ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ, ದಿ| ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ಹಾಗೂ 2022 ಮತ್ತು 2023ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನೆರವೇರಿತು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಯಕ್ಷಗಾನಕ್ಕಾಗಿ ಬದುಕನ್ನೇ ಮೀಸಲಿರಿಸಿದ ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ಇತರರಿಗೂ ಪ್ರೇರಣದಾಯಿ ಯಾಗಲಿದೆ, ಅದಕ್ಕಾಗಿ ಯಕ್ಷಗಾನ ಅಕಾಡೆಮಿಯಿಂದ ಇನ್ನಷ್ಟು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಹೇಳಿದರು.
ತುಳುನಾಡು-ಕರಾವಳಿ ಭಾಗದಲ್ಲಿ ಹಿರಿಯರು ಯಕ್ಷಗಾನಕ್ಕೆ ಬಹಳಷ್ಟು ಕೊಡುಗೆ ಕೊಟ್ಟವರಿದ್ದಾರೆ. ಯಕ್ಷಗಾನದ ಮೂಲಕ ಜನರಿಗೆ ಇತಿಹಾಸ ಪುರಾಣದ ಜ್ಞಾನ ಹಂಚಿಕೊಂಡಿದ್ದಾರೆ. ಅಂತಹ ಕಲಾವಿದರಿಗೆ ಕಷ್ಟ ಬಂದಾಗ ಅವರಿಗೆ ಶಕ್ತಿಕೊಡುವ ಕೆಲಸವಾಗಬೇಕಿದೆ. ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡುವುದಕ್ಕೆ ಸಿದ್ಧ ಎಂದು ಅಧ್ಯಕ್ಷೆತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಪ್ರಶಸ್ತಿ ಪ್ರದಾನ
2023ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಯನ್ನು ಬನ್ನಂಜೆ ಸಂಜೀವ ಸುವರ್ಣ ಅವರಿಗೆ ನೀಡಲಾಯಿತು. ಭಾಗವತ ದಿನೇಶ್ ಅಮ್ಮಣ್ಣಾಯ, ಕಲಾವಿದರಾದ ನಾರಾಯಣಪ್ಪ ಎ. ಆರ್., ಜಬ್ಟಾರ್ ಸಮೋ, ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಚೆನ್ನಪ್ಪ ಗೌಡ ಸಜಿಪ ಅವರು ಗೌರವ ಪ್ರಶಸ್ತಿ ಪಡೆದುಕೊಂಡರು.
ಯಕ್ಷಸಿರಿ ಪ್ರಶಸ್ತಿಯನ್ನು ರಘುನಾಥ ಶೆಟ್ಟಿ ಬಾಯಾರು, ದಿವಾಕರ ದಾಸ ಕಾವಳಕಟ್ಟೆ, ಸುಬ್ರಾಯ ಪಾಟಾಳಿ ಸಂಪಾಜೆ, ನರಾಡಿ ಭೋಜರಾಜ ಶೆಟ್ಟಿ, ಸದಾನಂದ ಪ್ರಭು, ಹೊಳೆಮಗೆ ನಾಗಪ್ಪ ಮರಕಾಲ, ಶಿರಳಗಿ ತಿಮ್ಮಪ್ಪ ಹೆಗಡೆ, ಬಾಬು ಕುಲಾಲ್ ಹಳ್ಳಾಡಿ, ಶಿವಯ್ಯ, ಜೀಯಪ್ಪ ಅವರಿಗೆ ನೀಡಲಾಯಿತು. ದಿ| ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಯನ್ನು ಗೋಪಾಲಕೃಷ್ಣ ಶಂಕರ ಭಟ್ ಜೋಗಿಮನೆ ಹಾಗೂ 2022 ಮತ್ತು 20233ನೇ ಸಾಲಿನ ಪುಸ್ತಕ ಬಹುಮಾನ ವಿದ್ವಾನ್ ಗಣಪತಿ ಭಟ್, ಡಾ| ಮನೋರಮಾ ಬಿ.ಎನ್., ಡಾ| ಸತೀಶ್ ಜಿ.ನಾಯ್ಕ, ಎಚ್. ಸುಜಯೀಂದ್ರ ಹಂದೆ ಹಾಗೂ 2021ನೇ ಸಾಲಿನ ಪುಸ್ತಕ ಬಹುಮಾನವನ್ನು ಪೊಳಲಿ ನಿತ್ಯಾನಂದ ಕಾರಂತ ಅವರಿಗೆ ನೀಡಿ ಗೌರವಿಸಲಾಯಿತು.
ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಯಕ್ಷಗಾನ ಅಕಾಡಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್.ಸಾಮಗ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟಾನಿ ಆಲ್ವಾರಿಸ್, ಕೊಡವ ಅಕಾಡಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಗ್ಯಾರಂಟಿ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ, ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ರಾಜೇಶ್ ಜಿ ಉಪಸ್ಥಿತರಿದ್ದರು.