Advertisement

karnataka election 2023: ಜಿಲ್ಲಾದ್ಯಂತ ಪ್ರಚಾರದ ಅಬ್ಬರ ಆರಂಭ…

05:04 PM Apr 12, 2023 | Team Udayavani |

ಉಡುಪಿ: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಕಾರ್ಕಳ ಕ್ಷೇತ್ರಕ್ಕೆ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆಯಿದೆ. ಈ ಮಧ್ಯೆ ಜಿಲ್ಲಾದ್ಯಂತ ಪ್ರಚಾರ ಭರಾಟೆ ದಿನೇದಿನೇ ಜೋರಾಗುತ್ತಿದೆ. ನಾಮಪತ್ರ ಸಲ್ಲಿಕೆಯ ಅನಂತರವೇ ಅಖಾಡದಲ್ಲಿ ಜಿದ್ದಾಜಿದ್ದಿ ಸಾಧ್ಯತೆ.

Advertisement

ಕಾಪು, ಬೈಂದೂರು, ಉಡುಪಿ ಹಾಗೂ ಕುಂದಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿರುವ ವಿನಯ ಕುಮಾರ್‌ ಸೊರಕೆ, ಗೋಪಾಲ ಪೂಜಾರಿ, ಪ್ರಸಾದ್‌ ರಾಜ್‌ ಕಾಂಚನ್‌ ಹಾಗೂ ದಿನೇಶ್‌ ಹೆಗ್ಡೆ ಮೊಳಹಳ್ಳಿಯವರು ತಮ್ಮ ನೆಲೆಯಲ್ಲಿ ಪ್ರಚಾರ ಪ್ರಕ್ರಿಯೆ ಚುರುಕುಗೊಳಿಸಿದ್ದಾರೆ.

ಕಾರ್ಕಳದಲ್ಲಿ ಕಾಂಗ್ರೆಸ್‌ ಪ್ರಚಾರ ಕಾರ್ಯಕ್ಕೆ ಇನ್ನಷ್ಟು ವೇಗ ಅಭ್ಯರ್ಥಿ ಆಯ್ಕೆ ಅನಂತರವೇ ಸಿಗುವ ಸಾಧ್ಯತೆಯಿದೆ. ಕಾರ್ಯಕರ್ತರು ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ಜತೆಗೆ ಬೆಲೆ ಏರಿಕೆಯ ಪಟ್ಟಿಯನ್ನು ಮನೆ ಮನೆಗೆ ತಲುಪಿಸುತ್ತಿದ್ದಾರೆ.

ಅಭ್ಯರ್ಥಿಗಳು ಬ್ಲಾಕ್‌ ಮಟ್ಟದಲ್ಲಿ ಪದಾಧಿಕಾರಿಗಳ ಸಭೆ ನಡೆಸುವುದು, ಪಂಚಾಯತಿ, ವಾರ್ಡ್‌ಗಳಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ಸಭೆ, ಪ್ರಮುಖರೊಂದಿಗೆ ಗೆಲು ವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಸಾರ್ವಜನಿಕ ಸಭೆ, ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಜೆಪಿಯು ರಾಜ್ಯ ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರ ಮೂಲಕ ಪ್ರಚಾರ ನಡೆಸುತ್ತಿದೆ. ಕಾರ್ಕಳ ಹೊರತುಪಡಿಸಿ ಉಳಿದ
ನಾಲ್ಕು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆಯ ವದಂತಿ ಜೋರಾಗಿದೆ. ಟಿಕೆಟ್‌ ಯಾರಿಗೆ ಎಂಬ ಚರ್ಚೆ ಎಲ್ಲ ಕಡೆಗಳಲ್ಲೂ ಇದೆ.

Advertisement

ಸಾಮಾಜಿಕ ಜಾಲತಾಣ ಮೂಲಕ ಪ್ರಚಾರದಲ್ಲಿ ಹಾಲಿ ಶಾಸಕರು ಹಿಂದೆ ಬಿದ್ದಿಲ್ಲ. ಅಭಿಮಾನಿ ಬಳಗದ ಮೂಲಕ ತಾವು ಹೋಗುವ ಕಾರ್ಯಕ್ರಮ ಸಹಿತ ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ವೀಡಿಯೋ, ಫೋಟೋಗಳನ್ನು ಹರಿ ಬಿಡುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಶಾಸಕರು ತಮ್ಮ ಸಾಧನೆಯ ರಿಪೋರ್ಟ್‌ ಕಾರ್ಡ್‌ ಕೂಡ ಬಿಡುಗಡೆ ಮಾಡಿದ್ದಾರೆ.

ನಾಮಪತ್ರದ ಅನಂತರವೇ ಬಿರುಸು
ಐದೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಅಷ್ಟೊಂದು ಬಿರುಸಿನ ಪ್ರಚಾರ ಪ್ರಕ್ರಿಯೆ ಶುರು ಮಾಡಿಲ್ಲ. ಘೋಷಿತ ಅಭ್ಯರ್ಥಿಗಳು ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷದ ನಲೆಯಲ್ಲಿ ಜಿಲ್ಲಾಮಟ್ಟದಿಂದ ಪ್ರಚಾರ ತಯಾರಿ ಸದ್ದು ಆರಂಭವಾಗಿಲ್ಲ.

ಎರಡು ಪಕ್ಷದಿಂದ ಐದೂ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡ ಅನಂತರವೇ ಪ್ರಚಾರಕ್ಕೆ ವಿಶೇಷ ಮೆರುಗು ಸಿಗಲಿದೆ. ನಾಮಪತ್ರ ಸಲ್ಲಿಕೆಯ ಅನಂತರವೇ ಪರ ವಿರೋಧ ವಾಗ್ಧಾಳಿಗಳು, ಸಭೆ, ಸಮಾರಂಭ, ಸಮಾವೇಶಗಳು ಹೆಚ್ಚೆಚ್ಚು ನಡೆಯಲಿವೆ. ರಾಜ್ಯ, ರಾಷ್ಟ್ರ ನಾಯಕರೂ ಬರಬಹುದಾದ ಸಾಧ್ಯತೆಯೂ ಇದೆ. ನಾಮಪತ್ರ ಸಲ್ಲಿಕೆಯ ಅನಂತರದಲ್ಲಿ ಪ್ರಚಾರದ ಸ್ವರೂಪವೇ ಭಿನ್ನವಾಗಿರುತ್ತದೆ. ಮತಗಳಿಗೆ ನಿತ್ಯವೂ ಹೊಸ ವಿಷಯವೂ ಬರಬಹುದು, ಹಳೆಯದನ್ನೇ ಎಳೆದು ತರಬಹುದು.

ಚುನಾವಣೆ ನಿರ್ವಹಣೆ ಸಮಿತಿ
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಿರ್ವಹಣೆಗೆ ಜಿಲ್ಲಾ ಹಾಗೂ ಬ್ಲಾಕ್‌ ಮಟ್ಟದಲ್ಲಿ ಸಮಿತಿ ರಚನೆ ಮಾಡಿದೆ. ಎಲ್ಲ ವಿಭಾಗದಲ್ಲೂ ಪ್ರತ್ಯೇಕ ಸಮಿತಿ ರಚಿಸಿ, ಕಾರ್ಯಾಚರಿಸಲಿದೆ. ಪ್ರಚಾರ, ಸಾಮಾಜಿಕ ಜಾಲತಾಣದ ನಿರ್ವಹಣೆಗೆ ವಿಶೇಷ ಆದ್ಯತೆಯನ್ನು ಎರಡೂ ಪಕ್ಷಗಳಲ್ಲಿ ನೀಡಲಾಗಿದೆ. ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next