ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸರ್ಕಾರ ಉಳಿಸಿಕೊಳ್ಳಲು ದೂರವಾಣಿ ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ಕಾಂಗ್ರೆಸ್ ಮೈತ್ರಿಕೂಟದ ಶಾಸಕರ ಮೇಲೆ ಅವರಿಗೆ ಅನುಮಾನ ಇದೆ. ಹೀಗಾಗಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ಎಂ.ಬಿ. ಪಾಟೀಲ, ವಿರೋಧ ಪಕ್ಷದ ನಾಯಕ ಬಿ. ಎಸ್.ಯಡಿಯೂರಪ್ಪ ಅವರ ಚಟುವಟಿಕೆಗಳ ಮೇಲೂ ನಿಗಾ ಇಟ್ಟಿದ್ದಾರೆ ಎಂದು ಬಾಂಬ್ ಸಿಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಎಲ್ಲ ಶಾಸಕರನ್ನು ಗೂಟದಲ್ಲಿ ಕಟ್ಟಿ ಹಾಕಿದ್ದಾರೆ. ಟಗರು ಯಾವಾಗ ಗೂಟವನ್ನು ಕಿತ್ತು ತಪ್ಪಿಸಿಕೊಂಡು ಬರುತ್ತದೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ನಡುವೆ ಸಮನ್ವಯ ಇಲ್ಲ. ಒಬ್ಬರ ಮುಖ ಇನ್ನೊಬ್ಬರು ನೋಡದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಈ ಸರ್ಕಾರಕ್ಕೆ ಹೆಚ್ಚು ದಿನ ಭವಿಷ್ಯವಿಲ್ಲ. ಶೀಘ್ರ ಪತನವಾಗಲಿದೆ ಎಂದು ಹೇಳಿದರು. ಇದೊಂದು ದಿನಗೂಲಿ ಸರ್ಕಾರ. ನಿತ್ಯದ ಯೋಜನೆಗಳನ್ನು ರೂಪಿಸುತ್ತಾ ಕಾಲ ಕಳೆಯುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪ$ಂದಿಸುತ್ತಿಲ್ಲ. ಕರಾವಳಿ ಹಾಗೂ ಮಲೆನಾಡಿನಲ್ಲಿ ಜಲಪ್ರಳಯ ಉಂಟಾಗಿದೆ. ಆದರೆ, ಮುಖ್ಯಮಂತ್ರಿ ತೀರ್ಥಯಾತ್ರೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಶುಕ್ರವಾರ ಕಡೆಯ ದಿನ. ಆದರೆ, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಕಾರಣದಿಂದ ಚುನಾವಣೆ ನಡೆಸುವ ಸ್ಥಿತಿ ಇಲ್ಲ. ಹೀಗಾಗಿ, ಚುನಾವಣೆ ಮುಂದೂಡಬೇಕು ಎಂದು ಅವರು ಆಗ್ರಹಿಸಿದರು.