Advertisement

5 ಸಾವಿರ ಕೋ.ರೂ. ಪ್ಯಾಕೇಜ್‌:  ನಾಳೆಯ “ಜನೋತ್ಸವ’ದಲ್ಲೇ ಹೊಸ ಕಾರ್ಯಕ್ರಮಗಳ ಘೋಷಣೆಗೆ ಸಿದ್ಧತೆ

01:49 AM Jul 27, 2022 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಮೇಲೆ ದೃಷ್ಟಿ ನೆಟ್ಟಿರುವ ರಾಜ್ಯ ಬಿಜೆಪಿ ಸರಕಾರ ಸುಮಾರು 5 ಸಾವಿರ ಕೋಟಿ ರೂ. ಮೊತ್ತದ ಹೊಸ ಕಾರ್ಯಕ್ರಮಗಳ ಘೋಷಣೆಗೆ ಸಿದ್ಧತೆ ನಡೆಸಿದೆ.

Advertisement

ಜನಸಾಮಾನ್ಯರಿಗೆ ನಿಕಟ ವಾಗಿರುವ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಕೃಷಿ ಇಲಾಖೆಗಳಲ್ಲಿ ಯೋಜನೆಗಳು ಜಾರಿಯಾಗಲಿವೆ.

ಬಸವರಾಜ ಬೊಮ್ಮಾಯಿ ಸರಕಾರ ಒಂದು ವರ್ಷ ಪೂರೈಸುತ್ತಿರುವ ಸಂದರ್ಭ ದಲ್ಲಿ ಹೊಸ ಯೋಜನೆ ಘೋಷಣೆಯಾಗಲಿದ್ದು, ಮುಂದಿನ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯ ದರ್ಶಿಗಳು ಮತ್ತು ಮುಖ್ಯಸ್ಥರ ಜತೆ ಸಭೆ ನಡೆಸಿದ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ನೂತನ ಯೋಜನೆ ಗಳ ಬಗ್ಗೆ ಸುದೀರ್ಘ‌ ಸಮಾಲೋಚನೆ ನಡೆಸಿ ರೂಪುರೇಷೆ ಸಿದ್ಧಪಡಿಸಿದ್ದಾರೆ. ಹಣಕಾಸು ಇಲಾಖೆ ಅಧಿಕಾರಿಗಳಿಂದ ಯೋಜನೆ ಜಾರಿಗೆ ಅಡೆತಡೆ ಯಾಗದಂತೆ ನೋಡಿಕೊಳ್ಳುವ ಖಾತರಿ ಪಡೆದಿದ್ದಾರೆ. ರೈತ, ವಿದ್ಯಾರ್ಥಿ, ಮಹಿಳಾ ಸಮೂಹ, ಹಿಂದುಳಿದ ಹಾಗೂ ದಲಿತ ಸಮುದಾಯದ ಸಶಕ್ತೀಕರಣ ಕೇಂದ್ರಿತವಾಗಿ ಹೊಸ ಯೋಜನೆಗಳು ಘೋಷಣೆಯಾಗಲಿವೆ ಎಂದು ತಿಳಿದುಬಂದಿದೆ.

ಹೆಚ್ಚುವರಿ ಗುರಿ
ಹೊಸ ಕಾರ್ಯಕ್ರಮಗಳಿಗೆ ಹಣಕಾಸು ಹೊಂದಿ ಸಲು ಗುರಿ ನೀಡಲಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೊರೊನಾ ಹಾವಳಿ ಇಲ್ಲದ ಕಾರಣ ಗುರಿ ಮೀರಿ ಸಾಧನೆ ಮಾಡುವ ನಿರೀಕ್ಷೆ ಇದೆ. ಬಜೆಟ್‌ ಅನುದಾನದ ಜತೆಗೆ ಹೆಚ್ಚುವರಿಯಾಗಿ ಅನುದಾನ ಹೊಂದಿಸಲು ಪ್ರಮುಖವಾಗಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಹೆಚ್ಚುವರಿ ತೆರಿಗೆ ಸಂಗ್ರಹದ ಗುರಿ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಪ್ರಸ್ತುತ ಸಾಲಿನಲ್ಲಿ 15 ಸಾವಿರ ಕೋ.ರೂ. ಸಂಗ್ರಹದ ಗುರಿಯ ಪೈಕಿ ಮೊದಲ ಮೂರು ತಿಂಗಳಿ ನಲ್ಲಿ 5 ಸಾವಿರ ಕೋ.ರೂ. ಸಂಗ್ರಹವಾಗಿದ್ದು, ನಿರೀಕ್ಷೆಗಿಂತ 1 ಸಾವಿರ ಕೋ.ರೂ. ಹೆಚ್ಚುವರಿ ಆಗಿದೆ. ಹೀಗೆಯೇ ಮುಂದುವರಿಸಿ ಬಜೆಟ್‌ ಗುರಿಗಿಂತ 2 ಸಾವಿರ ಕೋ. ರೂ. ಹೆಚ್ಚುವರಿ ಸಂಗ್ರಹದ ನಿರೀಕ್ಷೆ ಮಾಡಲಾಗಿದೆ. ಆಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಶೇ. 10 ರಿಯಾಯಿತಿ ಮುಂದುವರಿಸಲಾಗಿದ್ದು, ಇದು ಕೂಡ ಪೂರಕವಾಗಲಿದೆ.

Advertisement

ಅಬಕಾರಿ ಇಲಾಖೆಯ 29 ಸಾವಿರ ಕೋ.ರೂ. ಗುರಿ ಪೈಕಿ ಮೊದಲ 3 ತಿಂಗಳುಗಳಲ್ಲಿ 7,574,22 ಕೋ.ರೂ. ಸಂಗ್ರಹವಾಗಿದ್ದು, ಹೆಚ್ಚುವರಿ 1 ಸಾವಿರ ಕೋಟಿ ರೂ.ವರೆಗೆ ಸಂಗ್ರಹಕ್ಕೆ ಗುರಿ ನೀಡಲಾಗಿದೆ. ಸಾರಿಗೆಯಿಂದಲೂ 1 ಸಾವಿರ ಕೋ.ರೂ.ವರೆಗೆ ಹೆಚ್ಚುವರಿ ಸಂಗ್ರಹದ ನಿರೀಕ್ಷೆ ಇದೆ.

ಜನೋತ್ಸವ;
ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ “ಜನೋತ್ಸವ’ ಕಾರ್ಯಕ್ರಮವನ್ನು ಆಚರಿಸಲು ಸರಕಾರ ಸಜ್ಜಾಗಿದೆ. ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲಕ್ಷಾಂತರ ಜನರನ್ನು ಸೇರಿಸಿ ಬಿಜೆಪಿ ಶಕ್ತಿ ಪ್ರದರ್ಶನ ನಡೆಸಲಿದೆ. ಈ ಮಧ್ಯೆ ಜನೋತ್ಸವ ಕೇವಲ ದೊಡ್ಡಬಳ್ಳಾಪುರಕ್ಕೆ ಸೀಮಿತವಲ್ಲ, ಎಲ್ಲ ಜಿಲ್ಲೆಗಳಲ್ಲೂ ಆಚರಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್‌ಕುಮಾರ್‌ ಹೇಳಿದ್ದಾರೆ.

“ಇದು ನಮ್ಮ ಸಂಕಲ್ಪ’
ಬಿಜೆಪಿ ಸರಕಾರಕ್ಕೆ 3 ವರ್ಷ ಮತ್ತು ಬೊಮ್ಮಾಯಿ ಸರಕಾರಕ್ಕೆ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ 3 ವರ್ಷಗಳ ಸಾಧನೆ ಮತ್ತು ಮುಂದಿನ ಒಂದು ವರ್ಷದ ದಿಕ್ಸೂಚಿ ಒಳಗೊಂಡ “ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ; ಇದು ನಮ್ಮ ಸಂಕಲ್ಪ’ ಘೋಷವಾಕ್ಯದಡಿ ವಿಶೇಷ ಕೈಪಿಡಿ ಸಿದ್ಧಪಡಿಸಲಾಗಿದೆ. ಇದೂ ಜನೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.

ಎಲ್ಲ ವರ್ಗಗಳಿಗೂ
ತಲುಪುವ ಯೋಜನೆ
ಸರಕಾರಕ್ಕೆ ಮತ್ತೂಂದು ಬಜೆಟ್‌ ಮಂಡಿಸುವ ಅವಕಾಶ ಇದ್ದರೂ ಅದರಲ್ಲಿ ಘೋಷಣೆ ಮಾಡುವ ಕಾರ್ಯಕ್ರಮ ಅನುಷ್ಠಾನ ಕಷ್ಟವಾಗಬಹುದು. ಹೀಗಾಗಿ ಈಗಲೇ ಘೋಷಣೆ ಮಾಡಿದರೆ ಜಾರಿಗೊಳಿಸಲು ಎಂಟು ತಿಂಗಳು ಅವಕಾಶ ಸಿಗಲಿದ್ದು, ರಾಜಕೀಯವಾಗಿ ಲಾಭವಾಗಲಿದೆ ಎಂಬ ದೂರದೃಷ್ಟಿಯಿಂದ ಎಲ್ಲ ವರ್ಗಗಳಿಗೂ ತಲುಪುವ ಯೋಜನೆ ರೂಪಿಸಲಾಗಿದೆ. ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಕ್ರಮ-ಸಕ್ರಮ, ಎ ಖಾತೆ ಸಮಸ್ಯೆ ನಿವಾರಣೆ ಸಹಿತ ಬೊಕ್ಕಸಕ್ಕೆ ಆದಾಯ ತರುವ ಯೋಜನೆ ಘೋಷಿಸಲಾಗುತ್ತದೆ ಎನ್ನಲಾಗಿದೆ. ಮೋದಿ ಪ್ರಧಾನಿಯಾಗಿ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 8 ಪ್ರಮುಖ ಕಾರ್ಯಕ್ರಮ ಘೋಷಣೆ ಆಗಬಹುದು ಎಂದು ಕೂಡ ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next