Advertisement

karnataka election: ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗುವುದೇ ಚಿಕ್ಕಬಳ್ಳಾಪುರ?

12:37 AM May 02, 2023 | Team Udayavani |

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ತನ್ನ ಭದ್ರಕೋಟೆ ಉಳ್ಳಿಸಿಕೊಳ್ಳುವ ಪ್ರತಿಷ್ಠೆಯಾದುಲಕ್ಕೆ ತನ್ನ ನೆಲೆ ವಿಸ್ತರಿಸುವ ತವಕ. ಇದರ ಮಧ್ಯೆ ದಳಪತಿಗಳಿಗೆ ಜಿಲ್ಲಾದ್ಯಂತ ಇರುವ ತಮ್ಮ ಅಸ್ತಿತ್ವ ಉಳಿಸಿಕೊಂಡು ಇನ್ನಷ್ಟು ಬಲ ವೃದ್ಧಿಸಿಕೊಳ್ಳುವ ಸವಾಲು ಎದುರಾಗಿದೆ. ಕೆಲ ಕ್ಷೇತ್ರಗಳಲ್ಲಿ ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಮಾತ್ರ ಕಾಂಗ್ರೆಸ್‌ ಜೆಡಿಎಸ್‌ ನಡುವೆ ನೇರ ಹಣಾಹಣಿ ಇದ್ದರೆ ಗೌರಿಬಿದನೂರು ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ನಡುವೆ ತ್ರೀಕೋನ ಸ್ಪರ್ಧೆ ಕಾಣುತ್ತಿದೆ. ವಿಶೇಷವಾಗಿ ಗೌರಿಬಿದನೂರಲ್ಲಿ ರಾಜಕೀಯ ಪಕ್ಷಗಳಿಗೆ ಪಕ್ಷೇತರರೇ ಸವಾಲಾಗಿ ಪರಿಣಮಿಸಿದ್ದಾರೆ.

Advertisement

ಗೌರಿಬಿದನೂರು
ಇದು ಕಾಂಗ್ರೆಸ್‌ ಪ್ರಾಬಲ್ಯ ಇರುವ ಕ್ಷೇತ್ರ. ಹಾಲಿ ಶಾಸಕರಾಗಿರುವ ಎನ್‌.ಎಚ್‌.ಶಿವಶಂಕರರೆಡ್ಡಿ ಕಾಂಗ್ರೆಸ್‌ನಿಂದ ಸತತ 6ನೇ ಬಾರಿಗೆ ಶಾಸಕರಾಗಲು ಮತ್ತೆ ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಟಿಕೆಟ್‌ ಸ್ಥಳೀಯರಾದ ಮಾನಸ ಆಸ್ಪತ್ರೆ ಗ್ರೂಪ್‌ನ ಅಧ್ಯಕ್ಷ ಡಾ| ಶಶಿಧರ್‌ಗೆ ಸಿಕ್ಕಿದೆ. ರಾಜಕೀಯ ಅನುಭವ ಇಲ್ಲದೇ ಇದ್ದರೂ ಇವರ ಬೆನ್ನಿಗೆ ಆರ್‌ಎಸ್‌ಎಸ್‌ ಸಂಘಟನೆ ಇದೆ. 2008ರಲ್ಲಿ ಬಿಜೆಪಿಯಿಂದ ಎಂ.ರವಿ ನಾರಾಯಣರೆಡ್ಡಿ, 2013ರಲ್ಲಿ ಸಮಾಜ ಸೇವಕ ಜೈಪಾಲ್‌ರೆಡ್ಡಿ ಸ್ಪರ್ಧಿಸಿ 2ನೇ ಸ್ಥಾನ ಪಡೆದಿದ್ದರು. ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ. 2018 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಸೋತಿದ್ದ ಸಿ.ಆರ್‌.ನರಸಿಂಹಮೂರ್ತಿ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಅಭ್ಯರ್ಥಿಗಳು (18 ಮಂದಿ) ನಿಂತಿರುವ ಖ್ಯಾತಿಗೆ ಗೌರಿಬಿದನೂರು ಪಾತ್ರವಾಗಿದ್ದು ಅದರಲ್ಲೂ ಪಕ್ಷೇತರರಾಗಿ ಸ್ಪರ್ಧಿಸಿರುವ ಸಂಸದ ಬಿ.ಎನ್‌.ಬಚ್ಚೇಗೌಡರ ಬೀಗರಾಗಿರುವ ಕೆ.ಎಚ್‌.ಪುಟ್ಟಸ್ವಾಮಿಗೌಡ, ಕೆಂಪರಾಜು ಕೂಡ ಪ್ರಮುಖ ಪಕ್ಷಗಳಿಗೆ ಸೆಡ್ಡು ಹೊಡೆದು ತೀವ್ರ ಸ್ಪರ್ಧೆ ನೀಡುತ್ತಿದ್ದಾರೆ. 40 ಸಾವಿರಕ್ಕೂ ಹೆಚ್ಚಿರುವ ಪರಿಶಿಷ್ಟ ಪಗಂಡ ಮತ್ತು ಒಕ್ಕಲಿಗರು ಹಾಗೂ ಹಿಂದೂ ಸಾದರ ಲಿಂಗಾಯಿತ ಸಮಾಜ ಸೋಲು, ಗೆಲುವನ್ನು ನಿರ್ಧರಿಸಲಿದೆ.

ಬಾಗೇಪಲ್ಲಿ
2013ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 2ನೇ ಬಾರಿಗೆ ಗೆಲುವು ಸಾಧಿಸಿರುವ ಎಸ್‌.ಎನ್‌.ಸುಬ್ಟಾರೆಡ್ಡಿ 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಇನ್ನೂ ಕ್ಷೇತ್ರದಲ್ಲಿ 2 ಬಾರಿ ಸಿಪಿಎಂ ಪಕ್ಷದಿಂದ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದು ಅವರ ಶಿಷ್ಯ ಡಾ| ಅನಿಲ್‌ ಕುಮಾರ್‌ ಸಿಪಿಎಂನಿಂದ ಕಣಕ್ಕೆ ಇಳಿದಿದ್ದಾರೆ. ಕೊನೆ ಕ್ಷಣದಲ್ಲಿ ಮುನಿರಾಜುಗೆ ಬಿ.ಫಾರಂ ಸಿಕ್ಕಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. ವಿಶೇಷ ಅಂದರೆ 6 ತಿಂಗಳ ಮೊದಲೇ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿಯಾಗಿ ಡಿ.ಜೆ.ನಾಗರಾಜರೆಡ್ಡಿಗೆ ಜೆಡಿಎಸ್‌ ವರಿಷ್ಠರು ಟಿಕೆಟ್‌ ಘೋಷಿಸಿದರೂ ನಾಮಪತ್ರ ಸಲ್ಲಿಕೆ ಸಮಯಕ್ಕೆ ಸಿಪಿಎಂ ಅಭ್ಯರ್ಥಿಗೆ ಬಾಹ್ಯ ಬೆಂಬಲ ಘೋಷಿಸಿದ ಪರಿಣಾಮ ಪ್ರಕಟಿತ ಅಭ್ಯರ್ಥಿ ಡಿ.ಜೆ.ನಾಗರಾಜರೆಡ್ಡಿಗೆ ನಾಮಪತ್ರವೇ ಸಲ್ಲಿಸಲಿಲ್ಲ. ಬಾಗೇಪಲ್ಲಿ ಕ್ಷೇತ್ರ ರಾಜಕೀಯವಾಗಿ ಸಿಪಿಎಂ, ಕಾಂಗ್ರೆಸ್‌ ಪಕ್ಷಗಳ ನಡುವೆ ಕುಸ್ತಿಯ ಕಣ. ಇಲ್ಲಿ ಜೆಡಿಎಸ್‌, ಬಿಜೆಪಿ ಇಲ್ಲಿವರೆಗೂ ಖಾತೆ ತೆರೆದ ಇತಿಹಾಸ ಇಲ್ಲ. ಈ ಕ್ಷೇತ್ರದಲ್ಲಿ ಎಸ್‌ಸಿ, ಎಸ್‌ಟಿ, ಒಕ್ಕಲಿಗ ಹಾಗೂ ಬಲಿಜಿಗ ಮತಗಳೇ ನಿರ್ಣಾಯಕ.

ಚಿಕ್ಕಬಳ್ಳಾಪುರ
2013, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 2 ಬಾರಿ ಗೆದ್ದಿದ್ದ ಡಾ| ಕೆ.ಸುಧಾಕರ್‌, ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರಕ್ಕೆ ಸೆಡ್ಡು ಹೊಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು 2019ರಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರಿ ಆ ಮೂಲಕ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸತತ 3ನೇ ಬಾರಿಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲದ ಖಾತೆ ತೆರೆದು ಬೊಮ್ಮಾಯಿ ಸರಕಾರದಲ್ಲಿ ಪ್ರಭಾವಿ ಆರೋಗ್ಯ ಸಚಿವರಾಗಿದ್ದಾರೆ. ಈಗ 4ನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಚುನಾವಣಾ ಅಖಾಡದಿಂದ ಹಿಂದೆ ಸರಿದಿದ್ದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಈಗ ಮತ್ತೆ ಜೆಡಿಎಸ್‌ ಅಭ್ಯರ್ಥಿಯಾಗಿ 4ನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಅಚ್ಚರಿ ಅಭ್ಯರ್ಥಿಯಾಗಿ ಪ್ರದೀಪ್‌ ಈಶ್ವರ್‌ ಎಂಬ ಯುವಕನ್ನನ್ನು ಕಣಕ್ಕೆ ಇಳಿಸಿದೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌, ದಳ, ಕಮಲದ ನಡುವೆ ತ್ರಿಕೋನ ಸ್ಪರ್ಧೆಗೆ ಚಿಕ್ಕಬಳ್ಳಾಪುರ ಕಣ ಸಾಕ್ಷಿಯಾಗಲಿದೆ. ರಾಜಕೀಯವಾಗಿ ಈ ಕ್ಷೇತ್ರ ದಶಕಗಳಿಂದಲೂ ಕಾಂಗ್ರೆಸ್‌ಗೆ ಭದ್ರಕೋಟೆ. 2004 ರವರೆಗೂ ಮೀಸಲು ಕ್ಷೇತ್ರವಾಗಿ 2008 ಅನಂತರ ಸಾಮಾನ್ಯ ಕ್ಷೇತ್ರವಾಗಿದೆ. ದಲಿತರು 70 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದರೂ ಒಕ್ಕಲಿಗರು, ಬಲಿಜಿಗರು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಶಿಡ್ಲಘಟ್ಟ
ಕ್ಷೇತ್ರದಲ್ಲಿ 9 ಬಾರಿ ಸ್ಪರ್ಧಿಸಿ 6 ಬಾರಿ ಗೆಲುವು ಸಾಧಿಸಿರುವ ಹಿರಿಯ ಕಾಂಗ್ರೆಸ್‌ ಧುರೀಣ ವಿ.ಮುನಿಯಪ್ಪ ಈ ಬಾರಿ ಚುನಾವಣ ಅಖಾಡಕ್ಕೆ ಇಳಿಯದೇ ರಾಜಕೀಯ ನಿವೃತ್ತಿ ಘೋಷಿಸಿದ್ದು, ತಮ್ಮ ಉತ್ತರಾಧಿಕಾರಿಯಾಗಿ ಸಮಾಜ ಸೇವಕ ರಾಜೀವ್‌ಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. 2018ರಲ್ಲಿ ಜೆಡಿಎಸ್‌ ಟಿಕೆಟ್‌ ಗೊಂದಲದಿಂದ ಕೊನೆ ಕ್ಷಣದಲ್ಲಿ ಸಿ.ಫಾರಂನಿಂದ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಮೇಲೂರು ರವಿಕುಮಾರ್‌ ಈ ಬಾರಿ ಜೆಡಿಎಸ್‌ನಿಂದ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಮಾಜ ಸೇವಕ ಸೀಕಲ್‌ ರಾಮಚಂದ್ರಗೌಡರಿಗೆ ಬಿಜೆಪಿ ಟಿಕೆಟ್‌ ಕೊಟ್ಟು ಕಣಕ್ಕೆ ಇಳಿಸಿದೆ. ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿಲ್ಲ ಎಂದು 2018 ರಲ್ಲಿಯೂ ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿದ್ದ ಪುಟ್ಟು ಅಂಜಿನಪ್ಪ ಈ ಬಾರಿಯೂ ಕಣದಲ್ಲಿದ್ದಾರೆ. ಒಟ್ಟು 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಒಕ್ಕಲಿಗರು, ಎಸ್‌ಸಿ, ಎಸ್‌ಟಿ ಮತಗಳೇ ನಿರ್ಣಾಯಕ.

Advertisement

ಚಿಂತಾಮಣಿ
2004, 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸತತ 2 ಬಾರಿ ಶಾಸಕರಾಗಿದ್ದ ಡಾ| ಎಂ.ಸಿ.ಸುಧಾಕರ್‌, ಕಾಂಗ್ರೆಸ್‌ ಬಿಟ್ಟು ಹೋಗಿ ದ್ದರು. ಈಗ ವಾಪಸ್‌ ಕಾಂಗ್ರೆ ಸ್‌ಗೆ ಬಂದು ಕಣ ದ ಲ್ಲಿ ದ್ದಾರೆ. 2013, 2018 ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸತತ 2 ಬಾರಿ ಶಾಸಕರಾಗಿರುವ ಜೆ.ಕೆ. ಕೃಷ್ಣಾರೆಡ್ಡಿ ಹ್ಯಾಟ್ರಿಕ್‌ ಕನಸು ಹೊತ್ತು 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ ಎರಡು ಒಕ್ಕಲಿಗ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದು ಇಬ್ಬರ ನೇರ ಹಣಾಹಣಿ ಕಾಣುತ್ತಿದ್ದರೂ ಕ್ಷೇತ್ರದ ಮಾಜಿ ಸಚಿವರಾದ ದಿ.ಕೆ.ಎಂ.ಕೃಷ್ಣಾರೆಡ್ಡಿ ಆಪ್ತರಾಗಿದ್ದ ದೇವನಹಳ್ಳಿ ಗೋಪಿ ಚುನಾವಣೆ ಘೋಷಣೆ ಬಳಿಕ ಬಿಜೆಪಿ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡು ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ನಿಂತಿದ್ದಾರೆ. ಸಮುದಾಯದ ಬಲ ಇಲ್ಲದೇ ಇದ್ದರೂ ಮೋದಿ ವರ್ಚಸ್ಸು ನಂಬಿದ್ದಾರೆ. ಜಿಲ್ಲೆಯಲ್ಲಿಯೇ ಚಿಂತಾಮಣಿ ಕ್ಷೇತ್ರ ರಾಜಕಾರಣದಲ್ಲಿ ಅತ್ಯಂತ ಜಿದ್ದಾಜಿದ್ದಿಗೆ ಹೆಸರಾದ ಕ್ಷೇತ್ರ ಎನ್ನುವುದು ವಿಶೇಷ. ಎಂ.ಸಿ.ಆಂಜನೇಯರೆಡ್ಡಿ, ಟಿ.ಕೆ.ಗಂಗರೆಡ್ಡಿ ಕುಟುಂಬಗಳು ಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ತಮ್ಮ ರಾಜಕೀಯ ಪಾರುಪಾತ್ಯ ಸಾಧಿಸಿ ಅಧಿಕಾರ ಅನುಭವಿಸಿವೆ.

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next