Advertisement

Karnataka Polls 2023: ಕಣ ಸಿದ್ಧ ; ಬಂಡಾಯವೇ ಸವಾಲು: 38ಕ್ಕೂ ಅಧಿಕ ಕಡೆ ಪ್ರತಿರೋಧದ ಬಿಸಿ

01:07 AM Apr 25, 2023 | Team Udayavani |

ಬೆಂಗಳೂರು: ನಾಮಪತ್ರ ವಾಪಸ್‌ ಪಡೆಯುವುದಕ್ಕೆ ಸೋಮವಾರ ಕೊನೆಯ ದಿನವಾದರೂ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದವರು ಸ್ಪರ್ಧೆಯಿಂದ ಹಿಂದೆ ಸರಿಯದೆ ಇರುವುದರಿಂದ ರಾಜ್ಯದ 38ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಈಗ ಮೂರು ಪಕ್ಷಗಳಿಗೂ ಬಂಡಾಯದ ಬಿಸಿ ಎದುರಾಗಿದೆ.

Advertisement

ಚುನಾವಣೆಗೆ 5,067 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದರು. ಈ ಪೈಕಿ 4,027 ನಾಮ ಪತ್ರ ಅಂಗೀಕಾರವಾಗಿದ್ದು, 531 ತಿರಸ್ಕೃತ ಗೊಂಡಿವೆ. ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನವಾದ ಸೋಮವಾರ 517 ಮಂದಿ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಅಂತಿಮ ವಾಗಿ 2,613 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಗಳಿಂದ ನಿರೀಕ್ಷಿತ ಟಿಕೆಟ್‌ ಲಭಿಸದೆ ಅಧಿಕೃತ ಅಭ್ಯರ್ಥಿಗಳ ಎದುರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದ ಹಲವರು ನಾಮಪತ್ರ ಹಿಂದೆಗೆಯದ್ದರಿಂದ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ.

ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 16, ಕಾಂಗ್ರೆಸ್‌ಗೆ 18 ಹಾಗೂ ಜೆಡಿಎಸ್‌ಗೆ 4 ಕಡೆ ಅಧಿಕೃತವಾಗಿ ಬಂಡಾಯ ಎದುರಾಗಿದೆ. ಇದು ಮತ ವಿಭಜನೆಗೆ ಕಾರಣ ವಾಗಲಿದೆ ಎನ್ನುವುದು ಪಕ್ಷಗಳ ಆತಂಕ.
ಆಡಳಿತಾರೂಢ ಬಿಜೆಪಿಗೆ ತುಮಕೂರು, ಪುತ್ತೂರು, ಚನ್ನಗಿರಿ, ಬೈಲಹೊಂಗಲ, ಹೊಸ ದುರ್ಗ, ಬಾಗಲಕೋಟೆ ಸೇರಿ 16 ಕಡೆ ಬಂಡಾಯದ ಬಿಸಿ ತಟ್ಟಿದೆ.

ಹಿಂದುತ್ವದ ಭದ್ರನೆಲೆಯಾದ ಪುತ್ತೂರಿನಲ್ಲಿ ಸಂಘ ಪರಿವಾರದ ಹಿನ್ನೆಲೆಯ ಅರುಣ್‌ ಕುಮಾರ್‌ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಪಕ್ಷದ ಹಿರಿಯರು ಈ ಬಗ್ಗೆ ಮಾತುಕತೆ ನಡೆಸಿದರೂ ಪುತ್ತಿಲ ಕಣದಿಂದ ಹಿಂದೆ ಸರಿದಿಲ್ಲ. ತುಮಕೂರಿನಲ್ಲಿ ಸೊಗಡು ಶಿವಣ್ಣ ಮನವೊಲಿಸಲು ಕೆಲವು ಆರೆಸ್ಸೆಸ್‌ ಮುಖಂಡರು ಯತ್ನಿಸಿದರೂ ಫ‌ಲಿಸಿಲ್ಲ. ಚನ್ನಗಿರಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನ ಕೂಡ ನಾಮಪತ್ರ ವಾಪಸ್‌ ತೆಗೆದುಕೊಳ್ಳಲು ಒಪ್ಪಿಲ್ಲ. ಕುಂದಗೋಳದಲ್ಲಿ ಮಾಜಿ ಶಾಸಕ ಚಿಕ್ಕನಗೌಡ ಕೂಡ ಕಣದಲ್ಲಿ ಉಳಿದುಕೊಂಡಿದ್ದಾರೆ.

ಕಾಂಗ್ರೆಸ್‌ಗೆ ಒಟ್ಟು 18 ಕಡೆ ಬಂಡಾಯ ಎದುರಾಗಿದೆ. ಶಿಕಾರಿಪುರದಲ್ಲಿ ನಾಗರಾಜ ಗೌಡ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸಲ್ಲಿಸಿದ ನಾಮಪತ್ರ ವಾಪಸ್‌ ಪಡೆದಿಲ್ಲ. ತೇರದಾಳದಲ್ಲಿ ಡಾ| ಪದ್ಮರಾಜ ನಾಡಗೌಡ ಪಾಟೀಲ, ಜಮಖಂಡಿ ಯಲ್ಲಿ ಸುಶೀಲಕುಮಾರ್‌ ಬೆಳಗಲಿ, ಹರಪನ ಹಳ್ಳಿಯಲ್ಲಿ ಎಂ.ಪಿ. ಲತಾ, ಶಿರಹಟ್ಟಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಚಿತ್ರದುರ್ಗದಲ್ಲಿ ಸೌಭಾಗ್ಯ ಬಸವರಾಜನ್‌ ಸ್ಪರ್ಧೆಯಿಂದ ಹಿಂದೆ ಸರಿಯಲು ಒಪ್ಪಿಲ್ಲ.

Advertisement

ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತರಾದ ಅಖಂಡ ಶ್ರೀನಿವಾಸಮೂರ್ತಿ ಬಿಎಸ್‌ಪಿ ಸೇರ್ಪಡೆಯಾಗಿದ್ದು, ಪುಲಕೇಶಿನಗರದಿಂದ ಕಣಕ್ಕೆ ಇಳಿದಿದ್ದಾರೆ. ಅದೇ ರೀತಿ ರಾಣೆಬೆನ್ನೂರಿನಿಂದ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಮಾಜಿ ಸಚಿವ ಆರ್‌. ಶಂಕರ್‌ ಈಗ ಎನ್‌ಸಿಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಇವರಿಬ್ಬರೂ ಪ್ರಮುಖ ಪಕ್ಷಗಳ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

ಜೆಡಿಎಸ್‌ಗೆ ನಾಲ್ಕು ಕಡೆಗಳಲ್ಲಿ ಬಂಡಾಯ ಎದುರಾಗಿದೆ. ಯಾದಗಿರಿಯಲ್ಲಿ ಹನುಮೇಗೌಡ ಬೀರನಕಲ್‌, ತುಮ ಕೂರಿನಲ್ಲಿ ನರಸೇಗೌಡ, ಶ್ರೀರಂಗಪಟ್ಟಣದಲ್ಲಿ ಪಾಲಹಳ್ಳಿ ಚಂದ್ರಶೇಖರ್‌, ಮಂಡ್ಯದಲ್ಲಿ ಕೆ.ಎಸ್‌. ವಿಜಯ್‌ ಆನಂದ ಬಂಡಾಯದ ಬಾವುಟ ಹಾರಿಸಿದ್ದಾರೆ. ಮೂರು ಪಕ್ಷಗಳಲ್ಲೂ ಕೆಲವರನ್ನು ತೆರೆಮರೆಯಲ್ಲಿ ಶಾಂತಗೊಳಿಸುವ ಪ್ರಯತ್ನ ಮುಂದುವರಿದಿದೆ.

ಬಳ್ಳಾರಿಯಲ್ಲಿ ಹೆಚ್ಚು
ಕುತೂಹಲಕಾರಿ ಅಂಶವೆಂದರೆ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಅಂದರೆ 24 ಮಂದಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬೆಳಗಾವಿ ಜಿಲ್ಲೆಯ ಯಮಕನ ಮರಡಿ ಕ್ಷೇತ್ರ ಸೇರಿ ಏಳು ಕ್ಷೇತ್ರಗಳಲ್ಲಿ ತಲಾ 5ರಂತೆ ಅತೀ ಕಡಿಮೆ ಅಭ್ಯರ್ಥಿಗಳು ಇದ್ದಾರೆ. ಒಟ್ಟು 14 ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ 6 ಮಂದಿ ಇದ್ದಾರೆ. ಉಳಿದಂತೆ 4 ಕ್ಷೇತ್ರಗಳಲ್ಲಿ ತಲಾ 5 ಮಹಿಳಾ ಅಭ್ಯರ್ಥಿಗಳು, 7 ಕ್ಷೇತ್ರಗಳಲ್ಲಿ ತಲಾ 4 ಮಹಿಳಾ ಅಭ್ಯರ್ಥಿ ಗಳಿದ್ದಾರೆ. ಅತಿಹೆಚ್ಚು ಪಕ್ಷೇತರರು 15 ಅಭ್ಯರ್ಥಿಗಳು ಹೊಸ ಕೋಟೆ ಕ್ಷೇತ್ರದಲ್ಲಿ ಇದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಯಿಂದ ಪ್ರಮುಖ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಪಕ್ಷೇತರ ಮಹಿಳೆಯರೇ ಸವಾಲು ಹಾಕಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next