Advertisement
ಭಾರೀ ಮಳೆ ಬಂದು ನಿಂತರೂ ಅದರಿಂದ ಉಂಟಾದ ಪ್ರವಾಹ ನಿಲ್ಲಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದರೆ, ಅದರಿಂದ ಉಂಟಾಗುವ ಪರಿಣಾಮಗಳು ಸಾಕಷ್ಟು ದಿನ ಕಾಡುತ್ತವೆ. ಪ್ರಸ್ತುತ ಬಿಜೆಪಿ ಪಾಲಿನ ಚಾಣಕ್ಯ ಎಂದೇ ಹೇಳಲಾಗುತ್ತಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೂರು ದಿನಗಳ ರಾಜ್ಯ ಭೇಟಿಯ ಪರಿಸ್ಥಿತಿಯೂ ಇದೇ ಆಗಿದೆ. ಅವರ ಕಾರ್ಯವೈಖರಿಗೆ ರಾಜ್ಯ ಬಿಜೆಪಿಗೆ ಮಾತ್ರವಲ್ಲ, ಆಡಳಿತಾರೂಢ ಕಾಂಗ್ರೆಸ್ ಕೂಡ ಕೊಂಚ ಮಟ್ಟಿಗೆ ಬೆಚ್ಚಿ ಬಿದ್ದಿದೆ. ಅದು ಬಿಜೆಪಿ ನಾಯಕರ ಮುಖದಲ್ಲಿ ವ್ಯಕ್ತವಾದರೆ, ಕಾಂಗ್ರೆಸ್ ನಾಯಕರ ಮಾತುಗಳಲ್ಲಿ ಹೊರಬೀಳುತ್ತಿದೆ. ಇನ್ನೊಂದೆಡೆ ಬಿಜೆಪಿ ಮುಖಂಡರ ಹಾವಭಾವ, ಮೌನ, ಕಳೆಗುಂದಿದ ಮುಖಗಳೇ ಮುಂದಿನ ದಿನಗಳಲ್ಲಿ ಅವರು ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂಬ ಮುನ್ಸೂಚನೆಯನ್ನು ನೀಡಿದೆ.
Related Articles
Advertisement
ಆದರೆ, ಅದರ ಬಿಸಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂದರೆ ಆಡಳಿತಾರೂಢ ಕಾಂಗ್ರೆಸ್ ಮುಖಂಡರು ಕೂಡ ಮೂರು ದಿನ ಅಮಿತ್ ಶಾ ಎಂಬ ಮಂತ್ರವನ್ನೇ ಹೇಳುವಂತಾಗಿತ್ತು. ನಮಗೆ ಅಮಿತ್ ಶಾ ಭಯವಿಲ್ಲ, ಅವರ ಕಾರ್ಯತಂತ್ರಗಳು ಇಲ್ಲಿ ಫಲಿಸುವುದಿಲ್ಲ, ಅಮಿತ್ ಶಾ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರಾಗಿ ಎಲ್ಲರೂ ಬಡಬಡಿಸುತ್ತಿದ್ದರು. ವೇಣುಗೋಪಾಲ್ ಅವರು ಎಐಸಿಸಿ ರಾಜ್ಯ ಉಸ್ತುವಾರಿಯಾಗಿ ರಾಜ್ಯಕ್ಕೆ ಬಂದು ಹೋಗಲಾರಂಭಿಸಿದ ಬಳಿಕ ಚೇತರಿಸಿಕೊಂಡಿದ್ದ ಕಾಂಗ್ರೆಸ್ ನಾಯಕರು ಏಕಾಏಕಿ ಬದಲಾಗುವಷ್ಟು ಶಾ ಪ್ರವಾಸದ ಕಾವು ಆ ಪಕ್ಷವನ್ನು ತಟ್ಟಿತ್ತು.
“ಎಷ್ಟೇ ಸಣ್ಣ ಕೆಲಸವಿದ್ದರೂ ಸಿಂಹ ತನ್ನ ಕೆಲಸ ಮುಗಿಯುವ ತನಕ ತನ್ನ ಶಕ್ತಿ ಮರೆತು ವಿಶ್ರಮಿಸುವುದಿಲ್ಲ. ಅಂದರೆ, ಅದು ಯಾವುದೇ ಪ್ರಾಣಿಯನ್ನು ಹಿಡಿಯಲು ಯೋಚಿಸಿದರೆ ಅದಕ್ಕೆ ಸರಿಯಾದ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತದೆ ಮಾತ್ರವಲ್ಲ ಸಾಯಿಸುವ ತನಕ ತನ್ನ ಕೆಲಸವನ್ನು ಬಿಟ್ಟು ಬಿಡುವುದಿಲ್ಲ. ನಮ್ಮಲ್ಲಿ ಕೆಲವು ಜನರಿದ್ದಾರೆ, ಅವರಿಗೆ ಕೆಲಸ ಆರಂಭಿಸಿ ಮಾತ್ರ ಅಭ್ಯಾಸ. ಮುಗಿಸುವ ತನಕ ಆರಂಭಿಸಿದ ಹುಮ್ಮಸ್ಸು ಇರುವುದಿಲ್ಲ. ಸಿಂಹದಂತೆಯೆ ನಾವು ಕೂಡ ಏನೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಯೋಜನೆಗಳನ್ನು ರೂಪಿಸಿ ತದೇಕ ಚಿತ್ತದಿಂದ ಕೆಲಸ ಮಾಡಿದರೆ ಆ ಕೆಲಸವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಕೌಟಿಲ್ಯ ಅರ್ಥಾತ್ ಚಾಣಕ್ಯ ಬೋಧಿಸಿದ ತಂತ್ರ. ಈ ಸಿಂಹದ ತಂತ್ರವನ್ನು ಪಕ್ಷದಲ್ಲಿರುವವರು ಅನುಸರಿಸಬೇಕು’ ಎಂಬ ನಿರ್ದೇಶನ ಕೊಟ್ಟುಹೋಗಿದ್ದಾರೆ ಅಮಿತ್ ಶಾ.
ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ, ಕೋರ್ ಕಮಿಟಿ ಸಭೆಗಳನ್ನು ಸರಿಯಾಗಿ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗುತ್ತಿಲ್ಲ, ಏಕಪಕ್ಷೀಯ ಧೋರಣೆ ಅನುಸರಿಸಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ಮಾಡುತ್ತಾ ಭಿನ್ನಾಭಿಪ್ರಾಯಕ್ಕೆ ಅವಕಾಶವಿಲ್ಲ. ಇನ್ನೇನಿದ್ದರೂ ಮುಖಂಡರ ಕಾರ್ಯನಿರ್ವಹಣೆಯಷ್ಟೇ ಪ್ರಮುಖವಾಗುತ್ತದೆ. ಅದರಲ್ಲಿ ಎಡವಟ್ಟು ಮಾಡಿಕೊಂಡರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ತಲುಪಿಸಿರುವುದು ಗೊತ್ತಾಗುತ್ತದೆ. ಅಲ್ಲದೆ, ಕೇವಲ ಪ್ರವಾಸ, ಭಾಷಣ, ಸಭೆಗಳ ಮೂಲಕವಲ್ಲ, ಜನರನ್ನು ತಲುಪಿ ಅವರನ್ನು ತಮ್ಮತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ಷಮತೆ ತೋರಬೇಕು ಎಂಬುದನ್ನು ಅಮಿತ್ ಶಾ ರಾಜ್ಯ ನಾಯಕರಿಗೆ ತಿಳಿಹೇಳಿರುವುದು ಸ್ಪಷ್ಟವಾಗುತ್ತದೆ.
ಅಮಿತ್ ಶಾ ಅವರ ಕಾರ್ಯವೈಖರಿಯಲ್ಲಿ ನಿಜವಾಗಿಯೂ ಅಚ್ಚರಿ ಹುಟ್ಟಿಸಿದ್ದು ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ದೂರಮಾಡಿ ಇಡೀ ಪಕ್ಷವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ರೀತಿ. ಸಾಕಷ್ಟು ರಾಜ್ಯಗಳಲ್ಲಿ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದ ಶಾ ಅವರಿಗೆ ಪಕ್ಷದ ರಾಜ್ಯ ಘಟಕದಲ್ಲಿರುವ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವುದು ಕಷ್ಟದ ಕೆಲಸ ಆಗಲೇ ಇಲ್ಲ. ಇನ್ನೊಂದೆಡೆ, ರಾಜ್ಯದ ನಾಯಕರು ತಮ್ಮ ವೇಗಕ್ಕೆ ಹೊಂದಿಕೊಳ್ಳುವಂತಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಅವರಿಗೆ ಕೆಲವು ಕಾರ್ಯಭಾರವನ್ನು ವಹಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸುವ ಷರತ್ತು ವಿಧಿಸಿ ಪಕ್ಷದ ಎಲ್ಲಾ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಉದಾಹರಣೆ ಕಳೆದ ನಾಲ್ಕೈದು ತಿಂಗಳಿನಿಂದ ಹೋರಾಟವನ್ನೇ ಮರೆತವರಂತಿದ್ದ ಬಿಜೆಪಿ ನಾಯಕರು ಅಮಿತ್ ಶಾ ನೀಡಿದ ಟಾಸ್ಕ್ ನಂತರ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ನಡೆದ ಐಟಿ ದಾಳಿ ಸೇರಿದಂತೆ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಲು ನಿರ್ಧರಿಸುವುದು. ಇನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಅಮಿತ್ ಶಾ ಆ ಕುರಿತು ಬಿಜೆಪಿಯ ರಾಜ್ಯ ಘಟಕದೊಂದಿಗೆ ಸಮಾಲೋಚಿಸಲೇ ಇಲ್ಲ.
ಅದರ ಬದಲು ಸಂಘ ಪರಿವಾರದವರೊಂದಿಗಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ಸಂಘ ಪರಿವಾರ ಮತ್ತು ಮೂಲ ಕಾರ್ಯಕರ್ತರಿಗೆ ಅದರಲ್ಲೂ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಗಳನ್ನು ಹುಟ್ಟುಹಾಕಿದ್ದಾರೆ. ಆ ಮೂಲಕ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮತ್ತೆ ನಾಯಕರ ಮಧ್ಯೆ ಅಸಮಾಧಾನ ಉಂಟಾಗದಂತೆ ಈಗಲೇ ವೇದಿಕೆ ಸಿದ್ಧಪಡಿಸಿದ್ದಾರೆ. ಅಮಿತ್ ಶಾ ಅವರು ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದಂತೆ ಅವರ ಕಠಿಣ ನಿಲುವುಗಳ ಪರಿಣಾಮ ಬಿಜೆಪಿಯಲ್ಲಿ ಸ್ಪಷ್ಟವಾಗಿ ಗೋಚರಿಸಲಾರಂಭಿಸಿದೆ. ಅತ್ತ ಅಮಿತ್ ಶಾ ವಿಮಾನ ಏರುತ್ತಿದ್ದಂತೆ ಮುಖಂಡರು ಕುಳಿತು ಒಂದು ಸುತ್ತಿನ ಸಭೆ ಮಾಡಿದ್ದಾರೆ. ಮುಂದಿನ ತಿಂಗಳು ಅಮಿತ್ ಶಾ ಅವರು ಬರುವುದರೊಳಗೆ ಅವರು ನೀಡಿರುವ ಕೆಲಸಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಚರ್ಚೆ ಶುರುಹಚ್ಚಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟು ಮೂಡಿಸುವ ಅಮಿತ್ ಶಾ ಅವರ ಪ್ರಯತ್ನ ಸಫಲವಾಗಿದೆ.
ಪ್ರದೀಪ್ ಕುಮಾರ್ ಎಂ.