Advertisement

ಗ್ರಾಮಗಳು ಕೈಬಿಟ್ಟು ಹೋಗುವ ಮುನ್ನ ಕಣ್ತೆರೆಯಿರಿ

10:03 PM Nov 21, 2022 | Team Udayavani |

ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ ಎಂದು ಮಹಾರಾಷ್ಟ್ರ ಇನ್ನೂ ಭಾವಿಸಿದಂತಿಲ್ಲ.  ಗಡಿ ವಿವಾದದ ಮೂಲಕವೇ ಅಲ್ಲಿ ಜನಪ್ರಿಯಗೊಂಡ ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾದ ಮೇಲೆ ಈ ವಿಚಾರವನ್ನು ಮತ್ತಷ್ಟು ಹಸುರಾಗಿರುವಂತೆ ನೋಡಿಕೊಳ್ಳುತ್ತಿರುವುದು ಸ್ಫುಟ. ಈ ಸಂಬಂಧ ಮುಖ್ಯಮಂತ್ರಿ ನೇತೃತ್ವದಲ್ಲಿ ರಚನೆಯಾದ ಸಮಿತಿ ಸೋಮವಾರ ಸಭೆ ನಡೆಸಿದೆ.  ಬೆಳಗಾವಿ ಜಿಲ್ಲೆಯಲ್ಲಿರುವ ಮರಾಠಿ ಭಾಷಿಕರೇ ಹೆಚ್ಚಾಗಿರುವ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವ ಸಂಬಂಧ ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಈ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಏಕ್‌ನಾಥ್‌ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌, ವಿಪಕ್ಷದ ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.

Advertisement

ಸುಪ್ರೀಂ ಕೋರ್ಟ್‌ನಲ್ಲಿ ಒಂದು ಪ್ರಕರಣ ನಡೆಯುತ್ತಿರುವಾಗಲೇ ಪ್ರಧಾನಿಗಳ ಮಧ್ಯಸ್ಥಿಕೆಗೆ ಮಹಾರಾಷ್ಟ್ರ ಹೊರಟಿರುವುದು ಆತಂಕದ ಬೆಳವಣಿಗೆಯೇ. ಈ ನಡುವೆ ಬೆಳಗಾವಿಯ ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಸರಕಾರ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ. ಇದಕ್ಕೆ ಮುನ್ನವೇ ಈ ಬೆಳವಣಿಗೆಗಳು ನಡೆದಿರುವುದು ಆತಂಕವನ್ನು ಹೆಚ್ಚಿಸಿದೆ.

ವಿಚಿತ್ರವೆಂದರೆ ಇಷ್ಟೆಲ್ಲ ಘಟನೆಗಳು ಆಗುತ್ತಿದ್ದರೂ ಕರ್ನಾಟಕದಲ್ಲಿ ಮಾತ್ರ ಏನೂ ಆಗಿಯೇ ಇಲ್ಲ ಎನ್ನುವ ರೀತಿಯಲ್ಲಿ ವಾತಾವರಣ ಗೋಚರಿಸುತ್ತಿದೆ. ಮಹಾರಾಷ್ಟ್ರದ ಸುದ್ದಿ ಹೊರಬಿದ್ದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ ಮಾಡಿ, ರಾಜ್ಯ ಸರಕಾರಕ್ಕೆ ಎಚ್ಚೆತ್ತುಕೊಳ್ಳುವಂತೆ ಆಗ್ರಹಿಸಿದ್ದಾರೆ. ನೆಲಜಲ ವಿಚಾರದಲ್ಲಿ ಈ ಹಿಂದೆ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿರುವುದು ಸಹಜವಾದರೂ ಆಡಳಿತ ಪಕ್ಷ ಬಿಜೆಪಿ ತನ್ನ ಸ್ಪಷ್ಟ ನಿಲುವನ್ನು ಹೇಳಲೇ ಬೇಕು.  ಈಗ ಮಹಾರಾಷ್ಟ್ರದಲ್ಲೂ ಬಿಜೆಪಿಯೇ ಆಡಳಿತದಲ್ಲಿದೆ. ಹೀಗಿ ರುವುದರಿಂದ ಎರಡು ರಾಜ್ಯಗಳ ಪ್ರಮುಖರು ಕುಳಿತು ಈ ವಿವಾ ದವನ್ನು ಬಗೆಹರಿಸುವ ಬದಲು ಪ್ರಧಾನಿ ಮಧ್ಯಸ್ಥಿಕೆಗೆ ಮುಂದಾ ಗಿರುವುದು ಮಹಾರಾಷ್ಟ್ರದ ಅತಿರೇಕದ ವರ್ತನೆ ಎಂದರೂ ತಪ್ಪಲ್ಲ.

ಇದರ ನಡುವೆಯೇ ರಾಜ್ಯ ಸರಕಾರದ ಕಡೆಯಿಂದ ಆಗಬೇಕಾಗಿರುವ ಕೆಲಸಗಳು ಸಾಕಷ್ಟಿವೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿ ಗಡಿ ವಿವಾದ ಸಂಬಂಧ ಕರ್ನಾಟಕದಲ್ಲಿ ಯಾವುದೇ ಸಭೆಗಳೇ ನಡೆದಿಲ್ಲ. ಕರ್ನಾಟಕ ಗಡಿ ರಕ್ಷಣ ಆಯೋಗದ ಅಧ್ಯಕ್ಷರಾಗಿದ್ದ ನ್ಯಾ| ಕೆ.ಎಲ್‌.ಮಂಜುನಾಥ್‌ ಅವರು ಆರು ತಿಂಗಳುಗಳ ಹಿಂದೆಯೇ ನಿಧನ ಹೊಂದಿದ್ದು, ಇವರ ಜಾಗಕ್ಕೆ ಬೇರೊಬ್ಬರನ್ನು ನೇಮಕ ಮಾಡಿಯೂ ಇಲ್ಲ. ಅಲ್ಲದೆ ಯಾವೊಬ್ಬ ಸಚಿವರಾಗಲಿ ಅಥವಾ ಉನ್ನತಾಧಿಕಾರದ ಸಮಿತಿಯಾಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡೂ ಇಲ್ಲ. ಹೀಗಾಗಿ ಗಡಿ ಹೋರಾಟದ ವಿಚಾರದಲ್ಲಿ ಕರ್ನಾಟಕ ಹಿಂದೆ ಬಿದ್ದಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಹಾಗೆಯೇ ಗಡಿ ವಿವಾದದ ಮಹಾರಾಷ್ಟ್ರದ ಅರ್ಜಿ ಸ್ವೀಕಾರ ವಾಗುವುದಿಲ್ಲ ಎಂಬುದು ಕರ್ನಾಟಕದ ವಿಶ್ವಾಸ. ಆದರೂ ಸುಪ್ರೀಂ ಮನಸ್ಸು ಮಾಡಿದರೆ ಅರ್ಜಿ ಸ್ವೀಕಾರ ಮಾಡಬಹುದು. ನಮ್ಮ ಪ್ರದೇಶಗಳು ನಮ್ಮಿಂದ ಕೈತಪ್ಪಿ ಹೋಗುವ ಮುನ್ನ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು. ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next