Advertisement

ಕರ್ನಾಟಕ ಭರ್ಜರಿ ಬ್ಯಾಟಿಂಗ್‌

12:51 PM Nov 18, 2017 | Team Udayavani |

ಕಾನ್ಪುರ: ಉತ್ತರ ಪ್ರದೇಶ ಬೌಲರ್‌ಗಳಿಗೆ ಅವರ ಅಂಗಳದಲ್ಲೇ ಬೆವರಿಳಿಸಿದ ಕರ್ನಾಟಕ, 5ನೇ ಸುತ್ತಿನ ರಣಜಿ ಪಂದ್ಯದಲ್ಲಿ ಪ್ರಚಂಡ ಆರಂಭ ಕಂಡುಕೊಂಡಿದೆ. ಮೊದಲ ದಿನ ಕೇವಲ 3 ವಿಕೆಟಿಗೆ 327 ರನ್‌ ಪೇರಿಸಿ ಭಾರೀ ಮೊತ್ತದ ಮುನ್ಸೂಚನೆ ನೀಡಿದೆ.

Advertisement

“ಎ’ ಗುಂಪಿನ ಅಗ್ರಸ್ಥಾನಿಯಾಗಿರುವ ಕರ್ನಾಟಕ ಕಾನ್ಪುರದ “ಗ್ರೀನ್‌ ಪಾರ್ಕ್‌’ ಅಂಗಳದಲ್ಲಿ ಅದೃಷ್ಟದ ಟಾಸ್‌ ಗೆದ್ದು ಅಮೋಘ ಬ್ಯಾಟಿಂಗಿಗೆ ಮುಂದಾಯಿತು. ಮಾಯಾಂಕ್‌ ಅಗರ್ವಾಲ್‌ (90), ಡಿ. ನಿಶ್ಚಲ್‌ (ಬ್ಯಾಟಿಂಗ್‌ 90), ಕರುಣ್‌ ನಾಯರ್‌ (62) ಮತ್ತು ಮನೀಷ್‌ ಪಾಂಡೆ (63 ಬ್ಯಾಟಿಂಗ್‌) ಅರ್ಧ ಶತಕ ಬಾರಿಸಿ ಯುಪಿ ಬೌಲರ್‌ಗಳ “ಬಿಪಿ ಡೌನ್‌’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ದಿನವೇ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು 49 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿ ಪರಾಕ್ರಮ ಮೆರೆದಿದ್ದಾರೆ. 8 ಮಂದಿ ದಾಳಿಗಿಳಿದರೂ ಕರ್ನಾಟಕಕ್ಕೆ ಕಡಿವಾಣ ಹಾಕಲು ಆತಿಥೇಯರಿಂದ ಸಾಧ್ಯವಾಗಿಲ್ಲ. ಮಧ್ಯಮ ವೇಗಿಗಳಾದ ಧ್ರುವ ಪ್ರತಾಪ್‌ ಸಿಂಗ್‌ 2, ಆಕಾಶ್‌ದೀಪ್‌ ನಾಥ್‌ ಒಂದು ವಿಕೆಟ್‌ ಉರುಳಿಸಲು ಶಕ್ತರಾದರು.

ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಸುರೇಶ್‌ ರೈನಾ ಸಾರಥ್ಯದ ಉತ್ತರ ಪ್ರದೇಶ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯವಾಗಿತ್ತು. ಆದರೆ ವಿನಯ್‌ ಬಳಗದ ಬ್ಯಾಟಿಂಗ್‌ ವೈಭವ ಕಂಡಾಗ ಯುಪಿ ಸ್ಥಿತಿ ಮತ್ತೆ ಬಿಗಡಾಯಿಸುವ ಸಾಧ್ಯತೆಯೇ ಹೆಚ್ಚಿದೆ.

ಕೈತಪ್ಪಿದ ಹ್ಯಾಟ್ರಿಕ್‌ ಸೆಂಚುರಿ
ಕರ್ನಾಟಕದ ಬ್ಯಾಟಿಂಗ್‌ ಸರದಿಯಲ್ಲಿ ಮಿಂಚದಿದ್ದುದು ಆರಂಭಕಾರ ಆರ್‌. ಸಮರ್ಥ್ ಮಾತ್ರ. ಅವರು 45 ಎಸೆತಗಳಿಂದ 16 ರನ್‌ ಮಾಡಿ ಔಟಾದರು. ಆದರೆ ಅಗರ್ವಾಲ್‌ ಜತೆ ಮೊದಲ ವಿಕೆಟಿಗೆ 14.3 ಓವರ್‌ಗಳಿಂದ 66 ರನ್‌ ಸೇರಿಸಿ ಉತ್ತಮ ಅಡಿಪಾಯ ನಿರ್ಮಿಸುವಲ್ಲಿ ಸಹಕರಿಸಿದ್ದರು.

ಮಹಾರಾಷ್ಟ್ರ ವಿರುದ್ಧ 304, ದಿಲ್ಲಿ ವಿರುದ್ಧ 176 ರನ್‌ ರಾಶಿ ಹಾಕಿದ್ದ ಮಾಯಾಂಕ್‌ ಅಗರ್ವಾಲ್‌ “ಗ್ರೀನ್‌ ಪಾರ್ಕ್‌’ ಅಂಗಳದಲ್ಲೂ ಶತಕದತ್ತ ದೌಡಾಯಿಸಿದರು. “ಹ್ಯಾಟ್ರಿಕ್‌ ಸೆಂಚುರಿ’ ಒಲಿಯಿತೆಂದೇ ಭಾವಿಸಲಾಯಿತು. ಆದರೆ ಈ ನಿರೀಕ್ಷೆ 90 ರನ್ನಿಗೆ ಸೀಮಿತಗೊಂಡಿತು. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಅಗರ್ವಾಲ್‌ ಕೇವಲ 73 ಎಸೆತ ಎದುರಿಸಿ 16 ಬೌಂಡರಿ ಸಿಡಿಸಿದರು. ಅಗರ್ವಾಲ್‌-ನಿಶ್ಚಲ್‌ ಜತೆಯಾಟದಲ್ಲಿ 2ನೇ ವಿಕೆಟಿಗೆ 55 ರನ್‌ ಒಟ್ಟುಗೂಡಿತು.

Advertisement

ನಿಶ್ಚಲ್‌; ಚೊಚ್ಚಲ ಶತಕ ನಿಶ್ಚಿತ?
ಅಗರ್ವಾಲ್‌ಗೆ ಒಲಿಯದ ಶತಕ ಶನಿವಾರ ವನ್‌ಡೌನ್‌ ಬ್ಯಾಟ್ಸ್‌ಮನ್‌ ಡಿ. ನಿಶ್ಚಲ್‌ ಅವರಿಗೆ ಒಲಿಯುವ ಸಾಧ್ಯತೆ ಇದೆ. ಕೇವಲ 2ನೇ ರಣಜಿ ಪಂದ್ಯವಾಡುತ್ತಿರುವ ನಿಶ್ಚಲ್‌ ತಾಳ್ಮೆಯ ಆಟದ ಮೂಲಕ 90 ರನ್‌ ಮಾಡಿ ಅಜೇಯರಾಗಿ ಉಳಿದಿದ್ದಾರೆ. 221 ಎಸೆತಗಳನ್ನು ಎದುರಿಸಿದ್ದು, 13 ಬೌಂಡರಿ ಹೊಡೆದಿದ್ದಾರೆ. ಇದೇ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟಿಗೆ ಅಡಿಯಿರಿಸಿದ ನಿಶ್ಚಲ್‌ 16 ರನ್‌ ಮಾಡಿ ಔಟಾಗಿದ್ದರು. ಕೆ.ಎಲ್‌. ರಾಹುಲ್‌ ಅನುಪಸ್ಥಿತಿಯಲ್ಲಿ ಅವರಿಗೆ ಈ ಅವಕಾಶ ಸಿಕ್ಕಿದೆ.

ಅಗರ್ವಾಲ್‌ ನಿರ್ಗಮನದ ಬಳಿಕ ನಿಶ್ಚಲ್‌ 2 ಉಪಯುಕ್ತ ಜತೆಯಾಟದಲ್ಲಿ ಭಾಗಿಯಾದರು. ನಾಯರ್‌ ಜತೆ 3ನೇ ವಿಕೆಟಿಗೆ 115 ರನ್‌, ಪಾಂಡೆ ಜತೆ ಮುರಿಯದ 4ನೇ ವಿಕೆಟಿಗೆ 91 ರನ್‌ ಪೇರಿಸಿದ್ದಾರೆ. 

ನಾಯರ್‌, ಪಾಂಡೆ ಪರಾಕ್ರಮ
ಮಧ್ಯಮ ಕ್ರಮಾಂಕದ ಕರುಣ್‌ ನಾಯರ್‌ ಮತ್ತು ಮನೀಷ್‌ ಪಾಂಡೆ ಕೂಡ ಬ್ಯಾಟಿಂಗ್‌ ಪರಾಕ್ರಮವನ್ನು ಮುಂದುವರಿಸಿದ್ದು ಕರ್ನಾಟಕದ ಪಾಲಿಗೆ ಭಾರೀ ಲಾಭವಾಗಿ ಪರಿಣಮಿಸಿತು. ನಾಯರ್‌ 123 ಎಸೆತಗಳಿಂದ 62 ರನ್‌ ಮಾಡಿದರೆ (8 ಬೌಂಡರಿ), ಪಾಂಡೆ 79 ಎಸೆತಗಳಿಂದ 63 ರನ್‌ ಗಳಿಸಿ ಆಡುತ್ತಿದ್ದಾರೆ. ಪಾಂಡೆ ಬ್ಯಾಟಿನಿಂದ 9 ಬೌಂಡರಿ ಹಾಗೂ ಸರದಿಯ ಏಕೈಕ ಸಿಕ್ಸರ್‌ ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next