ಮಂಗಳೂರು: ಆರು ಬಾರಿ ಗೆಲುವು, ಎರಡು ಬಾರಿ ಸೋಲು ಕಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ. ರಮಾನಾಥ ರೈ ಕೊನೆಗೂ ತಮ್ಮ ಕೊನೆಯ ಚುನಾವಣೆಯಲ್ಲಿ ಗೆಲುವಿನ ರುಚಿ ಕಾಣುವುದು ಸಾಧ್ಯವಾಗಲಿಲ್ಲ.
ಈ ಬಾರಿ ಹುಮ್ಮಸ್ಸಿನಿಂದಲೇ ಸ್ಪರ್ಧೆಗೆ ಮುಂದಾಗಿದ್ದ ಅವರು ಪ್ರಾರಂಭದಲ್ಲಿ ಪಕ್ಷದ ರಾಜ್ಯ ಮುಖಂಡರಿಂದ ಸಹಕಾರ ಇಲ್ಲದಿದ್ದರೂ ಮೊದಲ ಹಂತದಲ್ಲೇ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಯಾವುದೇ ರೀತಿಯ ವೈಯಕ್ತಿಕ ಆರೋಪಗಳನ್ನು ಮಾಡದೆ ಕೇವಲ ತನ್ನ ಹಿಂದಿನ ಅಭಿವೃದ್ಧಿ ಕಾರ್ಯಗಳು, ತಾನು ಹಿಂದೆ ಷಡ್ಯಂತ್ರದಿಂದ ಸೋಲಿಸ್ಪಟ್ಟಿರುವುದು ಹಾಗೂ ಇದು ತನ್ನ ಕೊನೆಯ ಚುನಾವಣೆ ಎಂಬುದನ್ನು ಪದೇ ಪದೆ ಪ್ರಚಾರದ ವೇಳೆ ಹೇಳುತ್ತಾ ಬಂದಿದ್ದರು. ಆದರೆ 8,282 ಮತಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಈ ಸೋಲಿನಿಂದ ರೈ ಅವರ ಸೋಲಿನ ಸಂಖ್ಯೆ ಮೂರು ಆಗಿದೆ.
1985ರಲ್ಲಿ ರಾಜಕಾರಣಕ್ಕೆ ಮೊದಲ ಬಾರಿಗೆ ಬಂದವರೇ ಗೆಲುವು ಸಾಧಿಸಿದ್ದರು ರೈ. ಈಗ ಎರಡು ಸತತ ಸೋಲಿನ ಬಳಿಕ ಸಕ್ರಿಯ ರಾಜಕಾರಣದಲ್ಲಿರುತ್ತಾರೆಯೇ ಅಥವಾ ಅವರು ಹಿನ್ನೆಲೆಗೆ ಸರಿಯುತ್ತಾರೆಯೇ ಎನ್ನುವುದು ಕುತೂಹಲ.
2013ರಲ್ಲಿ ರಾಜಕಾರಣಕ್ಕೆ ಬಂದು ಸ್ಪರ್ಧಿಸಿ ಗೆದ್ದವರು ಕೆಎಎಸ್ ನಿವೃತ್ತ ಅಧಿಕಾರಿ ಜೆ.ಆರ್. ಲೋಬೋ. ಆದರೆ 2018ರಲ್ಲಿ ಕರಾವಳಿಯಲ್ಲಿನ ಬಿಜೆಪಿ ಪರ ಅಲೆಯಲ್ಲಿ ಸೋಲು ಕಂಡಿದ್ದರು. ಬಳಿಕ ಈ ಬಾರಿ ಟಿಕೆಟ್‌ಗಾಗಿ ಕಠಿನ ಹೋರಾಟ ನಡೆಸಿ ಟಿಕೆಟ್ ಪಡೆದರೂ ಎರಡನೇ ಬಾರಿಗೆ 2ನೇ ಬಾರಿಗೆ ಸೋಲು ಕಂಡಿದ್ದಾರೆ.