Advertisement

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ : ಮೂವರಿಗೆ ಗೌರವ ಪ್ರಶಸ್ತಿ ಪ್ರಕಟ

12:55 AM Jul 26, 2022 | Team Udayavani |

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಿದೆ.

Advertisement

ಕಡಬದ ತುಕಾರಾಮ ಏನೆಕಲ್ಲು, ಸುಳ್ಯದ ಪಿ.ಜಿ. ಅಂಬೆಕಲ್‌, ಮಡಿಕೇರಿಯ ಚಂಡೀರ ಬಸಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತುಕಾರಾಮ ಏನೆಕಲ್ಲು
ಕಡಬ ತಾಲೂಕಿನ ತುಕಾರಾಮ ಏನೆಕಲ್ಲು ಅವರು ವೃತ್ತಿಯಲ್ಲಿಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಗಿ ನಿವೃತ್ತರಾದವರು. 1992ರಲ್ಲಿ ಸುಬ್ರಹ್ಮಣ್ಯದ ಕೆ.ಎಸ್‌.ಎಸ್‌. ಕಾಲೇಜಿ ನಲ್ಲಿ “ಕುಸುಮ ಸಾರಂಗ’ ರಂಗ ಘಟಕ ಸ್ಥಾಪಿಸಿ 23 ವರ್ಷಗಳಲ್ಲಿ 26 ನಾಟಕ ನಿರ್ಮಾಣ ಮಾಡಿದ್ದಾರೆ. ಜತೆಗೆ ಹಲ ವಾರು ಗ್ರಾಮೀಣ ಪ್ರತಿಭೆಗಳನ್ನು ಆಧುನಿಕ ರಂಗಭೂಮಿಗೆ ಕರೆತಂದು ರಂಗ ಶಿಕ್ಷಣ ನೀಡಿರುತ್ತಾರೆ. ಕುಸುಮ ಸಾರಂಗ ರಂಗ ತಂಡದ ಹಳೆ ವಿದ್ಯಾರ್ಥಿಗಳು ಪ್ರತಿಷ್ಠಿತ “ನೀನಾಸಂ’ ಸಂಸ್ಥೆಗೆ ಆಯ್ಕೆ ಯಾಗಿರುವುದರ ಹಿಂದೆ ಇವರ ಕೊಡುಗೆ ಅಪಾರ. ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ಮಹ ಮಾಯಿ, ಚಿತ್ರಪಟ, ಹರಿಣಾಭಿಸರಣ, ಸಿರಿಸಂಪಿಗೆ ನಾಟಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರಕಿದೆ. ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ 2010ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತೀಚೆಗೆ ದ.ಕ ಜಿಲ್ಲಾ ಸಿಜಿಕೆ ರಂಗ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪಿ.ಜಿ. ಅಂಬೆಕಲ್‌
ಸುಳ್ಯ ತಾಲೂಕಿನ ಅಮರ ಮುಟ್ನೂರು ಗ್ರಾಮದ ಪೈಲಾರಿನ ಪಿ.ಜಿ.ಅಂಬೆಕಲ್‌ (ಪುಟ್ಟಣ್ಣ ಗೌಡ ಅಂಬೆಕಲ್ ) ಎಂಎ, ಬಿಇಡಿ ಪದವಿ ಪಡೆದಿದ್ದು, ಕೊಡಗು ಜಿಲ್ಲೆಯ ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದು, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಬ್ಲಿ ಮಂಞ-ಅರೆಭಾಷೆ ಕಥಾಸಂಕಲನ, ಗೂಡೆ ಬೇಕಾಗುಟ್ಟು-ಅರೆಭಾಷೆ ನಾಟಕಗಳ ಜೊಂಪೆ, ನಿನ್ನ ಪ್ರೇಮದ ಪರಿಯ-ಕನ್ನಡ ಕಥಾ ಸಂಕಲನ, ಅವರವರ ಕಣ್ಣಿ- ಅರೆಭಾಷೆ ಕಥಾಸಂಕಲನ (ಅಚ್ಚಿನಲ್ಲಿದೆ) ಇವರ ಕೃತಿಗಳು. ಅರೆಭಾಷೆಯಲ್ಲಿ ಕೊಡಗು ಸಂಗಾತಿ, ಗೌಡದೊನಿ ಮತ್ತು ಹಿಂಗಾರ ಪತ್ರಿಕೆಯಲ್ಲಿ ಹಲವಾರು ಅರೆಭಾಷೆ ಲೇಖನಗಳನ್ನು ಬರೆಯುವ ಮೂಲಕ ಅರೆಭಾಷೆ ಸಮುದಾಯಕ್ಕೆ ಚಿರಪರಿಚಿತರಾಗಿದ್ದಾರೆ. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಶಾಲಾ ವಿದ್ಯಾರ್ಥಿಗಳನ್ನು ಕೂಡ ರಂಗಕ್ಕೆ ಕರೆತಂದಿದ್ದಾರೆ. ಸೋಮವಾರಪೇಟೆ ತಾಲೂಕಿನ ಆಲೂರು-ಸಿದ್ದಾಪುರದಲ್ಲಿ ನಡೆದ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಗೌರವ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ.

ಚಂಡೀರ ಕೆ. ಬಸಪ್ಪ
ಕೋಕೇರಿ ಗ್ರಾಮದ ಚಂಡೀರ ಕೆ. ಬಸಪ್ಪನ ಅವರು ಮಡಿಕೇರಿ ತಾಲೂಕಿನ ನಾಪೋಕ್ಲು ನಿವಾಸಿ. ಸಂಸ್ಕೃತಿ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಎಸೆಸೆಲ್ಸಿ ಬಳಿಕ ಭಾರತೀಯ ಭೂ ಸೇನೆಯಲ್ಲಿ ಸುಬೇದಾರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.

Advertisement

ಅರೆಭಾಷೆಯಲ್ಲಿ ಶ್ರೀ ಮಾತೆ ಕಾವೇರಿ ಸುಪ್ರಭಾತ, ಶ್ರೀಪಾಡಿ ಇಗ್ಗುತಪ್ಪ ದೇವರ ಸುಪ್ರಭಾತ, ಅರೆಭಾಷೆ ಯಲ್ಲಿ ದೇವರ ನಾಮಗಳ ರಚನೆ ಸಹಿತ ಅರೆಭಾಷೆಯಲ್ಲಿ ಕೃತಿ ರಚಿಸಿರುವ ಅವರು ಸೋಬಾನೆ ಹಾಡುಗಾರರೂ ಆಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next