Advertisement

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

11:30 AM Nov 22, 2024 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಭಗವಾನ್‌ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನ.26ರಿಂದ 30ರ ವರೆಗೆ ಜರಗಲಿದೆ.

Advertisement

ನ.26ರಂದು 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಶಾಸಕ ಹರೀಶ್‌ ಪೂಂಜ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್‌, ಮಾಜಿ ವಿ.ಪ.ಸದಸ್ಯ ಹರೀಶ್‌ ಕುಮಾರ್‌ ನೇತೃತ್ವದಲ್ಲಿ 25,000ಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಪ್ರಾರ್ಥನೆ ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿರುವರು.

ನ.28ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5.30ರಿಂದ 7 ಗಂಟೆ ವರೆಗೆ ನಾಗಸ್ವರ ವಾದನ, 7ರಿಂದ 8ರ ವರೆಗೆ ಸಾತ್ವಿಕ ಸಂಗೀತ, ಬಳಿಕ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.

ನ. 29ರಂದು ಸರ್ವಧರ್ಮ ಸಮ್ಮೇಳನ

ಅಮೃತವರ್ಷಿಣಿ ಸಭಾಭವನದಲ್ಲಿ ನ.29ರಂದು ಸಂಜೆ 5 ಗಂಟೆಯಿಂದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ರಾಜ್ಯ ಗೃಹ ಸಚಿವ ಡಾ| ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬಳಿಕ ಸಂಶೋಧಕ ಡಾ| ಜಿ.ಬಿ.ಹರೀಶ, ಡಾ| ಜೋಸೆಫ್‌ ಎನ್‌.ಎಂ., ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಅವರಿಂದ ಉಪನ್ಯಾಸ ಹಾಗೂ 8.30ರಿಂದ ಭರತನಾಟ್ಯ ನೆರವೇರಲಿದೆ.

Advertisement

ನ. 30ರಂದು ಸಾಹಿತ್ಯ ಸಮ್ಮೇಳನ

ನ.30ರಂದು ಸಂಜೆ 5 ಗಂಟೆಯಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನ ನಡೆಯಲಿದ್ದು, ಬೆಂಗಳೂರು ಬಹುಶ್ರುತ ವಿದ್ವಾಂಸ ಶತಾವಧಾನೀ ಡಾ| ರಾ. ಗಣೇಶ ಉದ್ಘಾಟಿಸುವರು. ಲೇಖಕ, ಸಂಶೋಧಕ ಡಾ| ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆ ವಹಿಸುವರು. ಬಳಿಕ ಡಾ| ಪ್ರಮೀಳಾ ಮಾಧವ, ಡಾ| ಬಿ.ವಿ.ವಸಂತ ಕುಮಾರ್‌, ಪ್ರೊ| ಮೊರಬದ ಮಲ್ಲಿಕಾರ್ಜುನ ಅವರಿಂದ ಉಪನ್ಯಾಸ ನಡೆಯಲಿದೆ. ರಾತ್ರಿ 8.30ರಿಂದ ಶ್ರೀ ರಾಜೇಶ್‌ ಕೃಷ್ಣನ್‌ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿದೆ.

ಪ್ರತಿದಿನ ಸಂಜೆ 6.30ರಿಂದ ರಾತ್ರಿ 11ರ ವರೆಗೆ ವಸ್ತು ಪ್ರದರ್ಶನ ಮಂಟಪ ಹಾಗೂ ಅಮೃತವರ್ಷಿಣಿ ವೇದಿಕೆಯಲ್ಲಿ ಸಾಂಸ್ಕೃತಿಕ-ಸಂಗೀತ ಹಬ್ಬ ನೆರವೇರಲಿದೆ.

ಲಕ್ಷದೀಪೋತ್ಸವ ಉತ್ಸವಗಳು

ಲಕ್ಷದೀಪೋತ್ಸವ ಪ್ರಯುಕ್ತ ಮಂಜುನಾಥ ಸ್ವಾಮಿಗೆ ನ.26ರಂದು ಹೊಸಕಟ್ಟೆ ಉತ್ಸವ, 27ರಂದು ಕೆರೆ ಕಟ್ಟೆ ಉತ್ಸವ, 28ರಂದು ಲಲಿತೋದ್ಯಾನ ಉತ್ಸವ, 29ರಂದು ಕಂಚಿಮಾರು ಕಟ್ಟೆ ಉತ್ಸವ, 30ರಂದು ಗೌರಿಮಾರು ಕಟ್ಟೆ ಉತ್ಸವ (ಲಕ್ಷದೀಪೋತ್ಸವ).

ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ

ನ.26ರಿಂದ ಡಿ.1ರ ವರೆಗೆ ಧರ್ಮಸ್ಥಳದ ಪ್ರೌಢಶಾಲಾ ವಠಾರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ವಸ್ತುಪ್ರದರ್ಶನ ನಡೆಯಲಿದ್ದು, ನ.26ರಂದು ಬೆಳಗ್ಗೆ 10.30ಕ್ಕೆ ಎಸ್‌ಪಿ ಯತೀಶ್‌ ಎನ್‌. ಉದ್ಘಾಟಿಸಲಿರುವರು. ಕೃಷಿ, ಆರೋಗ್ಯ, ವಾಣಿಜ್ಯ, ಶಿಕ್ಷಣ, ಗ್ರಾಮೀಣ ಗುಡಿಕೈಗಾರಿಗಳಿಗೆ ಸಂಬಂಧಿಸಿದ 300ಕ್ಕೂ ಮಿಕ್ಕಿ ಮಳಿಗೆಗಳು ಇರಲಿವೆ.

ಸಮವಸರಣ ಪೂಜೆ

ಡಿ.1ರಂದು ಸಂಜೆ 6.30ರಿಂದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ. ಈ ವೇಳೆ ಜಿನಗಾನೋತ್ಸವ ನಡೆಯಲಿದೆ. ಹೇಮಾವತಿ ವೀ.ಹೆಗ್ಗಡೆ, ಪ್ರೊ| ಎಸ್‌.ಪ್ರಭಾಕರ್‌, ಡಿ.ಸುರೇಂದ್ರ ಕುಮಾರ್‌, ಡಿ.ಹರ್ಷೇಂದ್ರ ಕುಮಾರ್‌ ಸಹಿತ ಸಮಿತಿ ಸ್ವಾಗತ ಸಮಿತಿ ಪ್ರಮುಖರು ಉಪಸ್ಥಿತರಿರುವರು ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next