Advertisement

ಕರ್ನಾಟಕ ಸಂಘ ಮುಂಬಯಿ ನೂತನ ಸಾಂಸ್ಕೃತಿಕ ಸಮುಚ್ಚಯಕ್ಕೆ ಶಿಲಾನ್ಯಾಸ

02:02 AM Mar 04, 2019 | Team Udayavani |

ಮುಂಬಯಿ: ಕನ್ನಡವನ್ನು ಉಳಿಸಿ ಬೆಳೆಸುವುದೇ ಕರ್ನಾಟಕ ಸರಕಾರದ ಆಸೆಯಾಗಿದೆ. ಕನ್ನಡ  ಬರೀ ಭಾಷೆಯಲ್ಲ ಆದು ಇತಿಹಾಸವಾಗಿದೆ. ಕಾರಣ ಕನ್ನಡ ಭಾಷೆ ಅಂದರೆ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಹೊಂದಿದೆ. ಆದುದರಿಂದಲೇ ಕನ್ನಡ ಜಾಗತಿಕವಾಗಿ ಚಿರಪರಿಚಿತ ಆಗಿ ಬಹುಕಾಲಕ್ಕೆ ಬಾಳಿಕೆಯಲ್ಲಿದೆ. ಇಂತಹ ಕನ್ನಡವು ಸಾಹಿತ್ಯ ಲೋಕದ ಪರಿಚಯಕ್ಕೆ ಇಂತಹ ಸಂಸ್ಥೆಗಳ ಸೇವೆ ಅಗತ್ಯವಾಗಿದೆ. ಕನ್ನಡಿಗರ ದೂರದೃಷ್ಟಿತ್ವ ಈ ಸಂಘದ ಸ್ಥಾಪನೆಗೆ ಕಾರಣವಾಗಿದ್ದು, ಕನ್ನಡದ ಸ್ವಾಭಿಮಾನದ ಭವನಗಳಲ್ಲಿ ಕನ್ನಡದ ಆಚಾರ ವಿಚಾರಗಳ ಸ್ಪಂದನೆ  ಕನ್ನಡ ಸರಕಾರದ ಕರ್ತವ್ಯವಾಗಿದೆ. ಅರ್ಥ ಮಾಡಿಕೊಳ್ಳುವವರು ಮಾತ್ರ ಇತಿಹಾಸ ಉಳಿಸುವಂತಿದ್ದರೆ ಪರಭಾಷೆಗಳನ್ನು ಪ್ರೀತಿಸಿದಾಗಲೇ ನಮ್ಮ ಭಾಷೆಯೂ  ವಿಸ್ತಾರವಾಗಿ ಬೆಳೆಯುವುದು. ಆ ಮೂಲಕ ಬಹು ಭಾಷೆಗಳಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಭಾಷೆಗಳು ಒಗ್ಗೂಡುವುದರಿಂದ ಸಾಮರಸ್ಯದ ಕೊಂಡಿಯಾಗಿ ಎಲ್ಲರ ಸಂಸ್ಕೃತಿಗಳು ಬೆಳೆಯಲು ಸಾಧ್ಯ. ಆದ್ದರಿಂದ  ಭಾಷಾ ಬೆಳವಣಿಗೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಸರಕಾರದ ನಗರಾಭಿವೃದ್ಧಿ ವಸತಿ ಸಚಿವ ಯು. ಟಿ. ಖಾದರ್‌   ತಿಳಿಸಿದರು.

Advertisement

ಮಾ. 3ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕ ಸಂಘವು ಮಾಟುಂಗಾ  ಪಶ್ಚಿಮದಲ್ಲಿನ ಸಂಘದ ಆವರಣದಲ್ಲಿ ನಿರ್ಮಿಸುವ ನೂತನ ಸಾಂಸ್ಕೃತಿಕ ಸಮುಚ್ಚಯಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಾನು ಮುಂಬಯಿಗೆ ಬರಲು 2 ಕಾರಣಗಳಿದ್ದು ಮೊದಲಾಗಿ ಕರ್ನಾಟಕ ಸಂಘ ಮುಂಬಯಿ ತುಂಬಾ ಹಳೆಯದಾದ ಸಂಘ. ಇದು ಎಲ್ಲಾ ಸಂಘಗಳಿಗೆ ಒಂದು ಕೊಡೆ ಇದ್ದಂತೆ.
ಯುವ ಪೀಳಿಗೆಗೆ ಕನ್ನಡ ಕಲಿಕೆ, ಸಂಸ್ಕೃತಿ, ಕಲೆ ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದೆ. ಆದ್ದರಿಂದಲೇ  ಹೊರನಾಡ ಕನ್ನಡಿಗರ ಸಂಸ್ಥೆಗಳಲ್ಲಿ ಕರ್ನಾಟಕ ಸಂಘ ಮುಂಬಯಿ ಪ್ರಥಮ ಸ್ಥಾನದಲ್ಲಿದೆ. ಓರ್ವ ಕನ್ನಡಿಗನಾಗಿ ಕರ್ನಾಟಕ ಸರಕಾರದ ಪ್ರತಿನಿಧಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಭಾಗ್ಯವೇ ಸರಿ. ಸಂಘದ ಸ್ಥಾಪಕರನ್ನು, ಅಂದಿನಿಂದ ಇಂದಿನವರೆಗೆ ದುಡಿದ ವರನ್ನು ಸ್ಮರಿಸುತ್ತಾ ಈ ಮಹತ್ತರವಾದ ಯೋಜನೆಯನ್ನು ಕೈಗೊಂಡ ಪ್ರಸಕ್ತ ಅಧ್ಯಕ್ಷರ‌ು ಮತ್ತು ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ನಮ್ಮ ಸರಕಾರ ದಿಂದ ಸಹಾಯ ನೀಡುವುದು ನನ್ನ ಆದ್ಯ ಕರ್ತವ್ಯ. ಅನುದಾನಕ್ಕೆ ಸಚಿವನಿಗಿಂತ ಸೋದರನಾಗಿ ಶ್ರಮಿ ಸುವೆ. ಕನಸಿನ ಭವನದ ಯೋಜನೆ ಬಹಳ ಉತ್ತಮವಾಗಿ ಪೂರ್ಣಗೊಳ್ಳಲಿ ಎಂದು ಹಾರೈಸಿದರು.

ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ ಎಂ. ಕೋರಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂ ಭದಲ್ಲಿ ಅತಿಥಿಗಳಾಗಿ ಕೆ. ಆರ್‌. ಪೇಟೆ ಶಾಸಕ ಡಾ| ನಾರಾಯಣ ಆರ್‌.ಗೌಡ, ಸೂರತ್‌ನ ಆದಾಯ ಕರ ಆಯುಕ್ತ ಶ್ರೀನಿವಾಸ ಟಿ.ಬಿದರಿ, ನಿವೃತ್ತ ಐಎಎಸ್‌ ಅಧಿಕಾರಿ ಐ. ಎಂ. ವಿಠuಲಮೂರ್ತಿ, ಬಂಟರ ಸಂಘ ಮುಂಬಯಿ ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಸಮಾಜ ಸೇವಕ ಸುರೇಶ್‌ ಶೆಟ್ಟಿ ಗುರ್ಮೆ, ಶ್ರೀ ಮದ್ಭಾರತ ಮಂಡಳಿ ಮುಂಬಯಿ ಅಧ್ಯಕ್ಷ ಜಗನ್ನಾಥ ಪುತ್ರನ್‌, ಮೊಗವೀರ ವ್ಯವಸ್ಥಾಪಕ ಮಂಡಳಿ ಅಧ್ಯಕ್ಷ ಕೆ. ಎಲ್‌. ಬಂಗೇರ, ಬಿಲ್ಲವರ  ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ, ಬಿಎಸ್‌ಕೆಬಿ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಡಾ| ಸುರೇಶ್‌ ಎಸ್‌. ರಾವ್‌ ಕಟೀಲು, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌, ದೇವಾಡಿಗ ಸಂಘ ಮುಂಬಯಿ ಅಧ್ಯಕ್ಷ ರವಿ ಎಸ್‌. ದೇವಾಡಿಗ, ಮೈಸೂರು ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷೆ ಕಮಲಾ ಕಾಂತರಾಜ್‌, ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಮೇಶ್‌ ಬಂಗೇರ, ದೆಹಲಿ ಕರ್ನಾಟಕ ಸಂಘದ ಕಾರ್ಯದರ್ಶಿ ಸಿ. ಎಂ. ನಾಗರಾಜ, ಸಾಹಿತಿ-ಅಂಕಣಕಾರ ಜಯತೀರ್ಥ ರಾವ್‌, ಉದ್ಯಮಿ ಮನೋಹರ ನಾಯಕ್‌, ಮಹಾನ ಗರದ ಹೆಸರಾಂತ ಕಲಾವಿದ, ಸಂಘಟಕ ಕೆ. ಮಂಜುನಾಥಯ್ಯ  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಸಾಂದರ್ಭಿಕವಾಗಿ ಮಾತನಾಡಿ ಸಂಘದ ಯೋಜನೆ ಶೀಘ್ರವೇ ಪೂರ್ಣಗೊಳ್ಳಲಿ ಎಂದು ಹಾರೈಸಿದರು.
ಶ್ರೀ ಉಮಾಮಹೇಶ್ವರಿ ದೇವಾ ಲಯ ಜೆರಿಮೆರಿ ಇದರ ಪ್ರಧಾನ  ಅರ್ಚಕ ವಿದ್ವಾನ್‌ ಎಸ್‌. ಎನ್‌. ಉಡುಪ ಅವರ ಪೌರೋಹಿತ್ಯದಲ್ಲಿ ಭೂಮಿಪೂಜೆಯೊಂದಿಗೆ  ಶಿಲಾನ್ಯಾಸ ನೆರವೇರಿತು. ಮನೋಹರ ಎಂ. ಕೋರಿ ಮತ್ತು ಅರಣಾದತಿ ಮನೋಹರ್‌ ಪೂಜಾದಿಗಳ ಯಜಮಾನತ್ವ ವಹಿಸಿದ್ದರು. ಕರ್ನಾಟಕ ಸಂಘದ ಮತ್ತು ಮಹಾನಗರದ ಹಲವಾರು ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ನೂರಾರು ಕನ್ನಡಾ ಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎನ್‌ಕೆಇಎಸ್‌ ಶಾಲಾ ಮಕ್ಕಳು ನಾಡಗೀತೆ ಮತ್ತು ಮಹಾರಾಷ್ಟ್ರ ನಾಡಗೀತೆಯನ್ನು ಹಾಡಿದರು. ಡಾ| ಶ್ಯಾಮಲಾ ಪ್ರಕಾಶ್‌ ಪ್ರಾರ್ಥನೆಗೈದರು.
ಕರ್ನಾಟಕ ಸಂಘ ಮುಂಬಯಿ ಗೌರವ ಕಾರ್ಯದರ್ಶಿ ಡಾ| ಭರತ್‌ಕುಮಾರ್‌ ಪೊಲಿಪು ಸ್ವಾಗತಿಸಿದರು. ಕಟ್ಟಡ ನಿರ್ಮಾಣ ಸಮಿತಿಯ ಸಂಚಾಲಕ ಓಂದಾಸ್‌ ಕಣ್ಣಂಗಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.  ಉಪಾಧ್ಯಕ್ಷ ಡಾ| ಈಶ್ವರ ಅಲೆವೂರು, ಗೌರವ ಕೋಶಾಧಿಕಾರಿ ಎಂ. ಡಿ. ರಾವ್‌, ಡಾ| ಎಸ್‌. ಕೆ. ಭವಾನಿ, ಮೋಹನ್‌ ಮಾರ್ನಾಡ್‌ ಅತಿಥಿಗಳನ್ನು ಗೌರವಿಸಿದರು. ರಾಜೀವ್‌ ನಾಯ್ಕ, ಅವಿನಾಶ್‌ ಕಾಮತ್‌, ಸುರೇಂದ್ರಕುಮಾರ್‌ ಶೆಟ್ಟಿ ಮಾರ್ನಾಡ್‌ ಕಾರ್ಯಕ್ರಮ ನಿರೂಪಿಸಿದರು.  ಮಾಲತಿ ಚಂದ್ರಕಾಂತ್‌ ಅತಿಥಿಗಳನ್ನು ಪರಿಚಯಿಸಿ ವಂದಿಸಿದರು. 

ಅಕ್ಟೋಬರ್‌ನಲ್ಲಿ ಕರ್ನಾಟಕ ರಾಜ್ಯ ಸರಕಾರವು ಕನ್ನಡ ಸಂಸ್ಕೃತಿ ಇಲಾಖೆಯೊಂದಿಗೆ ಮುಂಬಯಿಯಲ್ಲಿ ಅಬ್ಬಕ್ಕ ಉತ್ಸವವನ್ನು  ನಡೆಸಲು ಉದ್ದೇಶಿಸಿದ್ದು ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಮಹಾನಗರದಲ್ಲಿನ ಸಮಗ್ರ ಕನ್ನಡಿಗರು ಜೊತೆಗೂಡಿ ಮತ್ತೆ ಕರ್ಮಭೂಮಿಯಲ್ಲಿ ಕನ್ನಡಿಗರ ಶಕ್ತಿಯನ್ನು ಪ್ರದರ್ಶಿಸುವಂತಾಗಬೇಕು ಎಂದು ಸಚಿವ ಯು. ಟಿ.  ಖಾದರ್‌ ವಿನಂತಿಸಿದರು.

ಮಾನವನ ದೃಷ್ಟಿ ಬದಲಾಗದೆ ದೃಶ್ಯ ಬದಲಾಗುವುದು. ಮನುಕುಲ ಅಂದರೆ ಬದುಕುವುದು ಬೇರೆ ಬಾಳುವುದು ಬೇರೆ. ಮನುಜರಾದ ನಾವು ಬದುಕಿ ಬಾಳಬೇಕು. ಎಂಬತ್ತೈದು ವರ್ಷಗಳ ಹಿಂದೆ ಕನ್ನಡಿಗ ಪುಣ್ಯಾತ್ಮರು ಸಂಸ್ಥೆ ಎಂಬ ಮರವನ್ನು ನೆಟ್ಟಿದ್ದರು. ನಂತರ ಹಲವಾರು ಜನರು ಅದರ ಪೋಷಣೆಯನ್ನು ಮಾಡುತ್ತಾ ಈ ಸಂಘವನ್ನು ಈ ಮಟ್ಟಕ್ಕೆ ಬೆಳೆಸಿದ್ದು, ಎಲ್ಲಾ ಕನ್ನಡಾಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.                         
   – ಗುರ್ಮೆ ಸುರೇಶ್‌ ಶೆಟ್ಟಿ, ಉದ್ಯಮಿ

Advertisement

ಸಚಿವ ಖಾದರ್‌ ಓರ್ವ  ಹಸನ್ಮುಖೀ ಉತ್ಸಾಹಿ ರಾಜಕಾರಣಿ. ಅವರ ಹಸ್ತ ಸೇರಿದ ಕಾರ್ಯಗಳು ಪರಿಪೂರ್ಣವೇ ಸರಿ. ಮುಂಬಯಿ ಕನ್ನಡಿಗರು ತುಂಬಾ ಶ್ರಮಿಕರು ಮತ್ತು ಅಷ್ಟೇ ಸಹಿಷ್ಣುಗಳು. ಅಂತೆಯೇ ನೈತಿಕಶಕ್ತಿ ಸಂಘಟನಾ ಶಕ್ತಿವುಳ್ಳವರು. ಕನ್ನಡ ಉಳಿಸಿದರೆ ಅದರ ಕೀರ್ತಿ ನಿಮಗೆ ಸಲ್ಲುತ್ತದೆ. ಆದ್ದರಿಂದ ಈ ಅದ್ಭುತವಾದ ಯೋಜನೆ ಶೀಘ್ರವಾಗಿ ಪೂರ್ಣಗೊಳ್ಳಲಿ. ಮಾತೆ ಭವನೇಶ್ವರಿ ನಿಮಗೆ ಆಶೀರ್ವದಿಸಲಿ                                              
 ಐ. ಎಂ. ವಿಠuಲಮೂರ್ತಿ, ನಿವೃತ್ತ  ಐಎಎಸ್‌ ಅಧಿಕಾರಿ

ಇದೊಂದು ಬಹುದೊಡ್ಡ ಕನಸಿನ ಯೋಜನೆ. ಕನ್ನಡಿಗರೆಲ್ಲರೂ ಕೈಜೋಡಿಸಬೇಕು. ಒಂದು ಸಾಂಸ್ಕೃತಿಕ ಮನಸ್ಸನ್ನು ನಿರ್ಮಿಸಿದರೆ ಒಳ್ಳೆಯ ಸಮಾಜವನ್ನು  ನಿರ್ಮಿಸಿದ ಹಾಗೆ. ಸಾಂಸ್ಕೃತಿಕ ಸಮಾಜವನ್ನು ಕಟ್ಟುವುದು ಒಳ್ಳೆಯ ಸಮಾಜ ಕಟ್ಟಿದಂತೆ. 
ಆದ್ದರಿಂದ ನಾವೆಲ್ಲರು ಒಂದಾಗಿ ಸಾಂಸ್ಕೃತಿಕ ಭವನ ನಿರ್ಮಾಣದಲ್ಲಿ ಸಹಕರಿಸೋಣ        
   – ಮನೋಹರ ಎಂ. ಕೋರಿ, ಅಧ್ಯಕ್ಷರು, ಕರ್ನಾಟಕ ಸಂಘ ಮುಂಬಯಿ

ಸಚಿವ ಖಾದರ್‌ ಅವರೊಂದಿಗೆ ಸಂಪರ್ಕ, ಸಂಬಂಧ ಇದ್ದರೆ ಎಲ್ಲಾ ಯೋಜನೆಗಳು ಪರಿಪೂರ್ಣಗೊಂ ಡಂತೆ.  ನಾನೂ ಬಾಲ್ಯದಲ್ಲೇ ಉದರ ಪೋಷಣೆಗಾಗಿ ಮುಂಬಯಿ ಸೇರಿದ ಕನ್ನಡಿಗ. ಇಲ್ಲಿನ ಸಹೃದಯಿ ವಾತಾವರಣವೇ ನನ್ನನ್ನು ಉನ್ನತ ಸ್ಥಾನಕ್ಕೆ ಕೊಂಡಿರುವುದೇ ಇದಕ್ಕೆ ಸಾಕ್ಷಿ. ಹೊರನಾಡ ಕನ್ನಡಿಗರಲ್ಲಿನ  ಪ್ರೀತಿ ಒಳನಾಡಿನಲ್ಲಿ ಸಿಗುತ್ತಿಲ್ಲ. ಎಲ್ಲಾ ಸಮುದಾಯಕ್ಕೆ ಸೇರಿದ ಈ ಕರ್ನಾಟಕ ಸಂಘದ ಸೇವೆ ಶ್ರೇಷ್ಠವಾದುದು. ಕರ್ಮಭೂಮಿಯಲ್ಲಿ ಜನ್ಮಭೂಮಿಯ ಋಣ ಪೂರೈಸಲು ಈ ಭವನ ಪೂರಕವಾಗಲಿ. ಆ ಮೂಲಕ ಕನ್ನಡಿಗರೆಲ್ಲರ ಹೃದಯದಲ್ಲಿ ಕನ್ನಡ ರಾರಾಜಿಸಲಿ                         – ನಾರಾಯಣ ಗೌಡ,   ಶಾಸಕರು, ಕೆಆರ್‌ ಪೇಟೆ ಕರ್ನಾಟಕ

ಚಿತ್ರ- ವರದಿ : ರೋನ್ಸ್‌ ಬಂಟ್ವಾಳ್‌ 

Advertisement

Udayavani is now on Telegram. Click here to join our channel and stay updated with the latest news.

Next