Advertisement
ಇದು ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ವಿಚಾರದಲ್ಲಿ ಬಿಜೆಪಿಯ ನಡೆಯ ಕುರಿತಾದದ್ದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತದ ಅನೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನ್ನು ಎದುರಿಸಲು ಬಿಜೆಪಿಯು ಜೆಡಿಎಸ್‌ಗೆ ಸಾಥ್ ನೀಡಿತು. ಅಂದರೆ ಜೆಡಿಎಸ್ ಪ್ರಾಬಲ್ಯದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು. ಆಗ ಕಾಂಗ್ರೆಸ್ ಮಣಿಸಬೇಕೆಂಬ ಕಾರಣದಿಂದ ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗವಾಗಿ ಕಾಂಗ್ರೆಸ್ ನೆಲಕಚ್ಚಿತು. ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೆ ಕಾಂಗ್ರೆಸ್‌ಗೆ ವರವಾಗುವ ಕ್ಷೇತ್ರಗಳಲ್ಲಿ ಬಿಜೆಪಿಯ ನೆರವಿನಲ್ಲಿ ಜೆಡಿಎಸ್ ಜಯ ಸಾಧಿಸಿತ್ತು.
Related Articles
Advertisement
ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ರಾಮನಗರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಿಡುಗಡೆಯನ್ನು ಜೆಡಿಎಸ್ ಎದುರು ನೋಡುತ್ತಿದೆ. ಜೆಡಿಎಸ್ ಪ್ರಾಬಲ್ಯದ ಈ ಜಿಲ್ಲೆಗಳಲ್ಲಿ ಕಾಂಗ್ರೆಸಿಗೆ ನೇರಾನೇರ ಹೋರಾಟ ಜೆಡಿಎಸ್‌ಗೆ ಬೇಕಿದೆ. ಇದಕ್ಕೆ ಬಿಜೆಪಿಯ ಸಾಥ್ ಜೆಡಿಎಸ್‌ಗೆ ಅಗತ್ಯವಿದೆ. ಕಳೆದ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಇಂತಹ ಸಾಥ್ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದಾಗಲೇ ಜೆಡಿಎಸ್‌ಗೆ ಸಿಕ್ಕಿತ್ತು.
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಅರಕಲಗೂಡು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ ಹೀಗೆ ಕೆಲವು ಕ್ಷೇತ್ರಗಳಲ್ಲಿ ಒಂದು ಕಾಲದಲ್ಲಿ ಬಿಜೆಪಿ ಗೆದ್ದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಅಸೆಂಬ್ಲಿ ಕ್ಷೇತ್ರಗಳು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ, ನಾಗಮಂಗಲ, ಮಂಡ್ಯ, ಮದ್ದೂರು, ಮೇಲುಕೋಟೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ತಿ.ನರಸೀಪುರ, ಹಾಸನ ಜಿಲ್ಲೆಯ ಕೆಲವು ಕ್ಷೇತ್ರಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿಗೆ ಬಲಿಷ್ಠ ಅಭ್ಯರ್ಥಿಗಳಿದ್ದಾರೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಬಲಿಷ್ಠ ಅಭ್ಯರ್ಥಿ ಇಲ್ಲದಿದ್ದರೂ ಸಾಂಪ್ರದಾಯಕ ಮತದಾರರಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೊಬ್ಬರು ಈ ಕುರಿತು ಹೇಳುವುದು ಹೀಗೆ- ಹಳೇ ಮೈಸೂರು ಭಾಗದಲ್ಲಿ ಕೆಲವು ವರ್ಷಗಳಿಂದ ಜೆಡಿಎಸ್ ತನ್ನ ವೋಟುಗಳಲ್ಲದೇ, ಬಿಜೆಪಿಯ ವೋಟುಗಳನ್ನು ಪಡೆದು ಬದುಕಿದೆ. ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಇಲ್ಲಿ ಕಣಕ್ಕೆ ಇಳಿಸಿದ್ದರೆ ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗವಾಗುವುದು ತಪ್ಪುತ್ತಿತ್ತು. ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಬೆಳೆಯಬೇಕಿದ್ದರೆ ಮೊದಲು ಜೆಡಿಎಸ್ ಮಣಿಸಬೇಕು. ಇಲ್ಲದಿದ್ದರೆ ತಲೆ ಎತ್ತಲು ಸಾಧ್ಯವಿಲ್ಲ.
ಪ್ರಬಲ ಅಭ್ಯರ್ಥಿಗಳ ಇಳಿಸಲು ಕಸರತ್ತುಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಈ ಬಾರಿ ಪ್ರಬಲ ಅಭ್ಯರ್ಥಿಗಳನ್ನು ಹೂಡುವ ಗಂಭೀರ ಚಿಂತನೆ ನಡೆಸಿದೆ. ಚುನಾವಣೆಯಲ್ಲಿ ಹಿನ್ನಡೆಯಾದರೂ ಸರಿಯೇ ಒಕ್ಕಲಿಗ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ನೆಲೆಯೂರಲು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಹೂಡಿ ಅಖಾಡದಲ್ಲಿ ಖಡಾಖಡಿ ಹೋರಾಟ ನಡೆಸಬೇಕು ಎಂಬುದು ಬಿಜೆಪಿ ತಂತ್ರವಾಗಿದೆ. ಇದು ಮುಂಬರುವ ವರ್ಷಗಳಲ್ಲಿ ಪಕ್ಷ ಗ್ರಾಮೀಣ ಭಾಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಾರ್ಯಕರ್ತರು ಉತ್ಸಾಹ ಕಳೆದುಕೊಳ್ಳದಂತೆ ನೋಡಿಕೊಳ್ಳಬಹುದು ಎಂಬ ಚಿಂತನೆ ಬಿಜೆಪಿಯಲ್ಲಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಾಗಲೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. -ಕೂಡ್ಲಿ ಗುರುರಾಜ