Advertisement

ದಕ್ಷಿಣ ಕನ್ನಡ : ಹಾಲಿಗಳಿಗೆ ಟಿಕೆಟ್‌ ಖೋತಾ ತೀರಾ ವಿರಳ

12:20 AM Apr 09, 2023 | Team Udayavani |

ಮಂಗಳೂರು : ಈಗಾಗಲೇ ಕೇಳಿಬರುತ್ತಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಲಿ ಶಾಸಕರು- ಸಚಿವರು ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಬದಲಾವಣೆ ಕೈಗೊಂಡರೆ ಅಪರೂಪದ ವಿದ್ಯಮಾನ ಆಗಲಿದೆ.

Advertisement

ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳ ಪೈಪೋಟಿಯ ಬಿಸಿ, ಕಾರ್ಯಕರ್ತರ ಒತ್ತಡ ಎದುರಿಸುತ್ತಿದೆ. ಕರಾವಳಿ ಭಾಗದಲ್ಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಶತಾಯಗತಾಯ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ತಂತ್ರ ಪ್ರತಿತಂತ್ರ ರೂಪಿಸುತ್ತಿವೆ. ಈ ಮಧ್ಯೆ ಜಿಲ್ಲೆಯ ಕೆಲವೆಡೆ ಬಿಜೆಪಿಯ ಹಾಲಿ ಶಾಸಕರು ಹಾಗೂ ಸಚಿವರು ಕಾರ್ಯಕರ್ತರು ಹಾಗೂ ಮತದಾರರ ಆಕ್ರೋಶವನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಅವರ ಬದಲಾವಣೆಗೆ ಹೈಕಮಾಂಡ್‌ ಮನಸ್ಸು ಮಾಡಿರುವುದು ಸ್ಪಷ್ಟವಾಗಿದೆ.

ಇದುವರೆಗೆ ಬಿಜೆಪಿಯಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಹೀಗೆ ಶಾಸಕರು-ಸಚಿವರನ್ನು ಬದಲಿಸಿದ ಉದಾಹರಣೆ ಜಿಲ್ಲೆಯಲ್ಲಿ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಮತದಾರರ /ಕಾಯಕರ್ತರ ಬೇಸರವನ್ನು ಅಭ್ಯರ್ಥಿಗಳೇ ಚುನಾವಣೆಯಲ್ಲಿ ಎದುರಿಸುತ್ತಿದ್ದರು. ಪರಿಣಾಮವಾಗಿ ಸೋತದ್ದಿದೆ. 2013 ರಲ್ಲಿ ಬಿಜೆಪಿ ಸರಕಾರದ ಮೇಲಿದ್ದ ವಿರೋಧಿ ಅಲೆಯ ಪರಿಣಾಮವನ್ನು ಅಭ್ಯರ್ಥಿಗಳು ಎದುರಿಸಿದ್ದರು. ಆಗ ಸುಳ್ಯವೊಂದು ಬಿಟ್ಟು ಮತ್ತೆಲ್ಲಾ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿತ್ತು.

ಕಾಂಗ್ರೆಸ್‌ನಲ್ಲೂ ಅಷ್ಟೇ. ಒತ್ತಡಕ್ಕೊಳಗಾಗಿ ಹೈಕಮಾಂಡ್‌ ಹಾಲಿ ಶಾಸಕರು/ಸಚಿವರಿಗೆ ಟಿಕೆಟ್‌ ನೀಡದಿರುವ ಪದ್ಧತಿ ತೀರಾ ಕಡಿಮೆ. ಆಕ್ರೋಶ ಎದುರಾದಾಗಲೆಲ್ಲಾ ಸ್ಪರ್ಧಿಸಿ ಮತದಾರರ ಸಿಟ್ಟನ್ನು ಅನುಭವಿಸಿದ್ದಾರೆ. 2013ರಲ್ಲಿ ಬಿಜೆಪಿಗೆ ಆದಂತಹ ರೀತಿಯದ್ದೇ ಸನ್ನಿವೇಶವನ್ನು 2018ರಲ್ಲಿ ಕಾಂಗ್ರೆಸ್‌ ಎದುರಿಸಿತ್ತು. ಆಡಳಿತ ವಿರೋಧಿ ಅಲೆ ಹಾಗೂ ವಿವಿಧ ಕಾರಣಗಳಿಗೆ ಜನಾಕ್ರೋಶ ಇತ್ತು. ಮತದಾರರ ಕೋಮುಗಲಭೆ, ಹತ್ಯೆಗಳಿಂದ ಎಲ್ಲೆಡೆ ಆಗಿನ ಶಾಸಕರ ವಿರುದ್ಧ ಜನಾಕ್ರೋಶ ಇತ್ತು, ಹಾಗಿದ್ದರೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬದಲಿಸಿರಲಿಲ್ಲ. ಆಗ ಕಾಂಗ್ರೆಸ್‌ 6 ಕ್ಷೇತ್ರಗಳನ್ನೂ ಕಳೆದುಕೊಳ್ಳಬೇಕಾಯಿತು.

ಸದ್ಯದ ಪ್ರಕಾರ ದ.ಕ ಜಿಲ್ಲೆಯ ಮೂರು ಕಡೆಗಳಲ್ಲಿ ಬಿಜೆಪಿಯಿಂದ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾರ್ಯಕರ್ತರ ಆಕ್ರೋಶ ಎದುರಿಸುತ್ತಿರುವವರಲ್ಲಿ ಒಬ್ಬರು ಸಚಿವರಾದರೆ ಇನ್ನೋರ್ವರು ಶಾಸಕರು. ಬೇರಡೆ ಬಹಿರಂಗವಾಗಿ ಅಸಮಾಧಾನವಿಲ್ಲದಿದ್ದರೂ ಬಣ ರಾಜಕೀಯ, ಆಂತರಿಕ ಪೈಪೋಟಿ ಹೆಚ್ಚಿದೆ.

Advertisement

ಗುಜರಾತ್‌ ಮಾದರಿ
ಈ ಬಾರಿ ಚುನಾವಣ ವರ್ಷದ ಆರಂಭದಲ್ಲೇ ಕರ್ನಾಟಕದಲ್ಲೂ ಗುಜರಾತ್‌ ಮಾದರಿಯಲ್ಲೇ ಹಾಲಿ ಶಾಸಕರನೇಕರಿಗೆ ಟಿಕೆಟ್‌ ನಿರಾಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತಾದರೂ ಖಚಿತಗೊಂಡಿರಲಿಲ್ಲ. ಆದರೀಗ ಹೈಕಮಾಂಡ್‌ ಈ ನಿಟ್ಟಿನಲ್ಲಿ ಬಿಗಿ ನಿಲುವು ತಳೆದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next