗಳು ಸೇರಿದಂತೆ ಕೌನ್ಸಿಲ್‌ ಸಭೆ, ಸ್ಥಾಯೀ ಸಮಿತಿ ಸಭೆಗಳು, ಸಿಟಿ ಬಜೆಟ್‌, ಯೋಜನೆ ಗಳ ಡಿಪಿಆರ್‌ ಮುಂತಾದವನ್ನು ಸಾರ್ವಜನಿಕ ಗೊಳಿಸಬೇಕು. ವೆಬ್‌ಕಾಸ್ಟ್‌ ಮಾಡಬೇಕು
ಯೋಜನೆಗಳ ನೈಜ ಕಾಲದ ಮಾಹಿತಿ ಇರುವ ಡ್ಯಾಶ್‌ಬೋರ್ಡ್‌ ಸ್ಥಾಪಿಸಬೇಕು

ವೇಗವಾಗಿ ನಗರೀಕರಣ ಗೊಳ್ಳುತ್ತಿರುವ ನಗರಗಳು
ಬೆಂಗಳೂರು, ಧಾರವಾಡ, ಮಂಗಳೂರು ಮತ್ತು ಮೈಸೂರು.

ವೇಗವಾಗಿ ನಗರೀಕರಣ ಗೊಳ್ಳುತ್ತಿರುವ ಕರ್ನಾಟಕದಲ್ಲಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಸದೃಢ ನಗರ ಸ್ಥಳೀಯ ಸಂಸ್ಥೆಗಳು ಆವಶ್ಯಕ. ಆದರೆ ಇಲ್ಲಿ ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು, ಅಧಿಕಾರ ನೀಡಲು ಮತ್ತು ಅನುದಾನ ಒದಗಿಸಲು ಹಿಂದೇಟು ಹಾಕುತ್ತಿರುವುದು ಖೇದನೀಯ.
– ಶ್ರೀಕಾಂತ್‌ ವಿಶ್ವನಾಥನ್‌,ಸಿಇಒ, ಜನಾಗ್ರಹ

Advertisement

Udayavani is now on Telegram. Click here to join our channel and stay updated with the latest news.

Next