Advertisement
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ರಾಜ್ಯ ಸರಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಿದ್ದರಾಮಯ್ಯ ಹಾಗೂ ಶಾಸಕ ಗಣಿಗ ರವಿಗೆ ಮಂಪರು ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಸರಕಾರವನ್ನು ಉರುಳಿಸಲು ಬಿಜೆಪಿ ಸಂಚು ಮಾಡುತ್ತಿದೆ ಎಂದು ಸಿದ್ದರಾಮಯ್ಯನವರು ಮೊದಲು ಆರೋಪಿಸಿದರು. ಇದಾದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರು ಆರೋಪ ಮಾಡಿದರು. ಬಳಿಕ ಶಾಸಕ ಗಣಿಗ ರವಿ 100 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದರು.
ಅನಂತರ “ನನಗೆ ಯಾರೂ ನೇರವಾಗಿ ಈ ರೀತಿ ಹೇಳಿಲ್ಲ. ಚಿಕ್ಕಮಗಳೂರು ಶಾಸಕ ತಮ್ಮಯ್ಯನವರಿಗೆ ಆಮಿಷವೊಡ್ಡಿದ್ದರು’ ಎಂದು ಆಪಾದಿಸಿದ್ದರು. ಆದರೆ ತಮ್ಮಯ್ಯ ಇದನ್ನು ನಿರಾಕರಿಸುವ ಮೂಲಕ ಸತ್ಯವನ್ನು ಬಯಲಿಗೆ ಎಳೆದಿದ್ದಾರೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.